ಮತ್ತೊಮ್ಮೆ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ….
ಸ್ನೇಹಿತರೇ,
ಇಲ್ಲಿಗೆ ಸರಿಯಾಗಿ ಮೂರು ತಿಂಗಳ ಹಿಂದೆ ನನ್ನ ’ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಕೃತಿಯನ್ನು ನಿಮ್ಮ ಕೈಗಿತ್ತಿದ್ದೆ. ಅದಕ್ಕೆ ನೀವೆಲ್ಲ ತೋರಿದ ಅದ್ಭುತ ಪ್ರೋತ್ಸಾಹದ ಪ್ರತಿಫಲವೆಂಬಂತೆ ಈಗ ನನ್ನ ಮತ್ತೊಂದು ಹೊಸ ಕೃತಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಆ 117 ದಿನಗಳು
ಬದುಕಿನ ಏಕತಾನತೆಯ ಸಿಕ್ಕುಗಳಿಂದ ಬಿಡುಗಡೆ ಪಡೆಯುವ ಸಲುವಾಗಿ ಇಂಗ್ಲೆಂಡಿನ ಕಿನಾರೆಯಿಂದ ನ್ಯೂಜಿಲೆಂಡಿಗೆ ತಮ್ಮದೇ ಕಿರುನೌಕೆಯಲ್ಲಿ ಸುದೀರ್ಘ ಸಮುದ್ರಯಾನ ಹೊರಡುವ ಮರಲಿನ್-ಮರೈಸ್ ದಂಪತಿಗಳು ಪೆಸಿಫಿಕ್ ಸಾಗರದ ನಟ್ಟನಡುವೆ ತಿಮಿಂಗಿಲವೊಂದರ ದಾಳಿಯಿಂದ ತಮ್ಮ ನೌಕೆ ಕಳೆದುಕೊಂಡು ಅನಾಥರಾಗುವ ನಿಜಕತೆಯ ಸಾಹಸಮಯ ಕಥಾಹಂದರವಿರುವ ಕೃತಿ ಇದು.
ಚಿಕ್ಕ ರ‍್ಯಾಫ್ಟ್ ಮತ್ತು ರಬ್ಬರಿನ ಕಿರುದೋಣಿಯಲ್ಲಿ 117 ದಿನಗಳ ಕಾಲ ಬದುಕುಳಿಯಲು ಅವರು ನಡೆಸುವ ಹೋರಾಟ, ನಿಸರ್ಗದ ಜೊತೆಗಿನ ಹೊಂದಾಣಿಕೆ, ಹಸಿವಿನ ತರ್ಕ, ಬದುಕಿನ ಸಾಕ್ಷಾತ್ಕಾರ, ಆಧ್ಯಾತ್ಮದ ಸಂಘರ್ಷ, ಧಾರ್ಮಿಕ ಜಿಜ್ಞಾಸೆ ಹೀಗೆ ಎಲ್ಲಾ ಆಯಾಮಗಳನ್ನೂ ಹೊಕ್ಕು ಬರುವ ಅವರ ಕತೆ ರೋಚಕ ಕಥನವಷ್ಟೇ ಅಲ್ಲ, ಒಂದು ಸುಂದರ ಪರಿಸರ ಕಥನವೂ ಹೌದು.
“ಪುಸ್ತಕದ ಹಸ್ತಪ್ರತಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ” ಎನ್ನುವ ಹಿರಿಯ ಸಾಹಿತಿಗಳಾದ ರಹಮತ್ ತರೀಕೆರೆ ಸರ್, ತಮ್ಮ ಮುನ್ನುಡಿಯ ಮಾತುಗಳಲ್ಲಿ ಮುಂದುವರೆಯುತ್ತಾ, “ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸ ತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ಪೂರ್ಣಚಂದ್ರ ತೇಜಸ್ವಿಯವರು ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು” ಎನ್ನುತ್ತಾರೆ. ಅವರ ಕೊನೆಯ ವಾಕ್ಯ, ನನ್ನ ಬದುಕಿನಲ್ಲಿ ಸಿಕ್ಕ ಅತಿದೊಡ್ಡ ಕಮೆಂಟು!
ನೀವೂ ಈ ಕೃತಿಯನ್ನು ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಸ್ನೇಹಬಳಗಕ್ಕೂ ಈ ಕೃತಿಯ ಕುರಿತು ಪರಿಚಯಿಸಿ.
ಕಾವ್ಯಕಲಾ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಬೆಲೆ ರೂ. 250 (+ ಅಂಚೆವೆಚ್ಚ ರೂ.2೦). ಹಣವನ್ನು 8694912860 ಮೊಬೈಲ್ ನಂಬರಿಗೆ ಫೋನ್ ಪೇ ಮಾಡಿ ಸ್ಕ್ರೀನ್‌ಶಾಟ್ ಸಹಿತ, ನಿಮ್ಮ ವಿಳಾಸ ಕಳಿಸಿಕೊಟ್ಟರೆ ಅಂಚೆ ಮೂಲಕ ಪುಸ್ತಕ ತಲುಪಿಸಲಾಗುವುದು.
ಇದಕ್ಕಿಂತ ಹೆಚ್ಚಿಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ನನಗೆ ತಿಳಿದಿಲ್ಲ. ಯಾಕೆಂದರೆ, ನಿಮ್ಮ ಓದು ಮಾತ್ರವೇ ನನ್ನ ಗಾಡ್‌ಫಾದರ್, ಗಾಡ್‌ಮದರ್ ಎಲ್ಲಾ…..
ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ
– ಗಿರೀಶ್ ತಾಳಿಕಟ್ಟೆ, ಬರಹಗಾರರು
ಮೊ: 9844075016




