ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ಪೊಲೀಸರು, ಪ್ರಭಾವಿಗಳ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡುತ್ತಿದ್ದ ಸೈಬರ್ ಚೋರರು ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರು ಬಳಸಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಫೋಟೋ, ಹೆಸರು ಬಳಸಿ ನಕಲಿ ಫೇಸ್ಬುಕ್ ಖಾತೆ ತೆರೆದಿರುವ ಸೈಬರ್ ಚೋರರ ವಿರುದ್ಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ದಾಖಲಿಸಿದ್ದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೈಬರ್ ಕಳ್ಳರು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಹೆಸರು ಮತ್ತು ಫೋಟೋವನ್ನು ಬಳಸಿಕೊಂಡು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ಸಲ್ಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಸೈಬರ್ ಪೊಲೀಸರು ಖಾತೆಯನ್ನು ಕ್ಲೋಸ್ ಮಾಡಿಸಿದ್ದು ಆರೋಪಿಗಳಿಗಾಗಿ ತಲಾಶ್ ಶುರು ಮಾಡಿದ್ದಾರೆ. ಗವರ್ನರ್ ಹೆಸರಿನಲ್ಲಿ ನಕಲಿ ಖಾತೆ ತೆರೆಯುವ ಉದ್ದೇಶವೇನು? ಈ ನಕಲಿ ಖಾತೆಯಿಂದ ಯಾರಿಗಾದರೂ ಸಮಸ್ಯೆಯಾಗಿದೆಯಾ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವಜೂಭಾಯಿ ವಾಲಾ ಅವರ ಬಳಿಕ ರಾಜ್ಯದ 19ನೇ ರಾಜ್ಯಪಾಲರಾಗಿ ನೇಮಕಗೊಂಡ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಜುಲೈ 6, 2021 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡು 2021 ರ ಜುಲೈ 11 ರಂದು ಅಧಿಕಾರ ವಹಿಸಿಕೊಂಡರು.
ಎನ್‌ಡಿಎ ಸರಕಾರದಲ್ಲಿ 2014 ರಿಂದ 2021 ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ನಗ್ಡಾದಲ್ಲಿ 1948ರ ಮೇ 18ರಂದು ದಲಿತ ಕುಟುಂಬದಲ್ಲಿ ಜನಿಸಿದ ಗೆಹ್ಲೋಟ್, ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದರು. ಡಾ. ಬಿಆರ್ ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಗೌರವಿಸಿದೆ.




