ನಾನು ಸಾಯುವವರೆಗೂ ನಿನಗೆ ಬುದ್ಧಿ ಬರಲ್ಲ!

3 years ago

ತಾವು ಹೇಳುವುದು ಮಗ ಅಥವಾ ಮಗಳು ಕೇಳುತ್ತಿಲ್ಲ ಎನ್ನುವಾಗ, ಅವರಿಗೆ ಹೇಳುವಂತಹ ಮತ್ತು ಮನವರಿಕೆ ಮಾಡುವಂತಹ ಸಾಮರ್ಥ್ಯ ತಮ್ಮಲ್ಲಿ ಕುಗ್ಗುತ್ತಿದೆ ಎನ್ನುವಂತಾದಾಗ ಅಪ್ಪ ಅಥವಾ ಅಮ್ಮ ತಮ್ಮ ಹರೆಯದ ಮಕ್ಕಳಿಗೆ ಹೇಳುವ ಸರ್ವೇಸಾಧಾರಣ ಮಾತು “ನಾನು ಸಾಯುವವರೆಗೂ ನಿನಗೆ ಬುದ್ಧಿ ಬರಲ್ಲ!”

ದೊಡ್ಡವರು ಹರೆಯವರ ಮುಂದೆ ಈ ಹತಾಶಾಭಾವನೆಯನ್ನು ಹೊಂದುವುದಾದರೂ ಏತಕ್ಕೆ? ಅದರಲ್ಲೂ ಮಕ್ಕಳ ಬಾಲ್ಯದಲ್ಲಿ ಹೇಳದ ಈ ಮಾತನ್ನು ಹರೆಯದ ಸಮಯದಲ್ಲಿ ಹೇಳುವುದು ಏತಕ್ಕೆ? ಕಾರಣಗಳು ಇಲ್ಲದಿಲ್ಲ.

ಬಾಲ್ಯದಲ್ಲಿ ಮಕ್ಕಳ ಅಸಹಾಯಕತೆಯನ್ನು ಮತ್ತು ಪರಾವಲಂಬಿತನವನ್ನು ಉಪಯೋಗಿಸಿಕೊಳ್ಳುವ ಪೋಷಕರು ಹೇಗೋ ತಮ್ಮ ಅಧಿಕಾರವನ್ನು ಚಲಾಯಿಸಿ ತಮ್ಮ ಮಾತನ್ನು ಕೇಳುವಂತೆ ಮಾಡಿಬಿಡುತ್ತಾರೆ. ಅದನ್ನೇ ಮಕ್ಕಳು ಹರೆಯದವರಾದಾಗಲೂ ನಿರೀಕ್ಷಿಸುತ್ತಾರೆ. ಆದರೆ, ಅಷ್ಟರ ಹೊತ್ತಿಗೆ ಆ ಮಕ್ಕಳು ಎಳೆಯತನದಲ್ಲೇ ಇರುವುದಿಲ್ಲ. ಬಲಿತಿರುತ್ತಾರೆ. ತಾವು ಅದುವರೆಗೂ ಚಲಾಯಿಸಲಾಗದಂತಹ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಲು ತುಡಿಯುತ್ತಿರುತ್ತಾರೆ. ಹಾಗೂ, ಬಾಲ್ಯದಲ್ಲಿ ಇದ್ದಂತಹ ಅಸಾಹಕತೆಯೂ, ತೀರಾ ಪರಾವಲಂಬಿತನದಲ್ಲೂ ಇರುವುದಿಲ್ಲ. ಅವರು ಮನಸ್ಸು ಮಾಡಿದರೆ ಮನೆಯನ್ನೂ ಕೂಡ ತೊರೆಯಬಹುದು. ಜೊತೆಗೆ ಪೋಷಕರ ತಂತ್ರಗಾರಿಕೆಗಳ ಪರಿಚಯವೂ ಆಗಿದ್ದು, ಅವುಗಳಿಗೆ ಪ್ರತಿತಂತ್ರ ಹೂಡುವ ಜಾಣ್ಮೆಯನ್ನೂ ಅಭ್ಯಾಸ ಬಲದಿಂದಲೇ ರೂಢಿಸಿಕೊಂಡಿರುತ್ತಾರೆ.

ಬಾಲ್ಯದಲ್ಲಿ ಮಕ್ಕಳು ಮೋಜಿಗಾಗಿ ಸುಳ್ಳುಗಳನ್ನು ಹೇಳುತ್ತಿದ್ದರೆ, ಹರೆಯದಲ್ಲಿ ಬಹಳ ಗಂಭೀರವಾದ ಸುಳ್ಳುಗಳನ್ನು ಹೇಳುತ್ತಾರೆ. ಅದರಲ್ಲೂ ಅವುಗಳೆಲ್ಲವೂ ಕೂಡ ಸ್ವಹಿತಾಸಕ್ತಿಯಿಂದಲೇ ಕೂಡಿದ್ದು, ಸಾಮಾನ್ಯವಾಗಿ ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಹೂಡುವಂತಹ ಪಲಾಯನ ತಂತ್ರಗಳಾಗಿರುತ್ತವೆ.

ಪೋಷಕರಿಗೆ ಒಂದು ವಿಷಯ ಅರ್ಥವೇ ಆಗುವುದಿಲ್ಲ. ಅವರು ಬಾಲ್ಯ ಮತ್ತು ಕಿಶೋರಾವಸ್ಥೆಯಲ್ಲಿ ದೂರುತ್ತಿದ್ದಂತಹ ವಿಷಯಗಳನ್ನೇ ಅವರು ಯೌವನಾವಸ್ಥೆಗೆ ಬಂದಾಗಲೂ ದೂರುತ್ತಿದ್ದಾರೆಂದರೆ, ಅವರು ತಮ್ಮ ಮಕ್ಕಳಲ್ಲಿ ಮಾರ್ಪಾಟನ್ನು ತರಲು ವಿಫಲವಾಗಿದ್ದಾರೆ ಎಂಬುದು. ಅಂದಿನಿಂದ ಇಂದಿನವರೆಗೂ ತಾವು ಪಾಡಿದ್ದನ್ನೇ ಪಾಡುತ್ತಿದ್ದರೂ ಅವರು ಬದಲಾಗಲಿಲ್ಲವೆಂದರೆ ತಮ್ಮಲ್ಲೇನೋ ದೋಷವಿದೆಯೆಂದೋ ಅಥವಾ ತಾವು ಹೇಳಬೇಕಾದ ವಿಷಯದಲ್ಲೇ ನ್ಯೂನ್ಯತೆ ಇದೆಯೆಂದೋ, ಇನ್ನೂ ಮುಂದುವರಿದು ತಾವು ಮಾಡುತ್ತಿರುವ ಬೋಧನಾವಿಧಾನದ ಪದ್ಧತಿ ದೋಷ ಪೂರಿತವಾಗಿದೆಯೆಂದೋ ತಿಳಿಯುವುದೇ ಇಲ್ಲ. ಅವರು ನೇರವಾಗಿ ಆರೋಪಿಸುವುದು “ಎಷ್ಟು ಹೇಳಿದರೂ ನಮ್ಮ ಮಾತು ಕೇಳುವುದೇ ಇಲ್ಲ” ಎಂದು.

ನನ್ನ ಉಪಾಧ್ಯಾಯ ವೃತ್ತಿಯ ಅವಧಿಯಲ್ಲಿಯೂ ಮತ್ತು ಈಗಲೂ ತಮ್ಮ ಮಕ್ಕಳ ಬಗ್ಗೆ ದೂರು ತರುವ ಯಾವುದೇ ಒಬ್ಬ ಪೋಷಕರು ನಮ್ಮ ಮಗ ಸರಿಹೋಗಿದ್ದಾನೆ ಎಂದು ಮತ್ತೆ ಬಂದು ಹೇಳಲೇ ಇಲ್ಲ. ಶಾಲೆಗೆ ಹೋಗುತ್ತಿದ್ದ ಹುಡುಗನಾಗಿದ್ದಾಗ ಒಂದು ಬಗೆಯ ದೂರನ್ನು ತರುತ್ತಿದರು, ಅದೇ ಪೋಷಕರು ಅವನು ಕಿಶೋರಾವಸ್ಥೆಗೆ ಹೋದಾಗಲೂ ಮಗನ ವ್ಯಕ್ತಿತ್ವದ ಬಗ್ಗೆ ದೂರುತ್ತಿದ್ದರು. ಆದರೆ ಸಂಗತಿಗಳು ಬೇರಾಗಿರುತ್ತಿದ್ದವು. ಮುಂದೆ ಯುವಕನಾದಾಗಲೂ ಅದೇ ಬಗೆಯ ದೂರು, ಮದುವೆಯಾದ ಮೇಲೂ ಅದೇ ಬಗೆಯ ದೂರುಗಳು. ಆದರೆ ಒಮ್ಮೊಮ್ಮೆಯೂ ಬೇರೆ ಬೇರೆ ವಿಷಯಗಳಾಗಿರುತ್ತಿದ್ದವು.

