ತೊಗಲು ಬೊಂಬೆಗೆ ರೆಕ್ಕೆ: ರಹಮತ್ ತರೀಕೆರೆ

3 years ago

ತೊಗಲುಬೊಂಬೆಗೆ ರೆಕ್ಕೆ

ಕೆಲವು ವರುಷಗಳ ಹಿಂದೆ, ಬೆಳಗಲ್ ವೀರಣ್ಣ ನಮ್ಮ ಮನೆಗೆ ಅಚಾನಕ್ ಆಗಮಿಸಿದರು. ಉದ್ದನೆಯ ಬಿಳಿಜುಬ್ಬ ಮತ್ತು ಕಚ್ಚೆಪಂಚೆ ಧರಿಸಿದ್ದ ಆರಡಿ ಆಳು; ಎಂಬತ್ತಕ್ಕೆ ಅಡರುತ್ತಿರುವ ಮುಪ್ಪಿನಿಂದ ತುಸು ದಣಿದಂತೆ ಕಾಣುವ ಕಾಯ; ಉದ್ದನೆಯ ಗುಂಗುರು ಕೂದಲನ್ನು ಕಂಪನಿ ಕಲಾವಿದರಂತೆ ಹಿಂದಕ್ಕೆ ಬಾಚಿದ ತಲೆ; ಅಗಲವಾದ ಹಣೆಯಲ್ಲಿ ಮಂಕಾಗಿರುವ ವಿಭೂತಿ; ಕೊಂಚ ಉಬ್ಬಿದ ಹಲ್ಲುಗಳ ನಗುಮುಖ; ಮಾತಾಡಿದರೆ ನಿಶ್ಯಬ್ದ ಗವಿಯಲ್ಲಿ ಶಂಖಊದಿದಂತೆ ಹೊರಡುವ ಗಂಭೀರ ಸ್ವರ; ಕುಳಿತಲ್ಲೇ ರಂಗಭೂಮಿ ನಿರ್ಮಿಸಿಬಿಡುವ ಕುಶಲತೆ; ಇರುವ ಸೌಲಭ್ಯಗಳಲ್ಲೇ ನೆಮ್ಮದಿಸುವ ಸರಳತೆ- ಮೊದಲ ಮುಲಾಖತ್ತಿನಲ್ಲೇ ಒಡನಾಟಕ್ಕೆ ಸಿಲುಕಿದವರನ್ನು ಸೆಳೆದುಕೊಳ್ಳುವ ವಿಶಿಷ್ಟ ಚಹರೆ.

ಚಹತಿಂಡಿ ಉಪಚಾರಗಳಾದ ಬಳಿಕ ಒಂದು ರಂಗಗೀತೆ ಹಾಡಬೇಕೆಂದು ವಿನಂತಿಸಿದೆ.  ಅವರು ಕುಮಾರವ್ಯಾಸ ಭಾರತದಿಂದ ಕೆಲವು ಷಟ್ಪದಿಗಳನ್ನು ಅಭಿನಯಪೂರ್ವಕವಾಗಿ ಉಚ್ಚಸ್ವರದಲ್ಲಿ ಹಾಡತೊಡಗಿದರು.  ಮನೆಯೇ  ನಾದದಿಂದ ತುಂಬಿಹೋಯಿತು. ಗಾಂಧಿ ಮೇಲಿನ ಬೊಂಬೆಯಾಟದ ಹಾಡನ್ನು ಹಾಡಲು ಕೋರಿದೆ. ಅವರು ತಮ್ಮ ಹೆಸರಲ್ಲಿರುವ `ವೀರ’ರಸದ ಬಲದಿಂದ ಒಂದು ಪದ್ಯ ಹಾಡಿದರು:

ಮಂಗಳಮಯ ಉತ್ತುಂಗ ಹಿಮಾಲಯ ನೋಡಿ ಹೇಳಿದಂಥ ಕಥೆಯಾ/ಭಾರತಮಾತೆಯು ಶತಶತಮಾನದಲ್ಲಿ ನರಳಿದ ವ್ಯಥೆಯಾ/ತಾಯಿ ಬಂಧನವ ಬಿಡಿಸಲು ಸಿಡಿಯಿತು ಕೋಟಿಕಂಠದಲ್ಲಿ ಜಯಕಾರಾ/ಕೇಳುತಮ್ಮ ಕೇಳುತಂಗಿ ನಮ್ಮ ಸ್ವಾತಂತ್ರ್ಯ ಸಮರದಾ ಶ್ರೀಕಾರಾ

