ಟಿಪ್ಪು ಸುಲ್ತಾನ್ ಮಂಡ್ಯ ಜಿಲ್ಲೆಯ ಜನರಿಗೆ ಅಥವಾ ರೈತರಿಗೆ ಅನ್ಯಾಯ ಮಾಡಿರುವ ದಾಖಲೆ ತೋರಿಸಲಿ

3 years ago

ನನ್ನ ನೆಲದ ಅಣ್ತಮ್ಮಂದಿರಿಗೆ ಒಂದು ಮನವಿ.

ಪ್ರಿಯ ಮಿತ್ರರೇ ಕಳೆದ ಆರು ತಿಂಗಳಿಂದ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಬಿ.ಜೆ.ಪಿ. ಪಕ್ಷವು ಜಿಲ್ಲೆಯ ನಾನೂರು ಮಂದಿ ನಿರುದ್ಯೋಗಿ ಯುವಕರನ್ನು ನೇಮಕ ಮಾಡಿಕೊಂಡು ತಿಂಗಳಿಗೆ ಮುವತ್ತುಸಾವಿರ ( ಇಂಜಿನಿಯರ್ ಪದವೀಧರರಿಗೆ) ಇಪ್ಪತ್ತು ಸಾವಿರ ( ಪದವೀಧರರಿಗೆ) ಹಾಗೂ ಉಳಿದವರಿಗೆ ಮಾಸಿಕ ಹತ್ತು ಸಾವಿರ ನೀಡಿ ಜಿಲ್ಲೆಯಲ್ಲಿ ವಿಷ ಬೀಜ ಬಿತ್ತುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.

ಇದೀಗ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಈವರೆಗೆ ಒಡಹಟ್ಟಿದ ಅಣ್ಣತಮ್ಮಂದಿರಂತೆ ಬದುಕಿದ ಒಕ್ಕಲಿಗರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ.
ಶ್ರೀರಂಗಪಟ್ಟಣದ ಟಿಪ್ಪು ಮಸೀದಿಯ ಬಗ್ಗೆ ತಾವೆಂದೂ ನ್ಯಾಯಲಯದ ಮೆಟ್ಟಿಲು ಹತ್ತಲಿಕ್ಕೆ ಸಿದ್ಧರಿಲ್ಲದ ಬ್ರಾಹ್ಮಣರು ಇದೀಗ ಪಾಲಹಳ್ಳಿಯ ಯುವಕನನ್ನು ವಿಶ್ವ ಹಿಂದೂ ಪರಿಷತ್ ಗೆ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿಕೊಂಡು ಅವನ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಏಕೆಂದರೆ, ನಾಳೆ ಯಾರಾದರೂ ಹೊಡೆದಾಡಿಕೊಂಡರೆ, ಅಣ್ತಮ್ಮಂದಿರಾದ ನಾವುಗಳು ಹೊಡದಾಡಿಕೊಳ್ಳಬೇಕು. ಕರ್ನಾಟಕದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಯುವಕ ಗೋಲಿಬಾರ್ ನಿಂದ ಅಥವಾ ಲಾಠಿ ಏಟಿನಿಂದ ಇಲ್ಲವೇ ಚೂರಿ ಇರಿತದಿಂದ ಸಾವನ್ನಪ್ಪಿರುವ ಘಟನೆಯನ್ನು ನನ್ನ ನಲವತ್ತರೆಡು ವರ್ಷದ ಸಾರ್ವಜನಿಕ ಬದುಕಿನಲ್ಲಿ ನೋಡಿಲ್ಲ.

ಮನೆಯೊಳಗೆ ಕುಳಿತು ಬೆಂಕಿ ಹಚ್ಚುವುದು ಅವರ ಜನ್ಮ ಸಿದ್ಧ ಹಕ್ಕಿನಂತೆ ಬಂದಿದೆ. ಈ ದಿನ ಬ್ರಾಹ್ಮಣರು ಅಥವಾ ಇತರೆ ಹಿಂದೂ ಧರ್ಮದ ಭಕ್ತರು ಉಳಿದ ಮುಸ್ಲಿಂ ದೊರೆಗಳನ್ನು ಹೊರತು ಪಡಿಸಿ ಟಿಪ್ಪುವಿನ ಬಗ್ಗೆ ಏಕೆ ವಿಷ ಕಾರುತ್ತಿದ್ದಾರೆ ಎಂಬುದಕ್ಕೆ ಇಲ್ಲಿ ಐತಿಹಾಸಿಕ ದಾಖಲೆಗಳಿವೆ. ಓದಿ ನೋಡಿ. ಅವರ ಸುಪರ್ಧಿಯಲ್ಲಿದ್ದ ಲಕ್ಷಾಂತರ ಭೂಮಿಯನ್ನು ಕಿತ್ತು ಬಡವರಿಗೆ ಮತ್ತು ರೈತರಿಗೆ ಹಂಚಿದ್ದು ಇದಕ್ಕೆ ಮೂಲ ಕಾರಣ. ಈಗ ಹೇಳಿ ರೈತರ ಮಕ್ಕಳಾದ ನಾವು ಟಿಪ್ಪು ಹೆಸರಿನಲ್ಲಿ ಕಿತ್ತಾಡಬೇಕೆ?

ತಮ್ಮ ಸಂಸ್ಥಾನದ ಅಭಿವೃದ್ಧಿಗೆ ಟಿಪ್ಪು ಸುಲ್ತಾನ್ ಮಾಡಿದ ಮಹಾತ್ಕಾರ್ಯವೆಂದರೆ, , ಜೈನ ಬಸದಿಗಳು ಮತ್ತು ಉತ್ತರ ಕರ್ನಾಟಕದ ದೇಶ ಮುಖ್ ಎಂಬ ಬ್ರಾಹಣರ ಅಧೀನದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು 1787 ರಿಂದ 1790 ರ ಅವಧಿಯಲ್ಲಿ ಟಿಪ್ಪು ಸುಲ್ತಾನ್ ವಾಪಸ್ ಪಡೆದು ಗೇಣಿದಾರರನಿಗೆ ಹಂಚಿದನು.. ನಂಜನಗೂಡಿನ ಅಗ್ರಹಾರದಲ್ಲಿ ನಾನೂರು ಬ್ರಾಹ್ಮಣ ಕುಟುಂಬಗಳ ವಶದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಏಳನೂರು ಹಿಂದುಳಿದ ಕುಟುಂಬಗಳಿಗೆ ಜಾತಿಮತ್ತು ಧರ್ಮದ ಹಂಗಿಲ್ಲದೆ ಟಿಪ್ಪುಸುಲ್ತಾನ್ ಹಂಚಿದನು, ಮೂಡಬಿದ್ರಿಯ ಜೈನ ಬಸದಿ ವಶದಲ್ಲಿದ್ದ ಭೂಮಿಯನ್ನು ಮತ್ತು ಉತ್ತರ ಕರ್ನಾಟಕದ ದೇಶ ಮುಖಗಳ ಭೂಮಿಯನ್ನು ಅವರುಗಳ ಜೀವನದ ಅವಶ್ಯಕತೆಗೆ ಬೇಕಾಗುವವಷ್ಟು ಮಾತ್ರ ಉಳಿಸಿ, ಉಳಿದ ಭೂಮಿಯನ್ನು ಎಲ್ಲರಿಗೂ ಸಮನಾಗಿ ಹಂಚಿದನು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದು ಟಿಪ್ಪುವಿನ ಅಚಲ ನಂಬಿಕೆಯಾಗಿತ್ತು. ಇದು ಮಾತ್ರವಲ್ಲದೆ, ಪಾಳು ಬಿದ್ದ ಭೂಮಿ, ಗುಡ್ಡ ಗಾಡು ಪ್ರದೇಶಗಳನ್ನು ಯಾವುದೇ ಕಂದಾಯ ಅಥವಾ ತೆರಿಗೆ ಇಲ್ಲದ ಭೂ ರಹಿತರಿಗೆ ಹಂಚಿದ ಸಂಗತಿಯನ್ನು ಬಹುತೇಕ ಎಲ್ಲಾ ಇತಿಹಾಸಕಾರರು ದಾಖಲಿಸಿದ್ದಾರೆ. ಸೈನಿಕರು ಸೇರಿದಂತೆ 60 ಸಾವಿರ ಕುಟುಂಬಗಳಿಗೆ ಭೂಮಿಯನ್ನು ಹಂಚುವುದರ ಮೂಲಕ ತನ್ನ ಸಾಮ್ರಾಜ್ಯದಲ್ಲಿ ಕೃಷಿಗೆ ಒತ್ತು ನೀಡಿರುವ ಸಂಗತಿಯನ್ನು ದಾಖಲಿಸಿದ್ದಾರೆ.

ಕಳೆದ ವಾರ ಮಂಡ್ಯನಗರದಲ್ಲಿ ನಡೆದ ಸರ್ವ ಪಕ್ಷಗಳ ನಾಯಕರ ಸಭೆಗೆ ಹೋಗಿದ್ದೆ. ಈ ಬಾರಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ಮಂಡ್ಯದ ಮಣ್ಣಿನ ಮಗ ಎಸ್.ಎಂ. ಕೃಷ್ಣ ಅವರಿಗೆ ಸನ್ಮಾನ ಮಾಡಬೇಕೆಂಬುದರ ಕುರಿತು ಸಭೆ ಏರ್ಪಾಟಾಗಿತ್ತು. ಕಾಂಗ್ರೇಸ್, ಜೆ.ಡಿ.ಎಸ್. ಬಿ.ಜೆ.ಪಿ. ರೈತಸಂಘದ ನಾಯಕರು, ಜನಪ್ರತಿನಿಧಿಗಳು ಹಾಜರಿದ್ದರು. ಮೂರೂವರೆ ಲಕ್ಷ ರೂಪಾಯಿ ಖರ್ಚಾಗಬಹುದೆಂದು ನಾವು ಗೆಳೆಯರು ಅಂದಾಜು ಮಾಡಿದ್ದೆವು. ಆದರೆ ಅವರೆಲ್ಲರೂ ಅದನ್ನು ಒಪ್ಪದೆ ಏಳೂವರೆ ಲಕ್ಷ ರೂಪಾಯಿ ಹಣದಲ್ಲಿ ಮಾಡಬೇಕು. ಎರಡು ಸಾವಿರ ಮಂದಿಗೆ ಒಳ್ಳೆಯ ಊಟ ಹಾಕಬೇಂದು ಸ್ಥಳದಲ್ಲಿ ನಾಲ್ವರು ಎರಡು ಲಕ್ಷದ ನಲವತ್ತು ಸಾವಿರ ರೂಪಾಯಿಗಳನ್ನು ಪಾವತಿಸಿದರು.

ಆಶ್ಚರ್ಯದಿಂದ ನೋಡುತ್ತಿದ್ದ ನನಗೆ ಕೆಲವು ಶಾಸಕರು ‘ ಜಗಣ್ಣಾ ನೀನು ಇಪ್ಪತ್ತುವರ್ಷದಿಂದ ದೂರ ಹೋಗಿ ಉಳಿದಿದ್ದೀಯಾ. ನಮ್ಮ ರಾಜಕೀಯ ಏನೇ ಇದ್ದರೂ ಅದು ಚುನಾವಣೆ ಸಮಯದಲ್ಲಿ ಹದಿನೈದು ದಿನ ಮಾತ್ರ’ ಎಂಬ ಮಾತುಗಳನ್ನು ಆಡಿದಾಗ ನನಗೆ ನಿಜಕ್ಕೂ ಎದೆ ತುಂಬಿ ಬಂದಿತು.

ಬಿ.ಜೆಪಿ. ಪಕ್ಷದ ಜೊತೆ ಗುರುತಿಸಿಕೊಂಡಿರುವ ನಿಮ್ಮ ಬಗ್ಗೆ ನನಗೆ ಯಾವುದೇ ಅಸಹನೆ ಇಲ್ಲ. ಸಾರ್ವಜನಿಕ ಬದುಕಿನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಈ ಭಿನ್ನಾಭಿಪ್ರಾಯಗಳು ಮನುಷ್ಯ ಸಂಬಂಧಕ್ಕೆ ಕುತ್ತು ತರಬಾರದು. ಇಂತಂಹ ಉದಾತ್ತ ಬದುಕನ್ನು ನನ್ನ ಜಿಲ್ಲೆಯ ಹಿರಿಯರು ಬದುಕಿ ತೋರಿಸಿದ್ದಾರೆ. ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಯಾವೊಬ್ಬ ನಾಯಕನೂ ನಾನು ಮಂಡ್ಯ ಜಿಲ್ಲೆಯ ಅದ್ವಿತೀಯ ಧಿಮಂತ ನಾಯಕ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತಿಲ್ಲ.

ಹೆಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ ಮತ್ತು ಅಂಬರೀಷ್ ಹೀಗೆ ಎಲ್ಲರಿಗೂ ಸೋಲಿನ ರುಚಿಯನ್ನು ತೋರಿಸಿ, ಸದಾ ಅವರ ತಲೆಗಳು ಅವರವರ ಕುತ್ತಿಗೆಯ ಮೇಲಿರಲಿ ಎಂಬ ಪಾಠ ಕಲಿಸಿದ್ದಾರೆ. ಇದಕ್ಕೆ ಕಾರಣವಾದದ್ದು ನನ್ನ ನೆಲದ ಜನರ ನಡುವೆ ಜೀವಂತವಾಗಿರುವ ಪಕ್ಷ, ಜಾತಿ, ಧರ್ಮ ಗಳನ್ನು ಮೀರಿದ ಬಾತೃತ್ವದ ಮನುಷ್ಯ ಸಂಬಂಧವೇ ಹೊರತು ಬೇರೇನೂ ಅಲ್ಲ.

ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಹುಸಿ ಪುರಾಣ ಕಟ್ಟುತ್ತಿರುವ ಹಲಾಲುಕೋರರಿಗೆ ನನ್ನದೊಂದು ನೇರ ಪ್ರಶ್ನೆ, ಟಿಪ್ಪು ಸುಲ್ತಾನ್ ಮಂಡ್ಯ ಜಿಲ್ಲೆಯ ಜನರಿಗೆ ಅಥವಾ ರೈತರಿಗೆ ಅನ್ಯಾಯ ಮಾಡಿರುವ ದಾಖಲೆ ತೋರಿಸಲಿ ಅಥವಾ ನನ್ನೆದರು ಟಿಪ್ಪು ಸಾವಿನ ಕುರಿತಾಗಿ ಚರ್ಚೆಗೆ ಬರಲಿ. ಮಂಡ್ಯ ಕರ್ನಾಟಕ ಸಂಘದಲ್ಲಿ ನಾನು ಕಾರ್ಯಕ್ರಮ ಏರ್ಪಡಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ನೀವು ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿ. ಆದರೆ, ಪುರೋಹಿತಶಾಹಿಗಳ ಹುನ್ನಾರದ ಬಗ್ಗೆ ಎಚ್ಚರವಿರಲಿ.ನಿಮಗೆ ಟಿಪ್ಪು ಸುಲ್ತಾನ್ ಕುರಿತಂತೆ ಏನೇ ಸಂಶಯವಿದ್ದರೂ ಕರೆ ಮಾಡಿ. ನಾನೇ ಮಂಡ್ಯಕ್ಕೆ ಬಂದು ನಿಮಗೆ ದಾಖಲೆಗಳ ಸಹಿತ ವಿವರಿಸುತ್ತೇನೆ.

ಇಂತಿ ಪ್ರೀತಿಯಿಂದ
ನಿಮ್ಮವ

ಜಗದೀಶ್ ಕೊಪ್ಪ ಹಿರಿಯ ಪತ್ರಕರ್ತರು

Leave a Reply