ಆತ ಇಪ್ಪತ್ತೊಂದು ಅಥವಾ ಇಪ್ಪತ್ತೆರಡರ ಹರೆಯದ ಹುಡುಗ. ಪತ್ರಿಕೋದ್ಯಮ ಓದುತ್ತಿರುವವನು. ಯಾವುದೋ ನನ್ನ ನಾಟಕವನ್ನು ಸಿನಿಮಾ ಸ್ಕ್ರಿಪ್ಟ್ ಆಗಿ ಮಾಡುವ ವಿಷಯವಾಗಿ ನಿರ್ದೇಶಕರ ಜೊತೆಗೆ ನನ್ನ ಬಳಿಗೆ ಬಂದ.
ಆತ ಪತ್ರಿಕೋದ್ಯಮದಲ್ಲಿ ತಾನು ಕಲಿತಿರುವಂತಹ ಜನರ್ಲಿಸಂ ಅಂದ್ರೇನು, ಆ ಶಬ್ದ ಹೇಗೆ ಬಂತು, ಅದು ಹೇಗೆ ವ್ಯಾಪಕವಾಯ್ತು ಎಂದು ಹೇಳುತ್ತಾ ವಿಷಯಕ್ಕೆ ಬಂದ. ಆದರೆ ಆತ ಮಾತನಾಡುತ್ತಿರುವ ಸ್ಕ್ರಿಪ್ಟಿನ ವಿಷಯಕ್ಕೂ ಮತ್ತು ಜನರ್ಲಿಸಂ ಶಬ್ಧದ ಮೂಲಕ್ಕೂ ಏನೂ ಸಂಬಂಧವಿಲ್ಲದಿದ್ದರೂ ತಿಳಿದಿರುವುದರಿಂದ ತಿಳಿಯದಿರುವುದೆಡೆಗೆ (from known to unknown) ಎಂದು ಭಾವಿಸಿ ವಿಷಯಕ್ಕೆ ಬರುವುದರ ಸೂಚನೆಗಳಿಗಾಗಿ ಕಾಯುತ್ತಾ ಕುಳಿತೆವು.
ರಂಗಭೂಮಿಯ ಕುರಿತಾದ ಆ ಸ್ಕ್ರಿಪ್ಟ್ ನ ಬಗ್ಗೆ ಮಾತಾಡುತ್ತಾ ಆತ ಈಗ ರಂಗಭೂಮಿ ಎಂಬುದು ನಶಿಸುತ್ತಿದೆ, ಅದು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ, ಕಾಲಾನುಕ್ರಮಣದಲ್ಲಿ ಅದು ಪೂರ್ತಿ ಇಲ್ಲವಾಗುವುದು ಈ ಪ್ರಸ್ತುತ ಕಾಲದಲ್ಲಿಯೇ ಸ್ಪಷ್ಟವಾಗುತ್ತಿದೆ; ಇತ್ಯಾದಿಗಳನ್ನು ಹೇಳುತ್ತಾ “ಸ್ಕ್ರಿಪ್ಟ್ ಮಾಡುವುದೇನು ದೊಡ್ಡ ವಿಚಾರವಲ್ಲ. ಅದು ಬಹಳ ಸುಲಭದ ವಿಷಯ” ಇತ್ಯಾದಿಯಾಗಿ ಹೇಳಿದ.
ನನ್ನ ಜೊತೆಯಲ್ಲಿದ್ದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರೊಬ್ಬರು, ತಮ್ಮ ಜೀವನದುದ್ದಕ್ಕೂ ಅದರಲ್ಲೇ ಬದುಕಿ ಬಾಳಿದಂತವರು ಬಹು ತಾಳ್ಮೆಯಿಂದ ಕೇಳುತ್ತಾ ಅವನಿಗೆ ಮುಖ್ಯವಾದ ಮೂರು ಪ್ರಶ್ನೆಗಳನ್ನು ಕೇಳಿದರು.
1. ರಂಗಭೂಮಿಯಲ್ಲಿ ನಿನ್ನ ಅನುಭವವೇನು?
2. ಚಲನಚಿತ್ರ ರಂಗದಲ್ಲಿ ನಿನ್ನ ಕೊಡುಗೆಗಳೇನು ಅಥವಾ ಅನುಭವವೇನು?
3. ನೀನು ಎಷ್ಟು ಸ್ಕ್ರಿಪ್ಟ್ಗಳನ್ನು ಮಾಡಿದ್ದೀಯೆ?
ರಂಗಭೂಮಿಯಲ್ಲಿ ಶಾಲಾ ಕಾಲೇಜಿನ ದಿನಗಳಲ್ಲಿ ಒಂದೆರಡು ಸ್ವಯಂ ಅಥವಾ ಪರಸ್ಪರ ನಿರ್ದೇಶನದ ಭಾಗವಹಿಸುವಿಕೆಯನ್ನು ಬಿಟ್ಟರೆ ಬೇರೆ ಅನುಭವವಿಲ್ಲ. ಚಿತ್ರರಂಗದಲ್ಲಿ ಯಾರೋ ಮಾಡುತ್ತಾರೆಂದು ಓಡಾಡುತ್ತಾ ಇರುವವರ ಜೊತೆಯಲ್ಲಿ ಒಂದಿಷ್ಟು ಓಡಾಡಿರುವುದನ್ನು ಬಿಟ್ಟರೆ ಎಲ್ಲೂ ಎಂದೂ ಅನುಭವವನ್ನು ಪಡೆದುಕೊಂಡಿಲ್ಲ. ಸ್ಕ್ರಿಪ್ಟ್ ಎಂದು ಮಾಡಿರುವುದು ಎಂದರೆ ಒಂದೆರಡು ಕಥೆ ಕವನಗಳನ್ನು ಬರೆದಿರುವುದಷ್ಟೇ, ಅದೂ ಅಂದೆಂದೋ ಕಾಲತ್ತಿಲ್!!
ನಾವು ಗಾಬರಿ ಬೀಳುವುದಷ್ಟೇ ಅಲ್ಲ, ಆ ಯುವಕನು ಹುಟ್ಟುವ ಮುಂಚೆಗಿಂತಲೂ ಕೆಲಸ ಮಾಡುತ್ತಿರುವ ಪಕ್ಕಾ ವೃತ್ತಿಪರ ಸಾಹಿತಿ, ರಂಗಕರ್ಮಿ ಮತ್ತು ಚಿತ್ರಕರ್ಮಿಗಳ ಎದುರಿನಲ್ಲಿ ಏನೂ ತಿಳಿಯದವನು, ಏನೂ ಮಾಡಿರದವನು ಅದೆಷ್ಟೋ ಉದ್ದುದ್ದ ಮಾತಾಡುತ್ತಾ, ತಪ್ಪು ತಪ್ಪು ಮಾಹಿತಿಗಳನ್ನು ನೀಡುತ್ತಾ, ನಮಗೆಲ್ಲಾ ಸಲಹೆ ಸೂಚನೆಗಳನ್ನು ನೀಡುತ್ತಾ, ಈ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಹೇಗೆ ಕಾರ್ಯವನ್ನು ಮಾಡಬೇಕು ಎಂದು ಹೇಳಿದ್ದು ತಲೆತಿರುಗಿತು.
ನನ್ನ ಜೊತೆಗಿದ್ದ ಚಿತ್ರಕರ್ಮಿಯು ಆ ಹುಡುಗನಿಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿದ್ದರು. ನನಗೆ ಅನಗತ್ಯವಾಗಿ ಸಮಯ ವ್ಯರ್ಥವಾಗುತ್ತಿದೆ ಎಂಬ ಸಂಕಟ. ಅದಕ್ಕೆ, “ನೋಡು, ನೀನಿನ್ನೂ ಚಿಕ್ಕವನು” ಎಂದು ಮುಂದೇನೋ ಹೇಳಲಿದ್ದೆ, ಆದರೆ, ಆತ ಅದನ್ನು ಮಧ್ಯೆಯೇ ತುಂಡರಿಸಿ, “ಆ ಮಾತನ್ನು ನನಗೆ ಹೇಳಬೇಡಿ” ಎಂದುಬಿಟ್ಟ. ಇನ್ನು ಗಾಬರಿಯಾಗುವ ಸರತಿ ನನ್ನದು.
ತಾನು ಚಿಕ್ಕವನಲ್ಲ ಎಂಬ ಧೋರಣೆ ಆತನದು. ಕೇಳಿಸಿಕೊಳ್ಳಲು ಸಿದ್ಧವೇ ಇಲ್ಲದ ಮನಸ್ಥಿತಿಯದು. ಅದರಲ್ಲೂ ತುಂಬಾ ತಮಾಷೆಯ ಸಂಗತಿಯೆಂದರೆ ಆತ ಮನಶಾಸ್ತ್ರವನ್ನೂ ಓದುತ್ತಿರುವವನು. ಆ ಇಡೀ ಸನ್ನಿವೇಶವು ಎಲ್ಲಿಗೆ ಒಯ್ಯಿತೆಂದರೆ, “ಬಾಯಿ ಮುಚ್ಚಿಕೊಂಡು ಈ ಜಾಗಬಿಟ್ಟು ತೊಲಗು” ಎಂದು ಅತ್ಯಂತ ಕಠಿಣವಾಗಿ, ಕೆಟ್ಟ ಪದಗಳಿಂದ ಪರಿಸಮಾಪ್ತಿಯಾಗುವಂತಾಯ್ತು.
ಇನ್ನೊಂದು ಘಟನೆ.
ಒಬ್ಬಾತ ಅತ್ಯಂತ ಎಳೆಯ ನಿಂಬೆಕಾಯಿ ನನಗೆ ಹೊಸಪೇಟೆಯಿಂದ ಫೋನ್ ಮಾಡಿದ. ಅವನು ಅಲ್ಲೊಂದು ಚಿತ್ರೀಕರಣವಾಗುತ್ತಿದ್ದ ಕನ್ನಡ ಸಿನಿಮಾದ ಬಗ್ಗೆ ನನ್ನ ಕೂಡ ಹೇಳಬೇಕಾಗಿತ್ತು. ನಾನು ಯಾರೊಂದಿಗೋ ಗಂಭೀರವಾದ ಮಾತುಕತೆಯಲ್ಲಿ ತೊಡಗಿದ್ದವನು ತಿಳಿಯದ ದೂರವಾಣಿ ಸಂಖ್ಯೆಯಾದ್ದರಿಂದ ಕೂಡಲೇ ಸ್ವೀಕರಿಸಿದೆ. ತಿಳಿದವರರಾದರೆ ಮೆಸೇಜ್ ಮಾಡಿಯೋ, ಅಥವಾ ಹಾಗೆಯೇ ಕಟ್ ಮಾಡಿ ನಂತರ ಮಾಡುವುದೋ ನಡೆಯುತ್ತದೆ. ತಿಳಿಯದ ನಂಬರ್ ಯಾವ ತುರ್ತನ್ನು ಹೊತ್ತು ತಂದಿರುತ್ತದೆಯೇ ಎಂಬ ಒಂದು ಕಾಳಜಿ.
ಆತ ಹೇಳಿದ ಈ ಕನ್ನಡ ಚಿತ್ರರಂಗ ಸರಿಯಿಲ್ಲ. ಶಿಸ್ತಿಲ್ಲ. ಅವರಿಗೆ ಸಿನಿಮಾ ಮಾಡುವುದಕ್ಕೇ ಬರುವುದಿಲ್ಲ. ಅವರ ದೋಷಗಳೇನು, ಅವರಿಗೆ ಸೂಕ್ಷ್ಮತೆಯಿಲ್ಲ. ಅವರಿಗೆ ಏಕೆ ಸಿನಿಮಾ ಮಾಡಲು ಬರುವುದಿಲ್ಲ ಇತ್ಯಾದಿಗಳಾದಿಯಾಗಿ ಸುಮಾರು ನಲವತ್ತು ನಿಮಿಷಗಳ ಕಾಲ ಹೇಳುತ್ತಲೇ ಇದ್ದ. ನಂಬಿ, ನಾನು ಕನಿಷ್ಠ ಪಕ್ಷ ಇಪ್ಪತ್ತು ಸಲವಾದರೂ ಮಧ್ಯದಲ್ಲಿ ಅವನಿಗೆ ಉತ್ತರ ನೀಡಲು ತಡಕಾಡಿದೆ. ಆದರೆ ಅವನು ಕೇಳಿಸಿಕೊಳ್ಳಲು ಸಿದ್ಧವೇ ಇರಲಿಲ್ಲ. ಕೊನೆಗೆ ಅವನು ಮಾತು ಮುಗಿಸದೇ ಇದ್ದರೂ ನಾನು ಗಟ್ಟಿಯಾಗಿ ಕೂಗಿ ಫೋನ್ ಕಟ್ ಮಾಡಿದೆ.
ಈ ಮಧ್ಯೆ ಫೋನನ್ನು ಲೌಡ್ ಸ್ಪೀಕರ್‌ಗೆ ಹಾಕಿ ನನ್ನ ಸುತ್ತಲಿದ್ದವರಿಗೆ ಕೇಳಿಸಿದೆ, ಅದು ಹಾಗೆ ಬರುವಾಗಲೇ ಅದನ್ನು ಟೇಬಲ್ಲಿನ ಮೇಲಿಟ್ಟು ನನ್ನ ಮಾತನ್ನು ಬೇರೆಯವರ ಜೊತೆಗೆ ಮಾತಾಡಿ ಮುಗಿಸಿದೆ. ಆದರೆ ಅತ್ಯಂತ ಆಶ್ಚರ್ಯದ ವಿಷಯವೆಂದರೆ, ನನ್ನಿಂದ ಯಾವ ಪ್ರತಿಕ್ರಿಯೆ ಬರದೇ ಇದ್ದರೂ ಅವನ ಪಾಡಿಗೆ ಅವನು ಮಾತಾಡಿಕೊಂಡು ಹೋಗುತ್ತಿದ್ದದ್ದು. ಅಂತೂ ಇಂತೂ ಸಂಧಿಯಲ್ಲಿ ಸಂಧಾನ ಸಾಧಿಸಿ ಅವನ ಬಗ್ಗೆ ವಿಚಾರಿಸಿದೆ. ಅವನ ವಯಸ್ಸು ಹತ್ತೊಂಬತ್ತು. ಇಂಜನಿಯರಿಂಗ್ ಡಿಪ್ಲೊಮೋ ಮುಗಿಸಲಾಗದೇ ಮಧ್ಯೆದಲ್ಲಿಯೇ ಕೈ ಬಿಟ್ಟು ಸಿನಿಮಾ ಮಾಡಬೇಕು, ನಿರ್ದೇಶಕನಾಗಬೇಕೆಂದು ಇದ್ದಾನೆ. ಅದಕ್ಕೆ ಅವನೇ ಒಂದು (ಅವನೇ ಹೇಳುವಂತೆ) ಅದ್ಭುತವಾದ ಮತ್ತು ಜಗತ್ತಿನಲ್ಲಿ ಇನ್ನೆಲ್ಲೂ ಮಾಡಿರದಂತಹ ಸ್ಕ್ರಿಪ್ಟನ್ನು ಮಾಡಿದ್ದಾನಂತೆ.
“ನೀನು ಎಷ್ಟು ಸಿನಿಮಾ ನೋಡಿದ್ದೀಯಪ್ಪಾ?” ಎಂದರೆ, ಸುಮಾರು ಇನ್ನೂರು ಮುನ್ನೂರು ಸಿನಿಮಾಗಳು ಕನ್ನಡ, ಹಿಂದಿ, ತೆಲುಗು ಮತ್ತು ಇಂಗ್ಲೀಷ್‌ನಲ್ಲಿ. ಈ ನಾಲ್ಕು ಭಾಷೆಗಳಲ್ಲಿ ತಯಾರಾದ ಅದ್ಭುತ ಸಿನಿಮಾಗಳ ಸಂಖ್ಯೆಯೇ ಮುನ್ನೂರೋ ನಾನ್ನೂರೋ ಅಲ್ಲ. ಹಾಗಿರುವಾಗ ಜಗತ್ತಿನಲ್ಲಿಯೇ ತಯಾರಾಗಿಲ್ಲದ ಸ್ಕ್ರಿಪ್ಟ್ ಎಂದು ಹೇಗೆ ಹೇಳುವೆ ಕಂದಾ ಎಂಬ ಪ್ರಶ್ನೆಗೆ, “ನಾನು ನೋಡಿರುವ ಯಾವುದೇ ಸಿನಿಮಾದಲ್ಲೂ ಇಂತಹುದಿಲ್ಲ” ಎಂಬ ಉತ್ತರ.
ನೀನು ನೋಡಿಲ್ಲದೇ ಇರುವ ಜಗತ್ತೆಂಬುದೇ ಬೇರೆ ಇಲ್ಲವೇ? ಎಂಬ ಪ್ರಶ್ನೆಗೆ ಮಾತ್ರ ನಿರುತ್ತರ.
ಹರೆಯದ ಉನ್ಮಾದ ಕಿವಿಗಳನ್ನು ಮುಚ್ಚುವುದೇ? ಸಂವಹನೆಯ ಮೊದಲ ಅಂಶವೇ ಕೇಳಿಸಿಕೊಳ್ಳುವಿಕೆ ಎಂಬ ಸತ್ಯ ಬಹುಪಾಲು ಹರೆಯದವರಿಗೆ ಯಾಕೆ ತಿಳಿಯದು? ಮೊದಲು ವ್ಯಾಕರಣವನ್ನು ತಿಳಿದು ನಂತರ ವ್ಯಾಕರಣ ಭಂಗ ಮಾಡಬೇಕು ಅಂತ ಅವರಿಗೆ ಹೇಳುವವರು ಯಾರು?
ಹಳತನ್ನು ಹೊತ್ತು ಮೆರೆಯಬೇಕಿಲ್ಲ. ಆದರೆ ಹಳೆಯ ಬೇರೆಂಬುದು ಇದೆ ಎಂಬ ಸತ್ಯವನ್ನೇ ಚಿಗುರುಗಳು ಮರೆತರೆ ಹೇಗೆ ಎಂಬ ಆತಂಕ ಈಗ ಯುವಸಮಾಜದ ಕುರಿತು ಸೇತುಪೀಳಿಗೆಯ ಸಮಾಜದವರಿಗಿದೆ.
ತಾವು ಕಂಡಿದ್ದೇ ಜಗತ್ತಲ್ಲ ಎಂದು ಅವರಿಗೆ ಹೇಳುವವರು ಯಾರು? ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ ಎಂದು ಸಾಕ್ಷಾತ್ ಗುಂಡಪ್ಪನವರೇ ಹೇಳಿದರೂ ಇವರು ಕೇಳರೇ?
- ಯೋಗೇಶ್ ಮಾಸ್ಟರ್, ರಂಗಕರ್ಮಿ




One Response
ಅತ್ಯಂತ ಮಹತ್ತರ ಲೇಖನ. ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ಅಗಲೇಬೇಕು!