ನಾಯಕರೇ ನಡೆ ಮತ್ತು ನುಡಿಯಲ್ಲಿನ ಶುದ್ಧತೆಯೇ ನಿಮ್ಮ ಕೊಡುಗೆಯಾಗಿರಲಿ

3 years ago

ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷದವರು ತಮ್ಮ ಖಜಾನೆಯಿಂದ ಅನೇಕ ರೀತಿಯ ಕೊಡುಗೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇನ್ನು ವಿರೋಧ ಪಕ್ಷದವರು ಮುಂದೆ ನಾವು ಸರ್ಕಾರಕ್ಕೆ ಬಂದರೆ ನೀಡಬಹುದಾದ ಕೊಡುಗೆಗಳನ್ನು ಘೋಷಣೆಗಳನ್ನು ಮಾಡುತ್ತಿದ್ದಾರೆ.

ನೆನಪಿರಲಿ ಈ ಎಲ್ಲಾ ಕೊಡುಗೆಗಳು ಯಾವುದೇ ಪಕ್ಷದ ನಿಧಿಯಿಂದಲ್ಲ, ನಾಯಕರುಗಳ ಸಂಪತ್ತಿನಿಂದಲ್ಲ. ಇವೆಲ್ಲವೂ ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಲ್ಲಿನ ಖಜಾನೆಯಲ್ಲಿನ ಹಣ.

ರಾಜ್ಯದಲ್ಲಿ ಜನರಿಗೆ ಸರ್ಕಾರಗಳು ಮತ್ತು ಪಕ್ಷಗಳು ಕೊಡುವ ಕೊಡುಗೆಗಳ ಜೊತೆಗೆ ಕೆಲವೊಂದು ಕೊಡುಗೆಗಳನ್ನು ನಡೆ, ನುಡಿಯಲ್ಲಿ ನಿರೀಕ್ಷಿಸುತ್ತಿದ್ದಾರೆ. ನಡೆದಂತೆ ನುಡಿದರೆ, ನುಡಿದಂತೆ ನಡೆದರೆ ಅದುವೇ ದೊಡ್ಡ ಕೊಡುಗೆಗಳಾಗುತ್ತವೆ.

ಕೋಟ್ಯಂತರ ರೂಪಾಯಿಗಳ ಸ್ಥಿರಾಸ್ತಿಗಳನ್ನು ಹೊಂದಿ ಹಲವಾರು ಲಕ್ಷಗಳ ಮಾಸಿಕ ಆದಾಯವುಳ್ಳ ಶಾಸಕರು ತಮ್ಮ ಸಂಬಳ ಮತ್ತು ಇತರೆ ಭತ್ಯೆಗಳನ್ನು ಪಡೆಯುವುದಿಲ್ಲವೆಂದು ಘೋಷಣೆ ಮಾಡಲು ಸಿದ್ಧರಿದ್ದೀರಾ?

ಮಂತ್ರಿಗಳು ಬೆಂಗಳೂರು ನಗರದಲ್ಲಿ ತಮ್ಮದೇ ಸ್ವಂತ ಮನೆಗಳಿದ್ದರೂ ಸರ್ಕಾರಿ ಬಂಗಲೆ ಜೊತೆಗೆ ತಮ್ಮ ಮನೆಗಳಿಗೆ ಬಾಡಿಗೆಯನ್ನು ಪಡೆದುಕೊಳ್ಳುವ ಮತ್ತು ಸಂಬಳ ಪ್ರವಾಸ ಭತ್ಯೆಯನ್ನು ಪಡೆದುಕೊಳ್ಳುವ ನೂರಾರು ಕೋಟಿಯ ಒಡೆಯರುಗಳು ಇವುಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೀರಾ?

ಅಧಿಕಾರ ಬಂದ ತಕ್ಷಣ ಆಯಕಟ್ಟಿನ ಜಾಗದಲ್ಲಿ ನಿಮ್ಮ ಜಾತಿಯವರನ್ನು, ನಿಮ್ಮ ಸಂಬಂಧಿಕರನ್ನು ನೇಮಕ ಮಾಡಿಕೊಂಡು ಸರ್ಕಾರಿ ಕಛೇರಿಗಳು ಮತ್ತು ಮಂತ್ರಿಗಳ ಮನೆಗಳು ಸಂಬಂಧಿಕರ ನಡುವೆ ಕೋಟೆಯನ್ನು ಕಟ್ಟಿಕೊಳ್ಳುವ ಕೆಟ್ಟ ಸಂಸ್ಕೃತಿಯನ್ನು ಬಿಟ್ಟು ಕೊಡುತ್ತೀರಾ?

ನಿಮ್ಮ ಅನುದಾನವನ್ನು ಕೇವಲ ಕಮೀಷನ್ ಪಡೆಯುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಬಾರದ ಗುಣಮಟ್ಟವಿಲ್ಲದ ಕಾಮಗಾರಿಗಳನ್ನು ಮಾಡುವ ನಿಮ್ಮ ಹಿಂಬಾಲಕ ಗುತ್ತಿಗೆದಾರರಿಗೆ ನೀಡದಂತೆ ಶ್ರದ್ಧೆಯನ್ನು ಮೆರೆಯುತ್ತೀರಾ?

ಅಧಿಕಾರದ ಅಮಲಿನಲ್ಲಿ ಬಡಜನರಿಂದ ದೂರವಿದ್ದು, ಕಾರ್ಯಕರ್ತರನ್ನು ಕಡೆಗಣಿಸಿ ಅಹಂಕಾರದಿಂದ ಮೆರೆಯುವ ಆಡಂಭರದ ಜೀವನ ನಡೆಸುವ ನಿಮ್ಮ ಸಂಸ್ಕೃತಿಗಳಿಂದ ಹೊರ ಬರುತ್ತೀರಾ?

ವಿಧಾನಸೌಧದ ಮೂರನೇ ಮಹಡಿಯಲ್ಲಿ ಕನಿಷ್ಠ ವಾರದಲ್ಲಿ ಒಂದೆರಡು ದಿನವಾದರೂ ಕುಳಿತು ಜನಸಾಮಾನ್ಯರ ಅಹವಾಲುಗಳನ್ನು ಕೇಳುವ ದೊಡ್ಡತನವನ್ನು ಬೆಳೆಸಿಕೊಳ್ಳುತ್ತೀರಾ?

ಭದ್ರತೆಯ ನೆಪದಲ್ಲಿ ವಿಧಾನಸೌಧವನ್ನು ಜನರಿಂದ ದೂರವಿಟ್ಟು, ಭದ್ರತೆಯ ನೆಪದಲ್ಲಿ ಸಾರ್ವಜನಿಕವಾಗಿ ನಿಮ್ಮ ಅಂಗರಕ್ಷಕರ ಕೋಟೆಯ ನಡುವೆ ಬದುಕುತ್ತಾ ಜನರನ್ನು ತಿರಸ್ಕರಿಸುವ ನಿಮ್ಮ ನಡವಳಿಕೆಗಳು ಬದಲಾಗುತ್ತವೆಯೇ?

ಭ್ರಷ್ಟಾಚಾರವನ್ನು ಮಾಡದೇ, ಜಾತಿವಾದವನ್ನು ಮಾಡದೇ, ಸ್ವಜನ ಪಕ್ಷಪಾತವನ್ನು ಮಾಡದೇ, ಸರ್ಕಾರದ ಸವಲತ್ತುಗಳು ಮತ್ತು ಅವಕಾಶಗಳನ್ನು ಪ್ರಾಮಾಣಿಕವಾಗಿ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಶುದ್ಧತೆಯ ಆಡಳಿತವನ್ನು ನಡೆಸಲು ಸಿದ್ಧರಿದ್ದೀರಾ?

ಪಕ್ಷಾಂತರವನ್ನು ಮಾಡುವುದು ಮತ್ತು ಕ್ಷೇತ್ರದ ಮತದಾರರಿಗೆ ಮೋಸ ಮಾಡುವುದು ಮುಂತಾದಂತಹ ಪ್ರಜಾಪ್ರಭುತ್ವ ವಿರೋಧಿ ಕಾಯಕದಲ್ಲಿ ತೊಡಗುವುದಿಲ್ಲವೆಂದು ನೀವು ನಂಬಿರುವ ದೇವರು, ಧರ್ಮಗಳ ಚಿತ್ರ ಮತ್ತು ಗ್ರಂಥಗಳ ಮೇಲೆ ಆಣೆ ಮಾಡಿ ನಿಮ್ಮ ಬದ್ಧತೆಯನ್ನು ತೋರಿಸಲು ಸಿದ್ಧರಿದ್ದೀರಾ?

ಇವೆಲ್ಲವೂ ಇಲ್ಲದೆ ಖಜಾನೆಯಲ್ಲಿನ ಹಣವನ್ನು ನಿಮ್ಮ ಚಿತ್ರಗಳನ್ನು ಹಾಕಿಕೊಂಡು ಕೊಡುಗೆಗಳೆಂದು ನೀಡುತ್ತಾ ಅದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾ ಪ್ರಚಾರಗಿಟ್ಟಿಸುವುದರಿಂದ ಜನರಿಗೆ ಯಾವ ಅನುಕೂಲವೂ ಇಲ್ಲ. ಯಾವುದೇ ಸರ್ಕಾರವಿದ್ದರೂ ಸೂರ್ಯ ಹುಟ್ಟುತ್ತಾನೆ. ಸಂಜೆ ಮುಳುಗುತ್ತಾನೆ. ಕಾಲ ಕಾಲಕ್ಕೆ ಮಳೆ, ಗಾಳಿ ಬಂದೆ ಬರುತ್ತದೆ. ಖಜಾನೆಯ ಹಣ ಖರ್ಚು ಮಾಡಲೇಬೇಕು. ಅದಕ್ಕಾಗಿ ಒಂದಷ್ಟು ಜನಪ್ರಿಯ ಯೋಜನೆಗಳು ಸತ್ತವರ ಹೆಸರಿನಲ್ಲಿ ಘೋಷಣೆಯಾಗುತ್ತಲೇ ಇರುತ್ತವೆ. ಇವುಗಳಿಂದ ಯಾವ ಮಹತ್ತರ ಬದಲಾವಣೆಗಳು ಆಗುವುದಿಲ್ಲ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply