ಮಲ್ಲಾಪುರ ಬಳಿ ಸಂಭವಿಸಿದ ಭೀಕರ ಅಪಘಾತ: ಒಂದೇ‌ ಕುಟುಂಬದ ನಾಲ್ವರು ದುರ್ಮರಣ

3 years ago

#terrible #accident #Mallapur #Four #members #same #family #died

ಚಿತ್ರದುರ್ಗ: ಬೆಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಚಿತ್ರದುರ್ಗದ ಜಿಲ್ಲೆಯ ಮಲ್ಲಾಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ‌ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ  ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರಿನಲ್ಲಿದ್ದ ಕುಟುಂಬ ಹೊಸಪೇಟೆ ಕಡೆಯಿಂದ ತುಮಕೂರಿಗೆ ಹೋಗುತ್ತಿದ್ದು ಮೃತಪಟ್ಟವರನ್ನು ಶಂಸುದ್ದಿನ್ (40) ಮಲ್ಲಿಕಾ (37) ಖಲೀಲ್(42), ತಬ್ರೇಜ್ (13) ಎಂದು ಗುರುತಿಸಲಾಗಿದೆ. ಮಕ್ಕಳಾದ ನರ್ಗೀಸ್, ರೆಹನ್, ರೆಹಮಾನ್‌ಗೆ ಗಂಭೀರ ಗಾಯಗಳಾಗಿವೆ.

ಹೆದ್ದಾರಿಯಲ್ಲಿ ಕಾರು ನಿಂತಿದ್ದುದು ಗಮನಿಸದೆ ಅತಿ ವೇಗವಾಗಿ ಬಂದ ಪರಿಣಾಮ ಕಾರು ನಿಯಂತ್ರಿಸಲಾಗದೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿ, ನಾಲ್ವರ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಹೆದ್ದಾರಿಯಲ್ಲಿ ಪ್ರತಿವಾರ ಇಂಥ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಹೆಚ್ಚಾಗಿ ಹೆದ್ದಾರಿಯಲ್ಲೇ ಲಾರಿ ಸೇರಿದಂತೆ ದೊಡ್ಡ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇವು ನಿಂತಿರುವುದು ತಿಳಿಯದೆ ವೇಗವಾಗಿ ಬರುವ ಕಾರುಗಳು ಡಿಕ್ಕಿಯಾಗಿ ಹಲವು ಜೀವಹಾನಿಯಾಗಿವೆ. ಇಂಥ ವಾಹನಗಳನ್ನು ಹೆದ್ದಾರಿಯಿಂದ ತೆರವು ಮಾಡಬೇಕು ಹಾಗೂ ನಿಲ್ಲಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಾಲಕ ಸಾವು: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಗ್ಯಾಸ್ ಲಾರಿ ಮತ್ತು ಓಮ್ನಿ ವಾಹನ ನಡುವೆ ಅಪಘಾತ ಸಂಭವಿಸಿ ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಚಿತ್ರದುರ್ಗದ ತಮಟುಕಲ್ಲಿನ ನಿವಾಸಿ ಎಂದು ತಿಳಿದುಬಂದಿದೆ. ರಾಮಗಿರಿಗೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Leave a Reply