ಕಂಪನಿ ರಂಗಭೂಮಿ ಹಾಗೂ ಜನಪದ ರಂಗಭೂಮಿಗಳಲ್ಲಿ ಪಳಗಿರುವ ವೀರಣ್ಣನವರ ಕಂಠದಲ್ಲಿ, ಈ ರಂಗಗೀತೆ ಕಹಳೆಯಂತೆ ಮೊಳಗಿತು. ಈ ಗೀತೆಯಲ್ಲಿರುವ ಬಂಧನ-ವ್ಯಥೆ ಸಿಡಿಯುವುದು-ಸ್ವಾತಂತ್ರ್ಯ ಇತ್ಯಾದಿ ಪದಗಳು ಪ್ರಸಂಗದ ಸನ್ನಿವೇಶಕ್ಕಾಗಿ ಹುಟ್ಟಿದ್ದರೂ, ವೈಯಕ್ತಿಕವಾಗಿ ವೀರಣ್ಣನವರ ಹಾಗೂ ಅವರ ಕುಲಕಲೆಯ ಜೀವನಚರಿತ್ರೆಗೂ ಸಂಬಂಧಿಸಿವೆ ಅನಿಸಿತು.

ಮರಾಠಿ ಮನೆಮಾತಿನ `ಬೊಂಬೆರಾಮ’ `ಕಿಳ್ಳೇಕ್ಯಾತ’ ಎಂದು ಕರೆಯಲಾಗುವ ಸಮುದಾಯಕ್ಕೆ ಸೇರಿದ ವೀರಣ್ಣನವರು, ಕುಲಕಸುಬಾಗಿ ಬಂದಿದ್ದ ತೊಗಲುಬೊಂಬೆ ಆಟ ತ್ಯಜಿಸಿ, ಕಂಪನಿ ರಂಗಭೂಮಿಗೆ ತಮ್ಮ ಪ್ರಾಯದ ದಿನಗಳಲ್ಲಿ ವಲಸೆ ಹೋಗಿದ್ದವರು. ಆದರೆ ಅವರು ಆಕಸ್ಮಿಕವಾಗಿ ಮತ್ತು ನಾಟಕೀಯವಾಗಿ ವೃತ್ತಿರಂಗಭೂಮಿಯಿಂದ ತೊಗಲುಬೊಂಬೆಗೆ ಮರಳಬೇಕಾಯಿತು. ಇದು ಅವರ ಬಾಳಿನ ನಿರ್ಣಾಯಕ ತಿರುವಾಗಿತ್ತು. ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಂಚವಟಿ ಪ್ರಸಂಗದ ಪ್ರಯೋಗ ಮಾಡಿದರು. ಇದು ತೊಗಲುಬೊಂಬೆಯ ಕಲಾಪರಂಪರೆಯಲ್ಲಿ ಹೊಸಹಾದಿಯನ್ನೇ ತೆರೆಯಿತು; ಮುಖ್ಯವಾಗಿ ಗ್ರಾಮೀಣ ಸಮಾಜದಲ್ಲಿ ಅಭದ್ರತೆ ಮತ್ತು ಕೀಳರಿಮೆಯಿಂದ ನರಳುತ್ತಿದ್ದ ತೊಗಲುಬೊಂಬೆ ಆಟವನ್ನೂ ಕಲಾವಿದರನ್ನೂ ಶಾಪದಿಂದ ಬಿಡುಗಡೆ ಮಾಡಿತು. ಮುಂದೆ  ಬೊಂಬೆಗಳು ದೇಶ ವಿದೇಶಗಳನ್ನು ಸುತ್ತಾಡಿದವು. ಆದರೆ ಈ ಯಶಸ್ಸು ವೀರಣ್ಣನವರಿಗೆ ಸುಲಭದಲ್ಲಿ ದಕ್ಕಲಿಲ್ಲ.

