ಕುಲ ಮದದ ಕೀಳುತನದ ದರ್ಶಕ

3 years ago

#visionary #inferiority #casteism #kulam #bookpromotion #karna #Mahabharata #rajappadalavayi #ಕುಲಂ #ರಾಜಪ್ಪದಳವಾಯಿ, #drama #ನಾಟಕ #ಕರ್ಣ

ನಾಟಕ: ಕುಲಂ

ರಚನೆ: ಡಾ.ರಾಜಪ್ಪ ದಳವಾಯಿ

ಪ್ರಕಾಶಕರು: ವಿದ್ಯಾನಿಧಿ ಪ್ರಕಾಶನ, ಗದಗ

ಬೆಲೆ: ₹60

ಮಹಾಭಾರತದ ದುರಂತ ಪಾತ್ರವಾದ ಕರ್ಣನ ಕುರಿತ ನಾಟಕ ಕುಲಂ. 18 ದೃಶ್ಯಗಳಲ್ಲಿ ಅಪಾರ ಪರಿಣಾಮ ಬೀರುವ ವಿಷಯಗಳನ್ನು 13 ಪಾತ್ರಗಳ ಮೂಲಕ ಅಡಕಗೊಳಿಸಲಾಗಿದೆ. ಕನ್ನಡ ಸಾಹಿತ್ಯವು ಅನೇಕ ಹಂತಗಳಲ್ಲಿ ವಿವಿಧ ಕಾಲಘಟ್ಟದಲ್ಲಿ ಜಾತಿ ಕುರಿತ ಪ್ರಶ್ನೆಗಳನ್ನು ಮುಖಾಮುಖಿಯಾಗಿದೆ. ಪಂಪನ `ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪ್ರಶ್ನಿಸುವ ಮೂಲಕ ಆರಂಭಗೊಂಡ ಜಾತಿ ಕುರಿತ ಸಂಕಥನವನ್ನು ಪ್ರಶ್ನಿಸುವ ಮನೋಭಾವ ವಚನಕಾರರು, ಸರ್ವಜ್ಞ, ಕೀರ್ತನಕಾರರಷ್ಟೇ ಅಲ್ಲದೆ ಆಧುನಿಕ ಸಂದರ್ಭದಲ್ಲೂ ವ್ಯಕ್ತವಾಗುತ್ತಿದೆ. ಇದೇ ವಿಷಯವನ್ನು ಡಾ. ರಾಜಪ್ಪ ದಳವಾಯಿಯವರು ನಾಟಕ ರಚನೆಗೆ ಬಳಸಿಕೊಂಡಿದ್ದು, ಕುಲ ಮತ್ತು ಯುದ್ಧಗಳ ಕುರಿತು ವಿಶಿಷ್ಟ ದೃಷ್ಟಿಕೋನವನ್ನು ಈ ಕೃತಿಯಲ್ಲಿ ಕಾಣಬಹುದು. ಪೌರಾಣಿಕ ನಾಟಕಗಳಲ್ಲಿ ಕರ್ಣನ ಪಾತ್ರಕ್ಕೆ ಕೆಲವೆಡೆ ಅವಕಾಶಗಳು ಸಿಕ್ಕಿವೆ. ಕುವೆಂಪು ಅವರು ಕಾನೀನ ಎಂಬ ನಾಟಕವನ್ನು ಕರ್ಣನ ಕುರಿತು ರಚಿಸಿದ್ದಾರೆ. ಕುಲಂ ಕರ್ಣನ ವೃತ್ತಾಂತವನ್ನೇ ಆಧುನಿಕ ದೃಷ್ಟಿಕೋನದ ಮೂಲಕ ಕಟ್ಟಿಕೊಟ್ಟ ಪ್ರಮುಖ ನಾಟಕ ಕೃತಿಯಾಗಿದೆ.

ಜಾತಿ ಶ್ರೇಷ್ಠತೆಯು ಅಹಂಕಾರವಾಗಿ, ಪ್ರತಿಷ್ಠೆಯಾಗಿ ಮತ್ತೆಮತ್ತೆ ಸಾಮಾಜಿಕ ನೆಲೆಯಲ್ಲಿ ವ್ಯಕ್ತವಾಗುವ – ಆ ಮೂಲಕ ಶ್ರೇಣೀಕರಣ ವ್ಯವಸ್ಥೆಯೊಂದು ಸೃಷ್ಟಿಯಾಗಿ ನಿರಂತರವಾಗಿ ಅಸಮಾನತೆ ಜಾರಿಯಲ್ಲಿರುವಂತಾಗುತ್ತದೆ. ಅದಕ್ಕೆ ಅಧಿಕಾರ, ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಬಳಸಿಕೊಳ್ಳುವುದನ್ನು ಕಾಣುತ್ತೇವೆ. ದ್ರೋಣನ ಕುಲಮದದ ಕಾರಣದಿಂದ ಹೊರಡುವ ಮಾತುಗಳು ಕರ್ಣನ ತ್ಯಾಗ, ಶೌರ್ಯ್ಗಳನ್ನು ಮೀರಿ ಬೆಳೆಯುವಂತದು. ಕುಲಹೀನನೆಂದು ಭಾವಿಸಲ್ಪಟ್ಟಿರುವ; ಆದರೆ ಕುಲೀನನೇ ಆಗಿರುವ ಕರ್ಣನನ್ನೂ ಬಾಧಿಸುವ ಕುಲವನ್ನು ದ್ರೋಣ, ಅಶ್ವತ್ಥಾಮ ಹಾಗೂ ಕರ್ಣರು ತಮ್ಮ ತಮ್ಮ ನೆಲೆಯಲ್ಲಿಯೇ ಪರಿಭಾವಿಸುತ್ತಾರೆ.

ಕರ್ಣ ಜಾತಿ ಮದವನ್ನು ಅನುಭವಿಸಿದವನು. “ಕೃಷ್ಣ- ಕುಂತಿಯರು ಹೇಳಿದಂತೆ, ಉನ್ನತ ಕುಲದಲ್ಲಿ ಜನಿಸಿ ಕೀಳು ಕುಲದಲ್ಲಿ ಬದುಕುತ್ತಿರುವ ನನ್ನ ಸ್ಥಿತಿಯೇ ಇಂತಾದರೆ, ಕೀಳಾಗಿಯೆ ಹುಟ್ಟಿ ಬದುಕುತ್ತಿರುವ ಜನರ ನೋವನ್ನು ಈ ಜಗತ್ತು ಅರ್ಥಮಾಡಿಕೊಳ್ಳಲಾರದು. ಅವರಿಗೆ ಮಾತ್ರ ಗೊತ್ತು ಅವರ ಎದೆಯ ನೋವು; ಮನದ ವ್ಯಥೆ” ಎಂಬ ಕರ್ಣನ ಮಾತುಗಳು ಜಾತಿಗ್ರಸ್ಥ ಸಮಾಜವು ಅನ್ಯಜಾತಿಯವರ, ಅಸ್ಪೃಶ್ಯರ ರಿಕ್ತಸ್ಥಿತಿಯನ್ನು, ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಲಾರದ್ದನ್ನು ಪ್ರತಿಪಾದಿಸುತ್ತವೆ.

ಕರ್ಣ-ಭೀಷ್ಮರ ಸಂಭಾಷಣೆಯಲ್ಲಿ ಕರ್ಣನು ಬದುಕಿನಲ್ಲಿ ಸಾಧ್ಯವಾಗದ ಸಮಾನತೆಯನ್ನು ಸಾವಿನಲ್ಲಾದರೂ ಗಳಿಸುವ ಸಾಧ್ಯತೆಯೆಡೆಗೆ ಯೋಚಿಸಿ ಈ ರೀತಿ ಹೇಳುತ್ತಾನೆ. “ಜೀವನದಲ್ಲಿ ಪ್ರೀತಿ ವಿಶ್ವಾಸಗಳಿಲ್ಲ, ಸಹನೆ, ಸಹಬಾಳ್ವೆಗಳಿಲ್ಲವೆಂಬ ಈ ದರಿದ್ರ ಜೀವನದಿಂದ ಹೊರತಾಗುವುದಕ್ಕೆ ಎಷ್ಟೋ ಬಾರಿ ಯುದ್ಧವೇ ಮೇಲಾಗಿ ಕಾಣುತ್ತಿದೆ. ನಿಮ್ಮ ಸತ್ಕುಲ, ನನ್ನ ಕೀಳ್ಕುಲಗಳೆರಡೂ ಸಮಾನವಾಗುವ ಒಂದೇ ವೇದಿಕೆಯೆಂದರೆ ರಣರಂಗ. ಬದುಕಿನಲ್ಲಿ ನಾವು ಸಾಧಿಸಿಕೊಳ್ಳದ ಸಮಾನತೆಯನ್ನು ಸಾವು ಸಾಧಿಸುವುದಾದರೆ ನನಗೆ ಅದೇ ಇರಲಿ”. ಕೀಳುಕುಲವೆಂದು ಭಾವಿಸಲ್ಪಟ್ಟವರ ಹತಾಶೆ, ಅಸಹಾಯಕತೆಗಳನ್ನು ಈ ಮಾತುಗಳು ಮಾರ್ಮಿಕವಾಗಿ ಧ್ವನಿಸುತ್ತವೆ.

ಕೃಷ್ಣ-ಕುಂತಿಯರ ದೃಶ್ಯಗಳಲ್ಲಿ ಕೃಷ್ಣನ ರಾಜಕಾರಣ, ಕುಟಿಲತೆ, ಕುಂತಿಯ ತಾಯಿ ವಾತ್ಸಲ್ಯ, ಮಕ್ಕಳೆಡೆಗಿನ ತುಡಿತಗಳೂ ವ್ಯಕ್ತವಾಗುತ್ತವೆ. ಕರ್ಣನ ತಮ್ಮ, ತಾಯಿ, ತಂದೆಯರು ಇರುವ ದೃಶ್ಯಗಳಲ್ಲಿ ಕರ್ಣನ ಕುಟುಂಬದ ಆರ್ದ್ರತೆ, ವಾತ್ಸಲ್ಯ, ಅವರ ಜೀವನದ ರಸಮಯ ಕ್ಷಣಗಳು, ಕೊನೆಯಲ್ಲಿ ಕರ್ಣನಿಗಾಗಿ ತುಡಿಯುತ್ತಿರುವ ಅವರ ಜೀವದ ಸೆಲೆಗಳು ಮನೋಜ್ಞವಾಗಿ ದೃಶ್ಯಗಳಲ್ಲಿ ಮೂಡಿಬಂದಿವೆ.

ಹದಿನಾಲ್ಕನೆ ದೃಶ್ಯದಲ್ಲಿ ಕರ್ಣನ ತಮ್ಮ ಶಿವಜಲ ಯುದ್ಧದ ಭೀಕರತೆಯನ್ನು ಕಂಡುಬಂದು ತನ್ನ ಮನೆಯಲ್ಲಿ ವರ್ಣಿಸುತ್ತಾನೆ. ಆಗಲೂ ತಮ್ಮ ಕುಡಿ ಯುದ್ಧದಲ್ಲಿ ಗೆದ್ದು ಬರಲೆಂದು ಹಾರೈಸುತ್ತಾರೆ.
“ಗೆದ್ದು ಬಾರಯ್ಯ ಬಾ ಬಾರೊ ಕಂದಯ್ಯ
ದೊರೆಯ ಗೆಳೆತನಕೆ ರಣಕೋದ ಕರ್ಣಯ್ಯ ||ಪ||
ಮೀನು ಈಜುವುದು ನೀರ ಎದುರಾಗಿ
ನೀನು ಬಿಲ್ಲಿಡಿದೆ ಶೂರ ಛಲಕಾಗಿ
ಬಾರಯ್ಯ ಬಾರೋ ನಮ್ಮ ಬೆಳಕಾಗಿ
ನಮ್ಮೆಲ್ಲರ ಬಾಳಿನ ಸೂರ್ಯಯ ನೀನಾಗಿ || 1 ||

ಉಳಿದು ಬಾರಯ್ಯ ಗೆಲುವಾ ತಾರಯ್ಯ
ಮತ್ತೆಂದೂ ಕಾಳಗಕೆ ಹೋಗಬೇಡಯ್ಯ
ಕೊಲ್ಲುವುದು ಕಾಳಗ ಉಳಿಯಾದು ಜೀವ
ದೊಡ್ಡೋರ ಸಹವಾಸ ಬೇಡಯ್ಯ ಬೇಡ || 2 ||

ಆದರೆ, ಯುದ್ಧದಲ್ಲಾಗುವುದು ಬೇರೆಯೇ. ಈ ಹಾಡಿನ ನಂತರದ ದೃಶ್ಯಗಳು ಕರ್ಣನ ಅವಸಾನದತ್ತ ಸಾಗುತ್ತವೆ. ಕರ್ಣನ ಸಂಬಂಧಿಗಳ ಆಶಯಗಳು ಚೂರುಚೂರಾಗಿ ಒಡೆದು ಹೋಗುತ್ತವೆ.

ಕುಂತಿ, ಕೃಷ್ಣ, ಅಶ್ವತ್ಥಾಮ, ಭೀಷ್ಮ, ಕೃಷ್ಣ ಹಾಗೂ ರಾಧೆ ಮೊದಲಾದವರು ಕರ್ಣನ ಕುರಿತು ಆಡುವ ಮಾತುಗಳು ನಾಟಕದಲ್ಲಿ ಪ್ರಧಾನವಾಗಿವೆ. ಕುಂತಿ, ಕೃಷ್ಣರ ದೃಷ್ಟಿಯಿಂದಲೇ ಕರ್ಣನ ಮತ್ತಷ್ಟು ಸಂಕೀರ್ಣತೆಗಳು ಅನಾವರಣವಾಗುತ್ತವೆ.

ಸಂಪತ್ ಕುಮಾರ್ ನಾ. ಕಲಬುರಗಿಯ ತಂಡಕ್ಕೆ ನಿರ್ದೇಶಿಸಿದ ಪ್ರಯೋಗದಲ್ಲಿ ಕೃಷ್ಣನ ಪಾತ್ರವನ್ನು ವಿಶಿಷ್ಟವಾಗಿ ತೆರೆಯ ಮೇಲೆ ತೋರಿಸಲು ಯತ್ನಿಸಿದ್ದರು. ಈ ಪ್ರಯೋಗದಲ್ಲಿ ಕರ್ಣ ಬೆಸ್ತರಲ್ಲಿ ಬೆಳೆದವನು ಎಂಬುದನ್ನು ಧ್ವನಿಸಲು ಸೆಟ್, ರಂಗಪರಿಕರಗಳಲ್ಲಿ ನೀರು, ಮೀನುಗಾರಿಕೆ, ಕೊಳಲು, ಬಿದಿರು, ಬೆತ್ತಗಳನ್ನು ಬಳಸಿಯೇ ರಂಗವಿನ್ಯಾಸವನ್ನು ರೂಪಿಸಲಾಗಿತ್ತು. ಇದರಲ್ಲಿ ಕೃಷ್ಣ ಕೊಳಲಿನ ಬದಲು ಬಿದಿರಿನ ಕೋಲು ಹಿಡಿದು, ಹೆಗಲ ಮೇಲೆ ಕಂಬಳಿ ಹೊದ್ದು, ಕರ್ಣನ ಮನಸನ್ನು ಛಿದ್ರಗೊಳಿಸುವುದು, ಕುಂತಿಯನ್ನು ಮುಂದಿಟ್ಟುಕೊಂಡು ಅರ್ಜುನನ ರಕ್ಷಣೆಗೆ ವ್ಯೂಹ ಹೂಡುವ ದೃಶ್ಯಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಜೊತೆಗೆ, ಇಸ್ಮಾಯಿಲ್ ಗೋನಾಳರ ರಂಗ ಸಂಗೀತ ಕೂಡ ನಾಟಕದ ಪ್ರಯೋಗಕ್ಕೆ ಪೂರಕವಾಗಿ ಬಳಕೆಯಾಗಿತ್ತು. ಕೃಷ್ಣನ ಕುಟಿಲ ನೀತಿ, ಅಶ್ವತ್ಥಾಮ, ದ್ರೋಣರ ಸ್ವಾರ್ಥ, ವಯೋವೃದ್ಧ ಭೀಷ್ಮನ ಅಸಹಾಯಕತೆ, ಕರ್ಣನ ಕುಟುಂಬದ ಆಶೋತ್ತರಗಳ ಛಿದ್ರವಾಗುವಿಕೆ, ಕರ್ಣ, ಏಕಲವ್ಯರ ಭೇಟಿ, ಕರ್ಣ-ಅಶ್ವತ್ಥಾಮನ ವಾಕ್ಸಮರದ ದೃಶ್ಯಗಳು ಈ ಕೃತಿಯಲ್ಲಿ ಅಪೂರ್ವ ಪರಿಣಾಮಗಳನ್ನು ಬೀರುತ್ತವೆ.

ಕರ್ಣನ ಸ್ವಗತಗಳು ಕುಲದ ಕಾರಣಕ್ಕೆ ಎದುರಾಗುವ ಅವಮಾನಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿವೆ. ಮಹಾಭಾರತ ಕಾಲಕ್ಕೆ ಕುಲದ ಕಾರಣದಿಂದ ಆಗುವ ಅವಮಾನ ಸೀಮಿತವಾಗಿಲ್ಲ ಮತ್ತು ಮುಗಿದು ಹೋಗಿಲ್ಲ. ಇಂದಿಗೂ ಕುಲ ಮದ ಜನರಲ್ಲಿ ಜನಜನಿತವಾಗಿದೆ. ಕುಲಂ ನಾಟಕ ಆದಿಮ ಮನಃಸ್ಥಿತಿ ಆಧುನಿಕೋತ್ತರದಲ್ಲೂ ಹೇಗೆ ಮುಂದುವರೆಯುತ್ತದೆ ಎಂಬ ಸಂಗತಿಯೆಡೆಗೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಕುಲದ ಕಾರಣಕ್ಕೆ ಅವಮಾನ ಮಾಡುವವರು, ಅವಮಾನಕ್ಕೆ ಒಳಗಾಗುವವರ ಎರಡೂ ಮನಃಸ್ಥಿತಿಗಳನ್ನು ಇಲ್ಲಿನ ಪಾತ್ರಗಳ ಸಂಘರ್ಷದಲ್ಲಿ ಕಾಣಬಹುದು.

ಅಶ್ವತ್ಥಾಮ ಮತ್ತು ಕರ್ಣರು ಮುಖಾಮುಖಿಯಾಗುವ ಹದಿಮೂರನೇ ದೃಶ್ಯದಲ್ಲಿ ಕುಲದ ವಿಷಯಗಳನ್ನು ಮುಖಾಮುಖಿಯಾಗಿಸಲಾಗಿದೆ. ಕುಲದ ಕಾರಣಕ್ಕೆ ಇಲ್ಲಿ ಹೇಳುವವರು, ಕೇಳುವವರು ಯಾರು ಎಂದು ನಿರ್ಧಾರಿತವಾಗುವ ಸಂಗತಿಯನ್ನು ಎರಡೂ ಕಡೆಯಿಂದ ಮಂಡಿಸಲಾಗಿದೆ. ಎರಡು ಕುಲಗಳು ಎರಡು ಧ್ರುವಗಳಂತೆ ಪರಿಗಣಿಸಲ್ಪಡುವ ಸಂಗತಿಯನ್ನು ಈ ದೃಶ್ಯದಲ್ಲಿ ಯಶಸ್ವಿಯಾಗಿ ಚಿತ್ರಿಸಲಾಗಿದೆ. ಅದಕ್ಕೆ ಸಾಮಾಜಿಕ ಕಟ್ಟುಪಾಡುಗಳು ಹೇಗೆ ಮನಃಸ್ಥಿತಿಯನ್ನು ರೂಪಿಸಿವೆ? ಎಂಬುದನ್ನು ಈ ದೃಶ್ಯದಲ್ಲಿ ಕಾಣಬಹುದು.

ಸಹದೇವ ಇಲ್ಲಿನ ದೃಶ್ಯಗಳಲ್ಲಿ ನಿರಂತರ ದುಃಖಿಸುತ್ತಾನೆ. ತ್ರಿಕಾಲ ಜ್ಞಾನದ ವರವನ್ನು ಪಡೆದವನು ಅವನು. ಮುಂದಿನ ಅವಘಡಗಳನ್ನು ತಡೆಯಲಾಗದ ಅಸಹಾಯಕತೆ ಅವನ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ. “ಹೇ ತ್ರಿಕಾಲಜ್ಞಾನದ ವರವೇ ಮೊದಲು ನಾಶವಾಗು. ನನ್ನನ್ನು ಸಾಮಾನ್ಯ ಮನುಷ್ಯನನ್ನಾಗಿ ಬದುಕಲು ಬಿಡು. ಭೂತದ ಪ್ರೇತ, ವರ್ತಮಾನದ ಉಸುಕು, ಭವಿಷ್ಯದ ನರಕ ಎಲ್ಲವೂ ಒಟ್ಟಿಗೆ ಏಕೀಭವಿಸಿವೆ. ಈ ನರಕದ ಕುಲುಮೆಯಲ್ಲಿ ಕ್ಷಣ ಕ್ಷಣವೂ ತ್ರಿಕಾಲದ ಸುತ್ತಿಗೆ ಹೊಡೆತಗಳಿಗೆ ಸಿಲುಕಿ ನುಜ್ಜುಗುಜ್ಜಾಗಿ ಹೋಗಿದ್ದೇನೆ” ಎನ್ನುವ ಅವನು, ಮುಂದುವರೆದು ಯುದ್ಧದ ಭೀಕರ ಪರಿಣಾಮಗಳು ಕೇವಲ ಯುದ್ಧದಲ್ಲಿ ಭಾಗವಹಿಸಿದವರದಷ್ಟೇ ಅಲ್ಲ. ಅದು ಎಲ್ಲರ ಪಾಲು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. “ಶಾಂತಿ ಕಾಪಾಡಬೇಕಿದ್ದ ಕೃಷ್ಣ ತನ್ನ ತಲೆ ಉಳಿಸಿಕೊಳ್ಳಲು ಈ ಯುದ್ಧ ನರಕವನ್ನು ಸೃಜಿಸಿದ. ದುರ್ಯೋಧನ ಕಾರಣನೆ? ನಾವೆ? ಒಂದೆ ಮಾತಿನಲ್ಲಿ ನಿರ್ಧರಿಸಲಾರದ ತರ್ಕವೇ ಕುರುಕ್ಷೇತ್ರ! ಇದು ನಮ್ಮೆಲ್ಲರ ಸೃಷ್ಟಿ” ಎಂಬ ಅವನ ಮಾತುಗಳ ಮೂಲಕ ಯುದ್ಧದ ಪಾಲುದಾರರುಗಳು ಯಾರೆಲ್ಲ ಎಂಬ ಸಂಗತಿ ಅನಾವರಣವಾಗುತ್ತದೆ. ಕುಲದ ಜೊತೆಗೆ ಯುದ್ಧಗಳ ಮಿತಿಗಳನ್ನು ಕೂಡ ಈ ಕೃತಿಯಲ್ಲಿ ಚಿತ್ರಿಸಲಾಗಿದೆ.

  • ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply