ಮೇಲಿನ ಎರಡು ಫೋಟೊಗಳಲ್ಲಿ ವ್ಯತ್ಯಾಸ ಹೆಚ್ಚೇನೂ ಕಾಣುವುದಿಲ್ಲ. ಜೊತೆಗೆ, ಎರಡೂ ಕಡೆ ತಪ್ಪು ಅಥವಾ ಅಸಂಬದ್ಧ ಅನ್ನುವಂತದ್ದು ಸಹಾ ಏನೇನೂ ಇಲ್ಲ; ಸಹಜ ಮತ್ತು ಆರೋಗ್ಯಕರ ಮನಸುಗಳಿಗೆ. ಆದರೆ ಮೊದಲನೇ ಫೋಟೊವನ್ನೆ ನೆಪವಾಗಿಟ್ಟುಕೊಂಡು, ಭಕ್ತರು ಇಷ್ಟು ದಿನ ನೆಹರೂ ಅವರ ತೇಜೋವಧೆ ಮಾಡುತ್ತಲೇ ಬಂದರು. ಲೇಡಿ ಎಡ್ವಿನಾ ಬ್ಯಾಟನ್ ಹಾಗೂ ನೆಹರೂ ನಡುವಿನ ಉದಾತ್ತ ಸ್ನೇಹ, ವಿಶ್ವಾಸ, ಪರಿಶುದ್ಧ ಕಾಳಜಿಗಳು ಭಕ್ತರ ಪಾಲಿಗೆ ನಿಲುಕುವಂತದ್ದಲ್ಲ. ಆದರೆ ಈ ಫೋಟೊ ಇಟ್ಟುಕೊಂಡು ನೆಹರೂ ಅವರನ್ನು ಟ್ರೋಲ್ ಮಾಡುವ ಭಕ್ತರಿಗೆ ಅನ್ಯಾಯವಾಗಿ ಮೋದಿಯವರೇ ಅಡ್ಡಗಾಲು ಹಾಕಿದಂತಾಗಿದೆ. ನೆಹರೂ ಅವರ ಆ ಫೋಟೊಕ್ಕೆ ಪ್ರತಿಯಾಗಿ, ಮೋದಿಯವರ ಈ ಫೋಟೊ ಬಿಸಾಕಿದರೆ ಅವರು ವಿಧಿಯಿಲ್ಲದೆ ಬಾಯ್ಮುಚ್ಚಿಕೊಳ್ಳಬೇಕಾಗುತ್ತದೆ.
ಅಂದಹಾಗೆ, ತಮ್ಮ ಈ ಭೇಟಿಯ ಸವಿನೆನಪಿಗಾಗಿ ಮೋದಿಯವರು ಶ್ರೀಮತಿ ಜಿಲ್ ಬೈಡನ್ ಅವರಿಗೆ ಬರೋಬ್ಬರಿ ಏಳೂವರೆ ಕ್ಯಾರೆಟ್ಟಿನ ವಜ್ರದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟಿದ್ದು ನಮಗೆಲ್ಲ ಗೊತ್ತಿದೆ. ಆದರೆ, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ತರುವಾಯ ತಮ್ಮ ಇಂಗ್ಲೆಂಡಿನ ತವರು ನೆಲಕ್ಕೆ ವಾಪಾಸು ಹೋಗುವ ಸಂದರ್ಭ ಎದುರಾದಾಗ ನೆಹರೂ ಅವರಿಗೆ ತಮ್ಮ ಸ್ನೇಹದ ಪ್ರತೀಕವಾಗಿ ಏನಾದರೊಂದು ಉಡುಗೊರೆ ಕೊಡಬೇಕೆಂದು ಶ್ರೀಮತಿ ಎಡ್ವಿನಾ ಬ್ಯಾಟನ್ ಅವರಿಗೆ ಅನ್ನಿಸಿತ್ತು. ಆಗ ಅವರಿಗೆ ತಾವು ತೊಟ್ಟಿದ್ದ ಉಂಗುರವೇ ಅದಕ್ಕೆ ಸೂಕ್ತೆವೆನಿಸಿತು. ಆದರೆ ತಾನು ಹಾಗೆ ಉಡುಗೊರೆ ಕೊಟ್ಟರೆ ನೆಹರೂ ಖಂಡಿತ ಸ್ವೀಕರಿಸಲಾರರು ಎಂಬುದೂ ಆಕೆಗೆ ಗೊತ್ತಿತ್ತು. ಹಾಗಾಗಿ ಆ ಉಂಗುರವನ್ನು ನೆಹರೂ ಮಗಳು ಇಂದಿರೆಯ ಕೈಗೆ ಕೊಟ್ಟು ‘ಮುಂದೆ ಯಾವತ್ತಾದರೂ ನಿನ್ನ ತಂದೆಗೆ ಹಣಕಾಸಿನ ಮುಗ್ಗಟ್ಟು ಎದುರಾದರೆ (ದೇಶಕ್ಕಾಗಿ ತಮ್ಮ ಆಸ್ತಿ ಮತ್ತು ಐಶ್ವರ್ಯವನ್ನು ತ್ಯಾಗ ಮಾಡುತ್ತಾ ಬಂದಿದ್ದ ನೆಹರೂ ದಿವಾಳಿಯಾಗಿಬಿಡುತ್ತಾರೆ ಎಂಬ ಆತಂಕ ಆಕೆಗಿತ್ತು), ಆಗ ಈ ಉಂಗುರವನ್ನು ಮಾರಾಟ ಮಾಡಿ, ಹಣ ಬಳಸಿಕೊ’ ಎಂದು ಹೇಳಿದ್ದರು. ಮೌಂಟ್ ಬ್ಯಾಟನ್ ದಂಪತಿಗಳ ಕೊನೆಯ ಮಗಳು ಪಮೇಲಾ ಹಿಕ್ಸ್ ತನ್ನ ‘ಡಾಟರ್ ಆಫ್ ಎಂಪೈರ್: ಲೈಫ್ ಆ್ಯಸ್ ಎ ಮೌಂಟ್ ಬ್ಯಾಟನ್’ ಎಂಬ ಕೃತಿಯಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. 2012ರಲ್ಲಿ ಈ ಪುಸ್ತಕ ಪ್ರಕಟಗೊಂಡಿತ್ತು.
ಇದು ಎರಡು ಉಡುಗೊರೆಗಳ ಕಥೆ….
- ಗಿರೀಶ್ ತಾಳಿಕಟ್ಟೆ