20ನೇ ಶತಮಾನದ ಮೊದಲಾರ್ಧಲ್ಲಿ ವೃತ್ತಿ ರಂಗಭೂಮಿಯ ಬಗ್ಗೆ `ಅದು ಸಭ್ಯ ಗೃಹಸ್ಥರು ಪ್ರವೇಶಿಸುವ ಕಲೆಯಲ್ಲ’ ಎಂಬ ಅಘೋಷಿತ ಸಾಮಾಜಿಕ ಮನೋಭಾವವಿತ್ತು.  ಆದರೂ ಅದು ಮುಂದೆ ಎಲ್ಲ ಜಾತಿ ಧರ್ಮದ ಸಮುದಾಯಗಳು ತೊಡಗಿಕೊಳ್ಳುವ ಕಲೆಯಾಗಿ ಬದಲಾಯಿತು. ವೃತ್ತಿ ರಂಗಭೂಮಿ ಸಿನಿಮಾ ಉದ್ಯಮವಾಗಿ ರೂಪಾಂತರ ಪಡೆಯತೊಡಗುತ್ತಿದ್ದಂತೆ, ಅದರ ಸಾಮಾಜಿಕ ಶಾಪ ವಿಮೋಚನೆಯ ಕಾರ್ಯವೂ ಶುರುವಾಯಿತು. ಆದರೆ ವೃತ್ತಿರಂಗ ಭೂಮಿಗೆ ಸಿಕ್ಕ ಈ ಆಧುನೀಕರಣದ ಹೊಸಹುಟ್ಟು, ಅನೇಕ ಕುಲಕಲೆಗಳಿಗೆ ಅಥವಾ ಸಮುದಾಯ ರಂಗಭೂಮಿಗಳಿಗೆ ಸಿಕ್ಕಲಿಲ್ಲ. ತೊಗಲುಬೊಂಬೆಯು ರಾಮಾಯಣ ಮಹಾಭಾರತದ ಪ್ರಸಂಗಗಳ ಕಾರಣದಿಂದ `ಧಾರ್ಮಿಕ’ವಾಗಿದ್ದರೂ, ಪ್ರಾಣಿಚರ್ಮದ ಜತೆ ಸಂಬಂಧವಿದ್ದ ಕಾರಣದಿಂದಲೊ ಏನೊ, ಅಸ್ಪøಶ್ಯತೆಯಿಂದ ಮುಕ್ತವಾಗಲಿಲ್ಲ. ತಮ್ಮ ಸಾಂಪ್ರದಾಯಿಕ ಕಲೆಯ ಕಾರಣದಿಂದ ಸಾಮಾಜಿಕವಾಗಿ ದ್ವೀಪವಾಗಿ ಮುಂದುವರೆಯುವ ಇಂತಹ ಇಕ್ಕಟ್ಟನ್ನು ಗೊಂದಲಿಗರು, ಕಿನ್ನರಿಜೋಗಿಗಳು, ವೇಷಗಾರರರು, ಬುರ್ರಕಥೆಯವರು, ಜಾತಿಗಾರರು ಈಗಲೂ ಎದುರಿಸುತ್ತಿದ್ದಾರೆ.

ಕುಲಕಲೆಗಳಿಗೆ ಸಮುದಾಯದೊಳಗಿರುವ ವ್ಯಕ್ತಿವಿಶಿಷ್ಟ ಪ್ರತಿಭಾವಂತರು, ಹೊಸ ವೈಚಾರಿಕತೆ, ಆಧುನಿಕ ಪ್ರಜ್ಞೆ, ಆತ್ಮವಿಶ್ವಾಸ ಮತ್ತು ಪ್ರಯೋಗಶೀಲ ತುಡಿತದೊಂದಿಗೆ ಮರುಪ್ರವೇಶ ಮಾಡಿದರೆ, ಮರುಹುಟ್ಟು ಸಂಭವಿಸಬಲ್ಲದು; ಆಗದು ಕಲಾವಿದರು ಸ್ವತಃ ಸೃಜನಶೀಲಗೊಳ್ಳುವ ಮತ್ತು ತಮ್ಮ ಕುಲಕಲೆಯನ್ನು ಸಾಮಾಜಿಕ ಒಂಟಿತನದಿಂದ ಬಿಡುಗಡೆಗೊಳಿಸುವ ಯತ್ನವಾಗಬಲ್ಲದು. ತೊಗಲುಬೊಂಬೆಗೆ ವೀರಣ್ಣನವರು ಮಾಡಿದ ಪ್ರಯೋಗಗಳಲ್ಲಿ ಇಂತಹ ಮರುಹುಟ್ಟು ಸಂಭವಿಸಿತು. ಇದಕ್ಕಾಗಿ ಅವರು ಮಾಡಿದ ಕಾಯಕಲ್ಪದಲ್ಲಿ ಕೆಲವು ಕ್ರಾಂತಿಕಾರಿ ಅಂಶಗಳಿದ್ದವು. ರಂಗಪ್ರದರ್ಶನದ ಸ್ಥಳ, ಕಾಲ, ಪೋಷಕತ್ವ, ಪ್ರಸಂಗದ ವಸ್ತು ಮತ್ತು ಗೊಂಬೆಗಳ ಗಾತ್ರಗಳಲ್ಲಿ ಸಂಭವಿಸಿದ ಈ ಪಲ್ಲಟಗಳು ಕ್ರಾಂತಿಕಾರಕವಾಗಿವೆ. ಇವು ತೊಗಲುಬೊಂಬೆಗಳಿಗೆ ಹೊಸ ಜೀವದಾನ ಮಾಡಿದವಲ್ಲದೆ, ಅವುಗಳ ಚಲನೆಗೆ ಹೊಸ ರೋಡ್ ಮ್ಯಾಪನ್ನೂ ಒದಗಿಸಿದವು. ಇದರಿಂದ ಬೊಂಬೆಗಳಿಗೆ ಲೋಕತಿರುಗಲು ಹೊಸ ಕಾಲು ಅಥವಾ ಆಗಸದಲ್ಲಿ‌ಹಾರಲು ಹೊಸರೆಕ್ಕೆಗಳು ಮೂಡಿದವು.  ವೃತ್ತಿ ರಂಗಭೂಮಿಯಲ್ಲಿ ತೆರೆಯಮುಂದೆ ಅಭಿನಯಿಸುವ ನಟರಾಗಿದ್ದ ವೀರಣ್ಣ, ಈಗ ಬೊಂಬೆಗಳನ್ನು ಮುಂದೆಬಿಟ್ಟು ತಾವು ತೆರೆಯ ಹಿಂದೆ ಸರಿದರು. ಈ ಹಿಂಜರಿತವು ಅವರನ್ನೂ ಅವರ ಕಲೆಯನ್ನೂ ನಾಗರಿಕ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸಿತು.

