ಆಸ್ಪತ್ರೆಗಳಲ್ಲಿ ವೈದ್ಯರುಗಳು, ಬೆಳಿಗ್ಗೆ ಬಂದ ತಕ್ಷಣ ಎಲ್ಲಾ ವಾರ್ಡ್‌ಗಳಿಗೆ ಭೇಟಿಕೊಟ್ಟು ವೀಕ್ಷಣೆ ಮಾಡುವಂತೆ ಪ್ರತಿಯೊಂದು ಸರ್ಕಾರದ ಇಲಾಖೆಯಲ್ಲಿನ ಅಧಿಕಾರಿಗಳು ತಮ್ಮ ಕಛೇರಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವೀಕ್ಷಣೆ ಮಾಡುವಂತಹ ಪದ್ಧತಿಯನ್ನು ಅನುಸರಿಸಿದರೆ, ಆಡಳಿತ ಯಂತ್ರ ಮತ್ತಷ್ಟು ಚುರುಕಾಗುತ್ತದೆ.
ಬಹಳಷ್ಟು ಅಧಿಕಾರಿಗಳಿಗೆ ತಮ್ಮ ಇಲಾಖೆಯ ತಾವು ನಿರ್ವಹಿಸುತ್ತಿರುವ ಕಟ್ಟಡದಲ್ಲಿನ ಸೌಕರ್ಯ, ಸೌಲಭ್ಯಗಳ ಅರಿವಿರುವುದಿಲ್ಲ. ಎಷ್ಟೋ ಕಡೆ ಕುಡಿಯುವ ನೀರಿರುವುದಿಲ್ಲ, ಶೌಚಾಲಯ ಇರುವುದಿಲ್ಲ. ಸ್ವಚ್ಛತೆಯೂ ಇರುವುದಿಲ್ಲ. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇರುವುದಿಲ್ಲ.
ಇನ್ನು ಸಿಬ್ಬಂದಿ ತಮ್ಮ ಕುರ್ಚಿಗಳಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ಪದೇ ಪದೇ ಸುತ್ತಾಡುವುದೇ ಹೆಚ್ಚಾಗಿರುತ್ತದೆ. ನಾಗರಿಕರ ಅರ್ಜಿಗಳು ವಿಲೇವಾರಿಯಾಗದೇ ಕೊಳೆತು ನಾರುತ್ತಿರುತ್ತದೆ. ಒಂದೇ ಕೆಲಸಕ್ಕೆ ನಾಗರಿಕರು ಹತ್ತಾರು ಬಾರಿ ಕಛೇರಿಗಳಿಗೆ ಅಲೆದಾಡಬೇಕಾಗಿದೆ.
ಅಧಿಕಾರಿಗಳು ಕನಿಷ್ಠ ಪಕ್ಷ ದಿನಕ್ಕೆ ಒಂದು ಬಾರಿಯಾದರೂ ತಮ್ಮ ಕಟ್ಟಡದಲ್ಲಿನ ವಿವಿಧ ಕೊಠಡಿಗಳು ಮತ್ತು ಇಲಾಖೆಗಳಲ್ಲಿನ ಕಾರ್ಯವೈಖರಿಯ ಬಗ್ಗೆ ಗಮನಹರಿಸಿದರೆ ಕೆಳಹಂತದ ನೌಕರರಲ್ಲಿ ಒಂದು ರೀತಿಯಲ್ಲಿ ಎಚ್ಚರಿಕೆ ಇರುತ್ತದೆ. ಈ ರೀತಿ ಯಾವ ಅಧಿಕಾರಿಗಳು ಮಾಡುವುದಿಲ್ಲ. ನೇರವಾಗಿ ತಮ್ಮ ಕಛೇರಿಗಳಿಗೆ ಹೋಗುವುದು, ತಮ್ಮ ಕೊಠಡಿಯಲ್ಲಿ ಮೀಸಲಿರುವ ಕುರ್ಚಿಗಳಲ್ಲಿ ಕುಳಿತು ಕೆಲಸವನ್ನು ಮಾಡಿ ಮತ್ತೆ ವಾಹನವನ್ನೇರಿ ನಿರ್ಗಮಿಸುವುದು. ಇದು ಇಷ್ಟೇ ಸಂಪ್ರದಾಯವಾಗಿದೆ.
ಅಧಿಕಾರಿಗಳ ಪಕ್ಕದ ಕೊಠಡಿಯ ಸಮಸ್ಯೆಗಳ ಅರಿವೂ ಇರುವುದಿಲ್ಲ. ನಾಗರಿಕರು ದೂರು ನೀಡಿದರೇ ಮಾತ್ರ ಇವುಗಳು ಇವರ ಗಮನಕ್ಕೆ ಬರುತ್ತದೆ. ಇಲ್ಲದಿದ್ದರೆ ಸಮಸ್ಯೆಗಳು ಹಾಗೇ ಉಳಿದಿರುತ್ತದೆ.
– ಕೆ.ಎಸ್. ನಾಗರಾಜ್, ಬೆಂಗಳೂರು




