ಪ್ರೊ. ಎಚ್ ಜಿ ಸಣ್ಣಗುಡ್ಡಯ್ಯ ಪರಿಚಯ (01/06/1955 – 07/09/2007)

4 years ago

ಎಡಪಂಥೀಯ ವಿಚಾಧಾರೆಗಳನ್ನು ಮೈಗೂಡಿಸಿಕೊಂಡು ಸಾಹಿತ್ಯದಲ್ಲಿ ಅದನ್ನು ಬಿಂಬಿಸಿ ಕನ್ನಡ ಸಾಹಿತ್ಯಕ್ಕೆ ಹಲವು ಕೃತಿಗಳ ಮೂಲಕ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದವರು ಎಚ್ ಜಿ ಸಣ್ಣಗುಡ್ಡಯ್ಯ. ಶಿರಾ ಸೀಮೆಯ ಬುಕ್ಕಾಪಟ್ಟಣ ಹೋಬಳಿಯ ಹೊಸಹಳ್ಳಿಯಲ್ಲಿ 1 ಜೂನ್ 1955ರಂದು ಗೋವಿಂದಪ್ಪ ಮತ್ತು ತಿಮ್ಮಕ್ಕ ಅವರ ಮಗನಾಗಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹಳ್ಳಿಯ ಗುಡಿಸಲು ಮನೆಯ ಕೂಲಿಮಠದಲ್ಲಿ ಪಡೆದರು. ಇಂಟರ್ ಮೀಡಿಯಟ್‌ ಅನ್ನು ತುಮಕೂರಿನ ಸರ್ಕಾರಿ ಕಾಲೇಜು, ಪದವಿಯನ್ನು ಮೈಸೂರು ಮಹಾರಾಜ ಕಾಲೇಜು, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ವಿದ್ಯಾಭ್ಯಾಸದ ನಂತರ ಪ್ರಾಧ್ಯಾಪಕರಾಗಿ ತುಮಕೂರು, ಶಿವಮೊಗ್ಗ, ಕೋಲಾರ ಹಾಗೂ ಪ್ರಾಂಶುಪಾಲರಾಗಿ ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿಯಾದರು. 2007 ಸೆಪ್ಟೆಂಬರ್ 7ರಂದು ಕಾಲವಶರಾದರು.

ವಿದ್ಯಾರ್ಥಿ ದೆಸೆಯಿಂದಲೇ ಪ್ರಗತಿಪರ ಚಿಂತನೆ ಮೈಗೂಡಿಸಿಕೊಂಡಿದ್ದ ಇವರು ಸಾಹಿತ್ಯ ರಚನೆಯಲ್ಲಿಯೂ ಇದೇ ಆಶಯವನ್ನು ವಿಸ್ತರಿಸಿದರು. ರಾಜ್ಯದ ಪ್ರಬುದ್ಧ ಪ್ರಬಂಧಕಾರರಾಗಿ, ಕವಿಯಾಗಿ, ವಿಮರ್ಶಕರಾಗಿ ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡವರು. ಹೆಚ್ಚು ಕೃತಿಗಳನ್ನು ರಚಿಸದೆ ಇದ್ದರೂ ಇವರ ಕೃತಿಗಳು ವಿಮರ್ಶಕರ ಗಮನ ಸಳೆಯುವಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಕಾವ್ಯಾಸಕ್ತಿ ಬೆಳೆಸಿಕೊಂಡಿದ್ದ ಇವರು ಜನಪರ ಹೋರಾಟದಲ್ಲಿ ಆಸಕ್ತಿ ತಾಳಿದ್ದರು.

ಕೃತಿಗಳು

ಏಕಾಂತ ಮತ್ತು ಇತರ ಪ್ರಬಂಧಗಳು, ಹದ್ದು ಮತ್ತು ಇತರ ಪ್ರಬಂಧಗಳು ಪ್ರಬಂಧ ಸಂಕಲನಗಳು. ಅಭೀಪ್ಸೆ, ವಸಂತದ ಕನಸುಗಳು, ಭಿನ್ನ ಕವನ ಸಂಕಲನಗಳು. ಪಾರಿಜಾತ, ಭಾಸ ರಾಮಾಯಣ, ವಿಚಾರ ಸಾಹಿತ್ಯ, ರಾಜ್ಯಶಾಸ್ತ್ರ, ಕಾವ್ಯಾಂಜಲಿ, ಪ್ರತಿಮಾ(ನಾಟಕ) ಮತ್ತು ಸ್ವಪ್ನವಾಸವದತ್ತ ನಾಟಕವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ತುಮಕೂರಿನಲ್ಲಿ ‘ಜನತಾ ಮಸ್ತಕಾಲಯ’ವನ್ನು ಆರಂಭಿಸಿ ಓದುಗ ವಲಯವನ್ನು ವಿಸ್ತರಿಸಲು ಶ್ರಮಿಸಿದರು.

ಪ್ರಶಸ್ತಿಗಳು

ಅಭೀಪ್ಸೆ ಕವನಸಂಕಲನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಏಕಾಂತ ಮತ್ತು ಇತರೆ ಪ್ರಬಂಧಗಳು (1993), ಪದ್ದು ಮತ್ತು ಇತರ ಪ್ರಬಂಧಗಳು (1998) ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2001ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

ಹಳ್ಳಿಗಾಡಿನ ಸೊಗಡು, ಮಾರ್ಕ್ಸ್ ವಾದಿ ಚಿಂತನೆ, ಪ್ರಗತಿಪರ ಚಳವಳಿ ಆಶಯಗಳು ಇವರ ಕೃತಿಗಳಲ್ಲಿ ವ್ಯಕ್ತವಾಗಿವೆ. ಪ್ರಗತಿಪರ ಚಿಂತಕರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೃತಿಗಳನ್ನು ನೀಡಿದ್ದಾರೆ.

Leave a Reply