ವೀರಣ್ಣನವರ ಕಲಾಪ್ರಯೋಗಗಳ ಅಥವಾ ತೊಗಲುಬೊಂಬೆಯ ರೂಪಾಂತರಗಳ ಹಿಂದೆ ಅವರ ವ್ಯಕ್ತಿಪ್ರತಿಭೆಯಿತ್ತು; ಅವರಿಗಿದ್ದ ಪರಂಪರೆಯ ಭದ್ರಬುನಾದಿಯಿತ್ತು. ಬಹುಮೂಲದಿಂದ ಬಂದ ಕಸುವಿನ ಧಾರೆಗಳು ಅವರಲ್ಲಿ ಏಕೀಭವಿಸಿದ್ದು ಕಾರಣವಾಯಿತು. ಎಷ್ಟೆ ಪರಂಪರೆಯ ಕಸುವಿದ್ದರೂ ಸೃಜನಶೀಲವಾದ ವ್ಯಕ್ತಿಪ್ರತಿಭೆಯೊಂದರ ಮಧ್ಯಪ್ರವೇಶವಿಲ್ಲದೆ ಕಲಾಲೋಕದಲ್ಲಿ ದೊಡ್ಡ ಪಲ್ಲಟಗಳು ಸಂಭವಿಸುವುದಿಲ್ಲ;  ಎಷ್ಟೇ ವ್ಯಕ್ತಿಪ್ರತಿಭೆಯಿದ್ದರೂ ಪರಂಪರೆಯಲ್ಲಿ ಆಳವಾಗಿ ಬೇರು ತಳೆಯದೆ ಮಾಡುವ ಪ್ರಯೋಗಗಳು ದೊಡ್ಡ ಗೆಲುವನ್ನು ಗಳಿಸುವುದಿಲ್ಲ. ಸಂಪ್ರದಾಯದ ಕಾಂಡವು ಆಧುನಿಕತೆ ಸಹವಾಸದಿಂದಲೂ ಚಾರಿತ್ರಿಕ ಒತ್ತಡದಿಂದಲೂ ಹೊಸ ಚಿಗುರನ್ನು ಕೊನರಿಸುತ್ತದೆ. ತೊಗಲುಬೊಂಬೆ ವಿಷಯದಲ್ಲಿ ವೀರಣ್ಣನವರ ವ್ಯಕ್ತಿಪ್ರತಿಭೆ, ಪ್ರಯೋಗಶೀಲತೆ ಮತ್ತು ಪರಂಪರೆಯ ಕಸುವುಗಳು ಹೊಸ ಹದದಲ್ಲಿ ಸಮನ್ವಯ ಗೊಂಡವು. ಇದಕ್ಕೆಲ್ಲ ಕಾರಣ, ವೃತ್ತಿರಂಗಭೂಮಿಯನ್ನೂ ಜನಪದ ಬಯಲಾಟಗಳನ್ನೂ ಹಾದು ಅವರು ತೊಗಲುಬೊಂಬೆಗೆ ಮರಳಿ ಬಂದಿದ್ದು. ವೀರಣ್ಣನವರಂತೆ ಈ ಮೂರು ರಂಗಭೂಮಿಗಳೊಳಗೆ ಹೊಕ್ಕಾಡಿ ಬಂದ ಇನ್ನೊಂದು ಪ್ರತಿಭೆ ಬಹುಶಃ ಕರ್ನಾಟಕದಲ್ಲಿಲ್ಲ.

ವೀರಣ್ಣನವರು ಮಾತುಕತೆಯ ನಡುವೆ ಹೇಳಿದರು: `ಸಾರೂ, ಬಡತನ ಬಹಳ ಕೆಟ್ಟದ್ದು. ಅದರಿಂದ ಅನೇಕ ಸಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿರೋದುಂಟು. ಆದರೆ ಕಲಾಜಗತ್ತಿನಲ್ಲಿ ಸಿಕ್ಕ ಬೆಲೆಬಾಳುವ ಅನುಭವ ನನ್ನನ್ನು ಉಳಿಸಿತು. ಶಾರದಾತಾಯಿ ನನಗೆ ಕಲಾವಿದ್ಯೆ ಕೊಟ್ಟಿದಾಳೆ. ನನಗೆ ವ್ಯವಹಾರ ಗೊತ್ತಿಲ್ಲ. ಕಲೆ ಗೊತ್ತಿದೆ. ಕಲೆ ನನ್ನ ಕೈಹಿಡೀತು.’

ಕುಲಕಲೆಯಿಂದ ಮುಜುಗರಕ್ಕೀಡಾಗುತ್ತಿದ್ದ ಸನ್ನಿವೇಶದಿಂದ ಕುಲಕಲೆಯು ಹೊಸ ಚಹರೆಯಲ್ಲಿ ಗೌರವ ತರುತ್ತಿರುವ ಸನ್ನಿವೇಶದ ನಡುವಣ ಘಟ್ಟದಲ್ಲಿ ವೀರಣ್ಣನವರು ಕಷ್ಟ ಪಟ್ಟಿದ್ದಾರೆ. ಈ ಕಷ್ಟದ ಫಲವಾಗಿ  ಮಾಗುವಿಕೆ ತಾಳ್ಮೆ ಪ್ರಸನ್ನತೆಯ ಗುಣಗಳು ಅವರ ವ್ಯಕ್ತಿತ್ವದಲ್ಲಿ ಅಡಕವಾಗಿವೆ. ದೇಶ ವಿದೇಶಗಳನ್ನು ತಿರುಗಿ ಕೀರ್ತಿಯನ್ನೂ ಜನಪ್ರೀತಿಯನ್ನೂ ಗಳಿಸಿದ್ದರೂ, ಸರಳತೆ ಮತ್ತು ಮುಗ್ಧತೆ ಕಳೆದುಹೋಗಿಲ್ಲ. ವ್ಯವಹಾರ ಜ್ಞಾನವಿಲ್ಲದ ಕಾರಣದಿಂದಲೊ ತನ್ನ ಮಿತಿಯ ಅರಿವಿನಿಂದ ಒದಗಿರುವ ನಮ್ರತೆಯ ದೆಸೆಯಿಂದಲೊ ಅವರು ಮತ್ತಷ್ಟು ಎತ್ತರದವರಾಗಿ ಕಾಣುತ್ತಾರೆ. ಅವರಿಗೆ ತಮಗೂ ತಮ್ಮ ಕಲೆಗೂ ಜನ ಮತ್ತು ಸರ್ಕಾರ ಕೊಟ್ಟಿರುವ ನೈತಿಕ ಬೆಂಬಲದ ಬಗ್ಗೆ ಕೃತಜ್ಞತೆಯಿದೆ. ಬಾಲ್ಯದಲ್ಲಿ ಪಟ್ಟಿರುವ ಕಷ್ಟ ಅನುಭವಿಸಿದ ಅಪಮಾನ ಅವರ ಮನಸ್ಸನ್ನು ಕಹಿ ಮಾಡಿದಂತಿಲ್ಲ. ಜಾತಿ ಮತ್ತು ಬಡತನದಿಂದ ಮುಖಾಮುಖಿ ಮಾಡಿದ ಅಪಮಾನವನ್ನು ಕಲಾತ್ಮಕ ಪ್ರಜ್ಞೆಯ ಮೂಲಕ ಗೆಲ್ಲುವುದರಿಂದ ಬರುವ ಆತ್ಮವಿಶ್ವಾಸವಿದೆಂದು ತೋರುತ್ತದೆ. ಅವರ ಬದುಕು, ಕಲೆಯಿಂದ ಅಪಮಾನವನ್ನು ಗೆದ್ದ ಕಲಾವಿದನ ಕಥೆ ಮಾತ್ರವಲ್ಲ, ಅಳಿವಿನಂಚಿಗೆ ಸರಿಯುತ್ತಿದ್ದ ಕಲೆಯನ್ನು ತನ್ನ ಪ್ರತಿಭೆ ಶ್ರದ್ಧೆ ಶ್ರಮದಿಂದ ಬದುಕಿಸಿದ ಗಾಥೆ ಕೂಡ.

ಆದರೆ ಆಧುನಿಕ ಸಮಾಜದ ಅಪೇಕ್ಷೆ ಮತ್ತು ಸರ್ಕಾರದ ನೆರವುಗಳು, ಕಲೆಯನ್ನು ಸರಕೀಕರಣ ಮಾಡಬಲ್ಲವು. ಇದಕ್ಕೆ ಸಾಕ್ಷಿ, ವೀರಣ್ಣನವರ ತಂಡವು ಡೆಂಗಿಸೊಳ್ಳೆಗಳನ್ನು ಮತ್ತು ಏಡ್ಸನ್ನು ಕುರಿತ ಪ್ರಸಂಗಗಳನ್ನು ಮಾಡುತ್ತಿರುವುದು. ಈಗ ಪೌರಾಣಿಕ ಧಾರ್ಮಿಕ ಪ್ರಸಂಗಗಳು ದೊರಕಿಸಿಕೊಡಲಾಗದ ಆದಾಯಗಳನ್ನು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಪ್ರಸಂಗಗಳು ದೊರಕಿಸಿಕೊಡುತ್ತಿವೆ. ಕಲೆ ಮತ್ತು ಆಧುನಿಕತೆಯ ಸಂಬಂಧದ ಒಂದು ವೈರುಧ್ಯವಿದು.

ವೀರಣ್ಣನವರು ಮಾತಾಡಲಿ ಹಾಡಲಿ, ಅಲ್ಲಿ ನಾಟಕೀಯತೆ ತುಂಬಿರುತ್ತದೆ. `ಮಾತನಾಡಿದರೆ ಹಾಡಿದಂತಿರಬೇಕು. ಹಾಡಿದರೆ ಮಾತನಾಡಿದಂತಿರಬೇಕು. ಇದೇ ರಂಗಭೂಮಿಯ ಗುಟ್ಟು’ ಎಂದವರು ಹಲವು ಸಲ ಹೇಳಿದರು. ಹಾಡುವಾಗ,  ಅಭಿನಯದ ತುಣುಕನ್ನು ತೋರಿಸುವಾಗ ಅವರ ಮುಖ ಅಪೂರ್ವ ಕಳೆಯಿಂದ ಪ್ರಜ್ವಲಿಸುತ್ತಿತ್ತು. ಮುಖದ ಈ ನಾಟಕೀಯ ಬದಲಾವಣೆಯನ್ನು ಲಾಡ್‍ಸಾಬ್ ಅಮೀನಗಡ, ಫ್ಲೋರಿನಾ, ಸುಭದ್ರಮ್ಮ ಮನ್ಸೂರ್ ಮುಂತಾದ ರಂಗಭೂಮಿ ಜನರ ಜತೆ ಮಾತುಕತೆ ಮಾಡುವಾಗಲೂ ಕಂಡಿರುವೆ. ರಂಗಭೂಮಿ ನೆನಪುಗಳು ದೈಹಿಕ ವಯಸ್ಸನ್ನು ಕಳೆದು ಕಲಾತ್ಮಕ ಯೌವನವನ್ನು ತುಂಬಿಕೊಡುತ್ತವೆ. ವೃದ್ಧ ಯಯಾತಿ ತನ್ನ ಮಗನ ಯೌವನವನ್ನು ಕಡವಾಗಿ ಪಡೆದುಕೊಂಡು ಹೊಸಬಾಳು ಬದುಕಿದ ಪುರಾಣದ ಕತೆಯಿದೆ. ಆದರೆ ವೀರಣ್ಣನವರು ತಮ್ಮ ಅನುಭವ ಪ್ರತಿಭೆ ಪ್ರಯೋಗಶೀಲತೆಗಳ ತೇಜಸ್ಸನ್ನು ಅಕಾಲ ಮುಪ್ಪಿಗೆ ಸಂದಿದ್ದ ತೊಗಲುಬೊಂಬೆಗೆ ಧಾರೆಯೆರೆದು ಹೊಸಜೀವ ತುಂಬಿದರು.  ತೊಗಲುಬೊಂಬೆಯ ಕಲಾಲೋಕಕ್ಕೆ ವೀರಣ್ಣನವರು ಮಾಡಿದ ಒಂದು ಕಾಲದ ನಿರ್ಗಮನ ಮತ್ತು ಪುನರಾಗಮನಗಳು, ತೊಗಲುಬೊಂಬೆಗೆ ಕೊಟ್ಟ ರೂಪಾಂತರ ಮತ್ತು ಬಿಡುಗಡೆಗಳು,  ಕಾರಂತರು ಯಕ್ಷಗಾನಕ್ಕೆ ಕೊಟ್ಟ ಕಾಯಕಲ್ಪದಷ್ಟೆ ಚಾರಿತ್ರಿಕ ಮಹತ್ವವನ್ನು ಪಡೆದಿವೆ. ಜನಪದ ಕಲೆಗಳು ಮತ್ತು ಕಲಾವಿದ ಸಮುದಾಯಗಳು ತಮ್ಮ ಶಾಪಗ್ರಸ್ತ ಸ್ಥಿತಿಯಿಂದ ಹೊರಬರಲು ಜನಪದ ರಂಗಭೂಮಿಯಲ್ಲೇ ಆಧುನಿಕವಾದ ಪಲ್ಲಟಗಳು ಸಂಭವಿಸಬೇಕೊ ಅಥವಾ ಇಂತಹ ಜನಪದ ರಂಗಭೂಮಿಯನ್ನು ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕೊ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

– ರಹಮತ್ ತರೀಕೆರೆ, ಸಂಶೋಧಕರು

Leave a Reply