ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಎನ್.ಎಸ್.ಭೋಸರಾಜು ಅವರು ಭಗವಂತನ ಹೆಸರಿನಲ್ಲಿ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ನೂತನ ಸದಸ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಸದನದ ನಿಯಮಾವಳಿಗಳನ್ನು ಒಳಗೊಂಡ ಕಿಟ್ ನೀಡಲಾಯಿತು.
ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಮಾಜಿ ಸಚಿವರಾದ ಬಾಬುರಾವ್ ಸಿಂಚನಸೂರ್, ಆರ್.ಶಂಕರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಮೇಲ್ಮನೆಯ ಮೂರು ಸದಸ್ಯ ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ರ್ಪಸಿದ್ದ ಜಗದೀಶ್ ಶೆಟ್ಟರ್, ಬೋಸ್‍ರಾಜ್ ಹಾಗೂ ತಿಪ್ಪಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.
ಜಗದೀಶ್ ಶೆಟ್ಟರ್ ಅವರು 2028ರ ಜೂನ್ 14ರವರೆಗೆ, ತಿಪ್ಪಣ್ಣಪ್ಪ ಅವರು 2026ರ ಜೂನ್ 30ರವರೆಗೆ ಹಾಗೂ ಎನ್.ಎಸ್.ಬೋಸರಾಜ್ ಅವರು 2024ರ ಜೂನ್ 17ರವರೆಗೆ ವಿಧಾನಪರಿಷತ್ ಸದಸ್ಯರಾಗಿರುತ್ತಾರೆ.