ಕೆಲವು ಪೋಷಕರು ದೂರುವುದನ್ನು ನಿಲ್ಲಿಸಿಬಿಡುತ್ತಿದ್ದರು. ಆಗ ಅವರ ಪ್ರಕಾರ ಹುಡುಗ ಸರಿಹೋಗಿರಬಹುದೇನೋ ಎಂದು ವಿಚಾರವೇನೆಂದು ಕೇಳಿದರೆ, “ಅವನಿಗೆ ಈ ಜನ್ಮದಲ್ಲಿ ಬುದ್ಧಿ ಬರೋದಿಲ್ಲ. ಅವನಿಗೆ ಬುದ್ಧಿ ಹೇಳಿ ಹೇಳಿ ನಾನು ಸತ್ತು ಹೋಗಬೇಕು. ನಾನು ಸತ್ತ ಮೇಲೆಯೇ ಅವನಿಗೆ ಬುದ್ಧಿ ಬರೋದು” ಎನ್ನುತ್ತಾರೆ.

ವಿಷಯವಿರುವುದು ಇಲ್ಲೇ. ಈ ಹುಡುಗನನ್ನು ಬಾಲ್ಯದಲ್ಲಿದ್ದಾಗಲೂ ದೂರುತ್ತಿದ್ದುದ್ದನ್ನು ಇದೇ ಪೋಷಕರ ಬಾಯಿಂದ ಕೇಳಿದ್ದೇನೆ. ಈಗಲೂ ದೂರುತ್ತಿದ್ದಾರೆ. ಸರಿ, ದೊಡ್ಡವನಾದ ಮೇಲೆ ಅವನ ಸಹವಾಸ ದೋಷದಿಂದ ಅವನು ಕೆಟ್ಟು ಹೋಗಿದ್ದಾನೆ ಎಂದು ಅವರು ಹೇಳುವುದನ್ನು ನೇರವಾಗಿಯೇ ಒಪ್ಪಿಕೊಂಡು ಬಿಡುತ್ತೇನೆ. ಆದರೆ ಬಾಲ್ಯದಲ್ಲಿ ಅವನಿಗೆ ತಿಳುವಳಿಕೆಯ ಮತ್ತು ಪ್ರಜ್ಞೆಯ ತಳಪಾಯ ಹಾಕಿದ್ದು ಯಾರು? ಪೋಷಕರೆಲ್ಲರೂ ಅವರವರ ಲೌಕಿಕ, ಪಾರಮಾರ್ಥಿಕ, ವಾಣಿಜ್ಯ ವ್ಯವಹಾರಗಳಲ್ಲಿ, ಸಾಧನೆಗಳಲ್ಲಿ ಕಳೆದುಹೋಗಿದ್ದು, ಅವರಿಗೆ ಅರಿವಿನ ಮತ್ತು ಪ್ರಜ್ಞಾವಂತಿಕೆಯ (ಕನಿಷ್ಠಪಕ್ಷ ಅವರು ನಂಬುವ ಸಿದ್ಧಾಂತದ್ದೇ) ತಳಹದಿಯನ್ನು ಹಾಕಿರುವುದೇ ಇಲ್ಲ. ಈಗ ಬೆಳೆದು ನಿಂತಿರುವ ಮಕ್ಕಳು ಆಗ ಅಸಹಾಯಕರಾಗಿ ಪ್ರತಿಯೊಂದು ವಿಷಯದಲ್ಲೂ ಪೋಷಕರನ್ನೇ ಅವಲಂಬಿಸಿದ್ದರು. ಆಗ ಏನಾಯ್ತು?

ಗೊತ್ತಿಲ್ಲ! ಯಾವಾಗಲೂ ಗೊತ್ತಾಗುವುದೇ ಇಲ್ಲ. ಪರಿಸ್ಥಿತಿ ತಮ್ಮ ಕೈ ಮೀರಿ ಹೋಗುತ್ತಿದೆ ಅಥವಾ ತಾವು ಸೋಲುತ್ತಿದ್ದೇವೆ ಎಂದು ಎನಿಸುವಂತಹ ಮಕ್ಕಳ ಹರೆಯದ ಕಾಲದಲ್ಲಿ ಪೋಷಕರ ನಿಟ್ಟುಸುರಿನ ಜೊತೆಗಿನ ಉದ್ಘಾರ “ನಾನು ಸಾಯುವವರೆಗೂ ನಿನಗೆ ಬುದ್ಧಿ ಬರಲ್ಲ.” ಇದೇನು? ಪೋಷಕರ ಅಸಹಾಯಕತೆಯ ಪ್ರದರ್ಶನವಾದರೂ ಆಗಬಹುದು, ಎಮೋಷನಲ್ ಬ್ಲ್ಯಾಕ್ ಮೇಲ್ ಕೂಡ ಆಗಬಹುದು, ಕೆಲವೊಮ್ಮೆ ಅಷ್ಟು ಹತಾಶಾಭಾವದ ಸುಳಿಯಲ್ಲಿ ಸಿಕ್ಕಿ ಮುಂದೆ ಭರವಸೆಯೇ ಕಾಣದಂತೆ ಹೋಗಿರುವ ಸಂಕೇತದ ಧ್ವನಿಗಳೂ ಆಗಿರಬಹುದು.

ಇಂಥಾ ಮಾತುಗಳನ್ನು ಕೇಳುವ ಹರೆಯದ ಹುಡುಗರೊಂದಿಗೂ ಹಂಚಿಕೊಳ್ಳಬೇಕಾಗಿರುವ ವಿಚಾರಗಳಿವೆ. ಯಾವಾಗಲೇ ಇಂಥಾ ಮಾತುಗಳನ್ನು ಕೇಳಿದರೆ ನಿಜವಾಗಿಯೂ ಹರೆಯದವರು ಜಾಗೃತರಾಗಬೇಕು. ಕಾರಣ ಅವರು ಸತ್ತು ಹೋಗುವವರೆಗೂ ಕಾದು ಬುದ್ಧಿಯನ್ನು ಪಡೆಯದೇ ಈಗಲೇ ಪಡೆಯಬೇಕೆಂದಲ್ಲ. ಅವರು ಇನ್ನೂ ಈ ಬೆಳೆದ ಹುಡುಗರು ಇದ್ದ ಬಾಲ್ಯಾವಸ್ಥೆಯ ಕಾಲದಲ್ಲಿ ಇದ್ದಂತಹ ಮನಸ್ಥಿತಿಯಲ್ಲಿಯೇ ಇದ್ದಾರೆಂಬುದು. ಜೊತೆಗೆ ಅವರು ತಮ್ಮ ಜೊತೆಗಿನ ವಿದ್ಯಮಾನಗಳ ಜೊತೆಗೆ ಮತ್ತು ಕಾಲದ, ಅದರಲ್ಲೂ ತಮ್ಮ ವೈಯಕ್ತಿಕ ವಿಕಾಸದ ಗತಿಯೊಂದಿಗೆ ಬೆಳೆದಿಲ್ಲ ಅಥವಾ ಸಂವಹನ ಮಾಡುತ್ತಿಲ್ಲ ಎಂಬುದು ಅಲ್ಲಿ ಸ್ಪಷ್ಟವಾಗಿರುತ್ತದೆ.

ವಾದಕ್ಕೆ ಪ್ರತಿವಾದ ಮಾಡುವಲ್ಲಿ ಯುವ ಜನತೆ ಹಿರಿಯರ ಮನವೊಲಿಸುವಲ್ಲಿ ವಿಫಲವಾಗುತ್ತಾರೆ. ಹಾಗೆ ಮಾಡಿದರೆ ಹಿರಿಯರು ಕೈ ಚೆಲ್ಲಿಬಿಡುವಂಥ ಹತಾಶೆಯ ಭಾವದಲ್ಲಿ ಜಾರಿ ಹೋಗುವಂತೆ ಆಗಿಬಿಡುತ್ತದೆ. ಆಕ್ರೋಶದ ಬಂಡಾಯವೇಳುವ ಬದಲು ಅವರಿಗೆ ತಮ್ಮ ವಿಷಯಗಳ ಬಗ್ಗೆ ಮನವರಿಕೆ ಮಾಡಿಸಲು ಯತ್ನಿಸಬೇಕು. ಅವರನ್ನು ತಮ್ಮೊಂದಿಗೆ ಒಯ್ಯಲು ಯತ್ನಿಸಬೇಕು. ಮನಸ್ತಾಪಗಳಿಂದ ಅಂತರ ಹೆಚ್ಚಿದಷ್ಟೂ ಇಬ್ಬರ ಮನಸ್ಸೂ ಭಾರವಾಗುತ್ತಾ ಹೋಗುತ್ತದೆ ಮತ್ತು ಸಂಬಂಧಗಳು ಹಳಸುತ್ತಾ ಹೋಗುತ್ತದೆ. ಅವರ ಮಾತಿನ ನೆಲೆಯನ್ನು ಒಬ್ಬ ಅಧ್ಯಯನಕಾರನಂತೆ ಪರೀಕ್ಷಿಸಬೇಕು. ಅವರಿಗೆ ಅವರದೇ ಪರಿಭಾಷೆಯಲ್ಲಿ ನಮ್ಮ ಮಾತುಗಳನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು. ಪೀಳಿಗೆಗಳ ಅಂತರವಿರುತ್ತದೆ ಎಂಬುದನ್ನು ಯಾವಾಗಲೂ ನೆನಪಿಡೋಣ.

ಆಗ ಹಿರಿಯರು ಯಾವುದೇ ಕಾರಣಕ್ಕೆ ನಿಮ್ಮನ್ನು ಭೌತಿಕವಾಗಿ ಅಗಲಿದರೂ ಅಪರಾಧ ಪ್ರಜ್ಞೆ ಕಾಡತೊಡಗುತ್ತದೆ. ಹಾಗಾಗಿ ವಿರೋಧಿಸುವ ಅಗತ್ಯವಿದ್ದ ಕಡೆ ವಿರೋಧವಿರಲಿ, ಆದರೆ ಪ್ರೀತಿಯೂ ಅಭಿವ್ಯಕ್ತವಾಗಲಿ. ಸದಾ ಮನವರಿಕೆ ಮಾಡಿಕೊಡುವ, ಮನವೊಲಿಸುವ ಯತ್ನವಿರಲಿ. ವಿರೋಧ ಮತ್ತು ಘರ್ಷಣೆಗಳು ಸಂಬಂಧಗಳನ್ನು ಹಳಸುವಂತೆ ಮಾಡುವುದಲ್ಲದೇ “ನಾನು ಸತ್ತ ಮೇಲೆ ನಿನಗೆ ಬುದ್ಧಿ ಬರತ್ತೆ” ಎಂಬ ಹಿರಿಯರ ಮಾತೂ ಸುಳ್ಳೂ ಆಗುವುದು ಮತ್ತು ಬುದ್ಧಿಯಂತೂ ಬರದೇ ಇದ್ದರೂ ಪಾಪ ಪ್ರಜ್ಞೆ ಅಥವಾ ಅಪರಾಧ ಪ್ರಜ್ಞೆಯಲ್ಲಿ ಮುಂದೆ ಮನೋಭಾರದಿಂದ ಕುಸಿಯಬೇಕಾಗುವುದು.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply