ಈ ಇಪ್ಪತ್ತೊದನೆಯ ಶತಮಾನದಲ್ಲಿಯೂ ಸಹ ಅತ್ಯಾಧುನಿಕ ತಂತ್ರಜ್ಞಾನಗಳ ನಡುವೆ ಬದುಕುತ್ತಿರುವ ಭಾರತೀಯರಿಗೆ ಕ್ರಿಶ್ತ ಪೂರ್ವದ ವೇದ ಉಪನಿಷತ್ತುಗಳ ಕಾಲದಲ್ಲಿ ಅಂಟಿದ ಜಾತಿಯ ಸೋಂಕು ಎರಡೂವರೆ ಸಾವಿರ ಕಳೆದರೂ ಬಿಡುಗಡೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣ ಮಹಿಳೆಯೊಬ್ಬಳು “ ಬ್ರಾಹ್ಮಣರಿಂದ ತಯಾರಾದ ಶುದ್ಧವಾದ ಸಾಂಬಾರ್ ಪುಡಿ” ಎಂಬ ಶೀರ್ಷಿಕೆಯಡಿ ಹಾಕಿದ ಚಿತ್ರವು ಹಲವು ಬಗೆಯ ಹೇಳಿಕೆ, ಟೀಕೆ, ವಾದ, ಪ್ರತಿ ವಾದಕ್ಕೆ ಕಾರಣವಾಗುವುದರ ಜೊತೆಗೆ ಬ್ರಾಹ್ಮಣರ ಸಂಘಟನೆಗೆ ಪರೋಕ್ಷವಾಗಿ ಕಾರಣವಾಯಿತು. ಇಷ್ಟು ಮಾತ್ರ ಸಾಲದೆಂಬಂತೆ ಕೆಲವು ಮಹಾ ಬ್ರಾಹ್ಮಣರು ಬ್ರಾಹ್ಮಣರಿಂದ ತಯಾರಾಗುವ ಆಹಾರ ಪದಾರ್ಥಗಳನ್ನು ( ಹಪ್ಪಳ, ಉಪ್ಪಿನ ಕಾಯಿ, ಸಂಡಿಗೆ, ಸಾಂಬಾರ್ ಪುಡಿ ಇತ್ಯಾದಿ) ಖರೀದಿಸುವಂತೆ ಸಾಮಾಜಿಕ ತಾಣಗಳಲ್ಲಿ ಫರ್ಮಾನು ಹೊರಡಿಸಿದರು.
ಭಾರತದ ನೆಲಮೂಲ ಸಂಸ್ಕೃತಿಯ ಬೇರು ತಿಳಿಯಲಾರದ ಮೂರ್ಖರು ಮಾತ್ರ ಇಂತಹ ಅವಿವೇಕದ ನಡೆಗಳನ್ನು ಸಮರ್ಥಿಸಿಕೊಳ್ಳಬಲ್ಲರು. ನಮ್ಮಲ್ಲಿ ಐವತ್ತು ವರ್ಷಗಳ ಹಿಂದೆ ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ, ಐಯ್ಯಂಗಾರ್ ಬೇಕರಿ, ವೀರಶೈವರ ಖಾನಾವಳಿ ಎಂಬ ಹೆಸರಿನಲ್ಲಿ ಜಾತಿ ಸೂಚಕ ಹೊಟೇಲ್ ಮತ್ತು ಬೇಕರಿಗಳಿದ್ದವು ನಿಜ. ಜಾತೀಯತೆ ಮತ್ತು ಅಸ್ಪೃಶ್ಯತೆ ಜಾರಿಯಲ್ಲಿದ್ದ ಕಾಲಘಟ್ಟದಲ್ಲಿ ಇಂತಹ ವ್ಯವಸ್ಥೆಯನ್ನು ಅಂದಿನ ಸಮಾಜ ಒಪ್ಪಿಕೊಂಡಿತ್ತು. ಈ ಆಧುನಿಕತೆಯ ಕಾಲಘಟ್ಟದಲ್ಲಿ ಎಲ್ಲಾ ಬಗೆಯ ಗಡಿ ರೇಖೆಗಳು ಅಳಿಸುತ್ತಾ, ವಿಶ್ವವೇ ಒಂದು ಹಳ್ಳಿಯಾಗುತ್ತಿರುವಾಗ ಗೌಡರ ಮಿಲಿಟರಿ ಹೋಟೆಲ್, ಬ್ರಾಹ್ಮಣರ ಶುದ್ಧ ಸಸ್ಯಾಹಾರಿ ಫಲಾಹಾರ ಮಂದಿರ, ಲಿಂಗಾಯತರ ಖಾನಾವಳಿ ಎಂಬ ಹೆಸರಿಡುವುದು ನಿಜಕ್ಕೂ ಮೂರ್ಖತನದ ಪರಮಾವಧಿ.
ಇಂದು ನಾವು ನಗರಗಳ ರೆಸ್ಟೋರೆಂಟ್ ಗಳಲ್ಲಿ ಸೇವಿಸುವ ಉಪಹಾರ ಅಥವಾ ಭೋಜನವನ್ನು ಸಿದ್ಧಪಡಿಸಿದವನು ಯಾವ ಜಾತಿ ಅಥವಾ ಯಾವ ಧರ್ಮದವನು ಎಂದು ಕೇಳಲು ಸಾಧ್ಯವೆ? ತಿಂಡಿ ಸರಬರಾಜು ಮಾಡುವ ಸಪ್ಲೈಯರ್ ಅಥವಾ ಮಾಲಿಕನ ಜಾತಿಯನ್ನು ಪ್ರಶ್ನಿಸುವವರನ್ನು ಇಂದಿನ ಸಮಾಜ ಅನಾಗರೀಕರೆಂದು ಪರಿಗಣಿಸುತ್ತದೆ. ಇಂದು ಬೆಂಗಳೂರು ನಗರ ಸೇರಿದಂತೆ ಬಹುತೇಕ ನಗರಗಳ ಹೊಟೆಲ್ ಗಳಲ್ಲಿ ಬಿಹಾರ, ಮಧ್ಯಪ್ರದೇಶ ಮತ್ತು ಈಶಾನ್ಯ ಭಾರತದ ರಾಜ್ಯಗಳ ಯುವಕರು ಅಡುಗೆ ಮನೆಯಲ್ಲಿ ದುಡಿಯುತ್ತಿದ್ದಾರೆ. ಅವರೆಲ್ಲರೂ ಬುಡಕಟ್ಟು ಜನಾಂಗದ ಸಮುದಾಯದವರು ಎಂಬುದು ವಿಶೇಷ.
ಭಾರತದಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ನಮ್ಮ ಆಹಾರ ಸಂಸ್ಕೃತಿ ಇತ್ತೇ ಹೊರತು, ಜಾತಿಗೆ ಅನುಗುಣವಾಗಿ ಇರಲಿಲ್ಲ. ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಬಯಲುಸೀಮೆಯ ಪ್ರದೇಶಗಳಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರಿನ ಊಟ ಕೇವಲ ಒಕ್ಕಲಿಗರ ಆಹಾರವಾಗಿಲ್ಲ. ಅದರ ಮೇಲೆ ಯಾವ ಗೌಡನ ಹೆಸರನ್ನು ಛಾಪಿಸಿಲ್ಲ. ಬಯಲುಸೀಮೆಯಲ್ಲಿ ಬದುಕುವ ಒಕ್ಕಲಿಗ, ಬಣಜಿಗ, ದಲಿತರೂ ಸೇರಿದಂತೆ ಬ್ರಾಹ್ಮಣರ ಮನೆಗಳಲ್ಲಿ ಮುದ್ದೆ ಊಟ ಸಾಮಾನ್ಯವಾಗಿದೆ.
ಇದೇ ರೀತಿಯಲ್ಲಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕದ ಜೋಳದ ರೊಟ್ಟಿ, ಫಲ್ಯ, ಶೇಂಗಾ ಚೆಟ್ನಿ, ಪುಂಡಿ ಪಲ್ಯ, ಮೊಸರು ಇಂತಹ ಆಹಾರ ಕೇವಲ ಲಿಂಗಾಯತರ ಆಹಾರ ಪದ್ಧತಿಯಾಗಿ ಉಳಿದಿಲ್ಲ. ಅಲ್ಲಿನ ಪ್ರತಿಯೊಂದು ಜಾತಿಯ ಆಹಾರ ಸಂಸ್ಕೃತಿಯಾಗಿದೆ, ಕೆಲವು ವಿಶೇಷ ಸಿಹಿ ತಿಂಡಿಗಳು ಆಯಾ ಊರಿನ ಜೊತೆ ಪ್ರಸಿದ್ಧಿ ಪಡೆದಿವೆಯೇ ಹೊರತು, ಜಾತಿಯ ಜೊತೆ ಗುರುತಿಸಿಕೊಂಡಿಲ್ಲ. ಧಾರವಾಡ ಪೇಡ, ಬೆಳಗಾವಿಯ ಕುಂದಾ, ಅಮೀನಘಡ ಮತ್ತು ಗೋಕಾಕದ ಕರದಂಟು, ಮೈಸೂರು ಪಾಕ್, ದಾವಣಗೆರೆಯ ಬೆಣ್ಣೆ ದೋಸೆ, , ಕರಾವಳಿಯ ಪ್ರದೇಶಗಳ ಮೀನು ಊಟ, ಹೈದರಾಬಾದ್ ಬಿರಿಯಾನಿ ಹೀಗೆ ಈ ಆಹಾರ ಪದಾರ್ಥಗಳನ್ನು ಯಾರೂ ಬೇಕಾದರೂ ತಯಾರಿಸಬಹುದು. ಇವುಗಳನ್ನು ತಯಾರಿಸುವವರ ಜಾತಿ ಯಾವುದೆಂದು ಯಾರೂ ಈವರೆಗೆ ಪ್ರಶ್ನಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆ ಆಧುನಿಕ ಜಗತ್ತಿನಲ್ಲಿ ಜಾತೀಯತೆಯ ಶ್ರೇಷ್ಠತೆಯ ವ್ಯಸನ ಏಕೆ ಮೂಡಿಬಂದಿತು? ಅರ್ಥವಾಗುತ್ತಿಲ್ಲ.
ಬ್ರಾಹ್ಮಣರಿಂದ ತಯಾರಾದ ಸಾಂಬಾರ್ ಪುಡಿಗೆ ಬ್ರಾಹ್ಮಣ್ಯದ ಶ್ರೇಷ್ಠತೆ ಹೇಗೆ ಬಂದಿತು? ಸಾಂಬಾರ್ ಪುಡಿಗೆ ಬಳಸಿದ ಮೆಣಸಿನಕಾಯಿ, ಮೆಣಸು, ಬೇಳೆಕಾಳು ಇತ್ಯಾದಿಗಳನ್ನು ಬೆಳೆದವನು ರೈತ, ಅದನ್ನು ಕುಯ್ಲು ಮಾಡಿ, ಶುದ್ದೀಕರಿಸಿದವರು ದಲಿತ ಹಾಗೂ ಹಿಂದುಳಿದ ವರ್ಗಗಳ ಕೂಲಿ ಕಾರ್ಮಿಕರು. ಅವರೆಲ್ಲಾ ತಮ್ಮ ನೆತ್ತರನ್ನು ಬೆವರಾಗಿ ಹರಿಸಿದ ಪರಿಣಾಮ ಸಾಂಬಾರು ಪದಾರ್ಥಗಳು ಬ್ರಾಹ್ಮಣರ ಕೈಗೆ ನಿಲುಕಿದವು. ನೈಜ ಸ್ಥಿತಿ ಹೀಗಿರುವಾಗ ಇದನ್ನು ಬ್ರಾಹ್ಮಣರ ಪರಿಶುದ್ಧ ಸಾಂಬಾರ್ ಪುಡಿ ಎಂದು ಹೇಗೆ ಕರೆಯಲು ಸಾಧ್ಯ?
ಸಾಂಬಾರ್ ಗೆ ಬಳಸುವ ಅಡುಗೆ ಉಪ್ಪನ್ನು ತಯಾರಿಸುವವರು ತಮಿಳುನಾಡು ಹಾಗೂ ಗುಜರಾತಿನ ಕಡಲ ತೀರದ ದಲಿತರು. ಅವರ ಬೆವರಿನ ಶ್ರಮದ ಉತ್ಪಾದನೆಗಳ ಮೇಲೆ ಬ್ರಾಹ್ಮಣ್ಯದ ಹೆಸರು ಟಂಕಿಸುವ ಕ್ರಿಯೆಯನ್ನು ಅವಿವೇಕತನ ಎನ್ನಬಹುದೇ ಹೊರತು, ಪರಮ ಶ್ರೇಷ್ಠ ಕಾರ್ಯ ಎಂದು ಕರೆಯಲಾಗದು.
ತಮಿಳುನಾಡಿನ ತೂತ್ತುಕುಡಿ ಮತ್ತು ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಂ ಕಡಲ ತೀರದಲ್ಲಿ ಬೇಸಿಗೆಯ ದಿನಗಳಲ್ಲಿ ಬೆಂಕಿಯ ಮಳೆ ಸುರಿಯುವ ಬಿಸಿಲಿನಲ್ಲಿ ಉಪ್ಪು ತಯಾರಿಸುವ ಘಟಕಗಳಲ್ಲಿ ದುಡಿಯುವ ಪುರುಷರು ಮತ್ತು ಮಹಿಳೆಯರನ್ನು ನೋಡುವಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ಅನ್ನದ ಗಂಜಿ ಸೇವಿಸುತ್ತಾ, ಪ್ರತಿ ಹತ್ತು ಹದಿನೈದು ನಿಮಿಷಕ್ಕೆ ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಇಡಲಾದ ನೀರನ್ನು ಕುಡಿಯುತ್ತಾ ದುಡಿಯುವ ಈ ಕಾರ್ಮಿಕರು ಎಂದಿಗೂ ತಾವು ತಯಾರಿಸಿದ ಉಪ್ಪಿನ ಮೇಲೆ ತಮ್ಮ ಹೆಸರಿನ ಅಥವಾ ಅಸ್ತಿತ್ವದ ಮುದ್ರೆ ಒತ್ತಿಲ್ಲ. ಭಾರತೀಯ ಸಂಸ್ಕೃತಿ ಕುರಿತು ಪುಂಖಾನುಪುಂಖವಾಗಿ ಉಪದೇಶಿಸುವ ಮತ್ತು ಜಾತಿಯ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಮಾನಸಿಕ ರೋಗಿಗಳಿಗೆ ಈ ಸತ್ಯದ ಅರಿವಿಲ್ಲ.
ಕ್ರಿಸ್ತಪೂರ್ವ ಭಾರತದಲ್ಲಿ ಶಾಕ್ಯ ಬುಡಕಟ್ಟು ಜನಾಂಗದ ರಾಜಕುಮಾರ ಸಿದ್ಧಾರ್ಥನು ಹಿಂಸೆ ಮತ್ತು ಯುದ್ಧವನ್ನು ವಿರೋಧಿಸಿದ ಏಕೈಕ ಕಾರಣದಿಂದ ಶಾಕ್ಯರ ಸಂಘದಿಂದ ಗಡಿಪಾರು ಶಿಕ್ಷೆಗೆ ಒಳಗಾದಾಗ ಅವನಿಗೆ ಇದ್ದ ಅಂತಿಮ ಮಾರ್ಗ ಭಿಕ್ಷಾನ್ನ ಮತ್ತು ಭಿಕ್ಷಾಪಾತ್ರೆ ಮಾತ್ರ. ಇದನ್ನು ನಂಬಿ ಅವನು ಅಂದಿನ ದಿನಗಳಲ್ಲಿ ನೇಪಾಳ ಬಳಿಯ ಕಪಿಲವಸ್ತುವಿನಿಂದ ಆರನೂರು ಐವತ್ತು ಕಿಲೊಮೀಟರ್ ದೂರವಿರುವ ಇಂದಿನ ಬಿಹಾರದ ರಾಜಗೃಹ ( ರಾಜ್ ಗೀರ್) ಪಟ್ಟಣವನ್ನು ಕಾಲ್ನಡಿಗೆಯಲ್ಲಿ, ಗಂಗಾನದಿಯನ್ನು ದಾಟುವುದರ ಮೂಲಕ ತಲುಪಿದ್ದನು. ಅವನ ಹಸಿವು ಮತ್ತು ನೀರಡಿಕೆಯನ್ನು ಹಿಂಗಿಸಿ ಜೀವವನ್ನು ಕಾಪಾಡಿದ್ದು ಜಾತಿಯನ್ನು ಮೀರಿದ ಭಿಕ್ಷಾನ್ನ ಎಂಬುದನ್ನು ನಾವು ಮರೆಯಲಾಗದು.
ಭಾರತದಲ್ಲಿ ವ್ಯಕ್ತಿಯೊಬ್ಬ ಯಾವ ಜಾತಿಗೆ ಸೇರಿರಲಿ, ಅವನು ಬದುಕಿನಲ್ಲಿ ಸೋತಾಗ ಅಥವಾ ವಿಮುಕ್ತನಾದಾಗ ಇಲ್ಲವೇ ವೈರಾಗಿಯಾದಾಗ ಅವನಿಗೆ ಬದುಕಲು ಇದ್ದ ಏಕೈಕ ಮಾರ್ಗ ಭಿಕ್ಷಾನ್ನ ಅಥವಾ ಭಿಕ್ಷೆಯಾಗಿತ್ತು. ಅವನು ಮನೆಯ ಮುಂದೆ ನಿಂತು ಕೂಗಿ ಕರೆದದ್ದು ಅಮ್ಮಾ ಎಂಬ ಶಬ್ದವೇ ಹೊರತು ಅಯ್ಯಾ ಅಥವಾ ಅಪ್ಪಾ ಎಂಬ ಶಬ್ದವಲ್ಲ.
ಏಕೆಂದರೆ, ಭಾರತೀಯ ಸಂಸ್ಕೃತಿಯಲ್ಲಿ ಅಮ್ಮಾ ಎಂಬ ಶಬ್ದಕ್ಕೆ ಈವರೆಗೆ ಜಾತಿಯ ಮತ್ತು ಧರ್ಮದ ಸೋಂಕು ಅಂಟಿಲ್ಲ. ಭಾರತದ ಎಲ್ಲಾ ಭಾಷೆಗಳಲ್ಲಿಯೂ ಹೆತ್ತೊಡಲಿಗೆ ಅಮಾ ಎಂಬ ಹೆಸರು ಹೊರತು ಪಡಿಸಿದರೆ ಬೇರೆ ಶಬ್ದವಿಲ್ಲ. ಹಾಗಾಗಿ ಯಾವೊಬ್ಬ ಭಿಕ್ಷಕನೂ ತನಗೆ ಭಿಕ್ಷೆ ನೀಡುವವರು ಯಾವ ಜಾತಿಯವರು ಎಂದು ಪ್ರಶ್ನೆ ಕೇಳುವುದಿಲ್ಲ. ಅವನ ಅನ್ನದ ಬಟ್ಟಲಿಗೆ ಆಹಾರ ಅಥವಾ ಆತನ ಹೆಗಲ ಮೇಲಿನ ಜೋಳಿಗೆಗೆ ಅಕ್ಕಿ, ಜೋಳ, ರಾಗಿ ಹಾಕುವವಳು ಒಬ್ಬ ತಾಯಿಯಾಗಿರುತ್ತಾಳೆ. ಭಾರತದ ನೆಲದ ಸಂಸ್ಕೃತಿಯಲ್ಲಿ ತಾಯಿ ಎಂಬ ಜೀವ ಜಾತಿಯ ಸೂತಕದಿಂದ ಹೊರಗಾದವಳು. ಅದೇ ರೀತಿ ನಾವು ಸೇವಿಸುವ ಆಹಾರವು ಜಾತಿ ಮತ್ತು ಧರ್ಮದ ಸೋಂಕಿನಿಂದ ಹೊರತಾದುದು.
ಈ ನೆಲಮೂಲ ಸಂಸ್ಕೃತಿ ಕಲಿಯಲು ವ್ಯಕ್ತಿಯೊಬ್ಬನಿಗೆ ಯಾವ ಬ್ರಾಹ್ಮಣ್ಯ ಅಥವಾ ಪಾಂಡಿತ್ಯವೂ ಬೇಕಾಗಿಲ್ಲ. ನಾವು ಉಸಿರಾಡುವ ಗಾಳಿಗೆ, ಹರಿಯುವ ನೀರಿಗೆ ಮತ್ತು ಉರಿಯುವ ಅಗ್ನಿಗೆ ಜಾತಿ, ಧರ್ಮದ ಹಂಗಿಲ್ಲ ಎಂಬ ಕನಿಷ್ಠ ಜ್ಞಾನವಿದ್ದರೆ ಸಾಕು. ಅಂತಹವನು ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗೆ, ಕುರುಬ, ದಲಿತ ಇತ್ಯಾದಿ ಜಾತಿಗಳನ್ನು ಮೀರಿದ ಅಪ್ಪಟ ಮನುಷ್ಯನಾಗಿ ಬದುಕಲು ಸಾಧ್ಯವಿದೆ. ಅಂತಹ ಬದುಕನ್ನು ಬದುಕಿ ತೋರಿಸಿದ ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ನಮಗೆ ಇಂದಿಗೂ ಮಾದರಿಯಾಗಿದ್ದಾರೆ.
ತಿನ್ನುವ ಅನ್ನಕ್ಕೆ ಜಾತಿಯ ಲೇಪನ ಹಚ್ಚುವವರು ನನ್ನ ದೃಷ್ಟಿಯಲ್ಲಿ ಮನುಷ್ಯರಲ್ಲ. ಈ ಕಾರಣದಿಂದಾಗಿ ಡಾ. ಅಂಬೇಡ್ಕರ್ ಅವರು ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವಾಗ ಭಾರತದಲ್ಲಿ ಹರಿಯುವ ನದಿಗಳ ಮೇಲಿನ ಹಕ್ಕನ್ನು ಯಾವ ರಾಜ್ಯಗಳಿಗೂ ನೀಡದೆ ಕೇಂದ್ರ ಸರ್ಕಾರದ ಅಧೀನದಲ್ಲಿರುವಂತೆ ನೋಡಿಕೊಂಡರು. ಬಾಲ್ಯದಲ್ಲಿ ಕುಡಿಯುವ ನೀರಿಗಾಗಿ ಅವರು ಜಾತಿಯ ಕಾರಣಕ್ಕಾಗಿ ಅನುಭವಿಸಿದ ಅಪಮಾನ ಅವರ ನೆನಪಿನಲ್ಲಿತ್ತು.
– ಡಾ.ಎನ್.ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



