ಮತ್ತೂಟ್ ಮತ್ತು ಮಣಪುರಂ ವಿರುದ್ಧ ದೂರು

5 years ago

ಬೆಂಗಳೂರು: ಚಿನ್ನ ಅಡವಿರಿಸಿಕೊಂಡು ಸಾಲ ನೀಡುವ ಕಂಪನಿಗಳಾದ ಮುತ್ತೂಟ್ (Muthoot) ಮತ್ತು ಮಣಪುರಂ (Manappuram) ಸಂಸ್ಥೆಗಳು ತಮ್ಮ ಜಾಹೀರಾತುಗಳ ಮೂಲಕ ಜನರನ್ನು ಆಕರ್ಷಿಸಿ ಅವರು ಚಿನ್ನ ಅಡವಿಡುವಂತೆ ಮಾಡಿ ಆನಂತರ ವಿವಿಧ ಕುತಂತ್ರಗಳ ಮೂಲಕ ಬೇಕಾಬಿಟ್ಟಿ ಬಡ್ಡಿ, ಚಕ್ರಬಡ್ಡಿ ಮತ್ತು ಇತರ ದಂಡಗಳನ್ನು ಹಾಕಿ ಅಡವಿಟ್ಟ ಜನ ಚಿನ್ನ ಬಿಡಿಸಿಕೊಳ್ಳಲಾರದಂತೆ ಮಾಡಿದ್ದಾರೆ. ಇವರ ಅಕ್ರಮ ಮತ್ತು ಕುತಂತ್ರದ ವ್ಯವಹಾರಗಳಿಂದಾಗಿ ಅನೇಕ ಮಂದಿ ಕಂಗಾಲಾಗಿದ್ದಾರೆ ಎಂದು ಬೆಂಗಳೂರಿನ ಪೊಲೀಸ್ ಕಮೀಷನರ್, ಸರ್ಕಾರದ ಗೃಹ ಕಾರ್ಯದರ್ಶಿ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೋಪಣ್ಣ ಬಿ.ಕೆ. ಪತ್ರ ಬರೆದಿದ್ದಾರೆ.

ಇಲ್ಲಿ ಚಿನ್ನ ಅಡವಿಟ್ಟವರು ಹೆಚ್ಚಾಗಿ ಬಡವರು ಮತ್ತು ಮಾಧ್ಯಮ ವರ್ಗದವರೇ ಆಗಿದ್ದು ಅವರು ತಮಗಿರುವ ಅಲ್ಪ ಸ್ವಲ್ಪ ಚಿನ್ನವನ್ನು ಕಷ್ಟಕಾಲದಲ್ಲಿ ಅಡವಿಟ್ಟು ಚಿನ್ನದ ಮೌಲ್ಯಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿದರೂ ಚಿನ್ನವನ್ನು ಬಿಡಿಸಿಕೊಳ್ಳಲಾಗದೆ ಆ ಚಿನ್ನವನ್ನು ಈ ಫೈನಾನ್ಸ್ ಸಂಸ್ಥೆಗಳಿಗೇ ಬಿಟ್ಟು ಕೊಟ್ಟಿರುವ ಸತ್ಯ ಹೊರಬಂದಿದೆ. ಚಿನ್ನದ ಬೆಲೆ ಹೆಚ್ಚಾಗಿದೆ ಅಷ್ಟು ಕೊಡಿ ಚಿನ್ನದ ಬೆಲೆ ಕಮ್ಮಿಯಾಗಿದೆ ಇಷ್ಟು ಕೊಡಿ ಎಂದೆಲ್ಲ ಜನರಿಗೆ ಗೊಂದಲ ಉಂಟು ಮಾಡಿಸಿ ಆ ಬಿ ಐ ನಿಗದಿತ ಬಡ್ಡಿದರಕ್ಕಿಂತ ಹೆಚ್ಚು ಸುಲಿಗೆ ಮಾಡಿ ಜನ ತಮ್ಮ ಚಿನ್ನವನ್ನು ಕಳೆದುಕೊಳ್ಳುವಂತೆ ಮಾಡುವಲ್ಲಿ ಈ ಸಂಸ್ಥೆಗಳು ಯಶಸ್ವಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ.

2020ರ ಕೋವಿಡ್ ಹೊಡೆತದಲ್ಲಿ ಜನ ನೊಂದಿದ್ದಾಗ ಎಲ್ಲಾ ಫೈನಾನ್ಸ್ ಕಂಪನಿಗಳೂ ಜನರಿಗೆ ಬಡ್ಡಿಯಲ್ಲಿ ರಿಯಾಯಿತಿ ಮತ್ತು ತಾತ್ಕಾಲಿಕ ವಿರಾಮ ಅಂತೆಲ್ಲ ನೀಡಿದ್ದಾಗ ಈ ಚಿನ್ನ ಅಡವಿರಿಸಿಕೊಳ್ಳುವ ಸಂಸ್ಥೆಗಳು ಮಾತ್ರ ತಮ್ಮ ಗ್ರಾಹಕರಿಂದ ಚಕ್ರ ಬಡ್ಡಿಯನ್ನು ಪಡೆದಿರುವುದು ದುರದೃಷ್ಟಕರ. ಅದಲ್ಲದೆ ತಮಗಾದಷ್ಟು ಬಡ್ಡಿ ಕಟ್ಟುತ್ತೇವೆ ಕಟ್ಟಿಸಿಕೊಳ್ಳಿ ಎಂದರೆ; “ಇಲ್ಲ ಇಡೀ ಬಡ್ಡಿ ಕಟ್ಟಿ ಮಾತ್ರವಲ್ಲ ಮೂಲ ಮೊತ್ತದ ಸ್ವಲ್ಪ ಭಾಗವನ್ನೂ ಕಟ್ಟಬೇಕು ಇಲ್ಲದಿದ್ದರೆ ನಿಮ್ಮ ಚಿನ್ನವನ್ನು ಹರಾಜು ಮಾಡುತ್ತೇವೆ” ಎಂದು ಜನರಿಗೆ ಧಮಕಿ ಹಾಕುತ್ತಾ ಲಾಭ ಮಾಡಿಕೊಂಡ ಸಂಸ್ಥೆಗಳು ಇವಾಗಿವೆ ಎಂದಿದ್ದಾರೆ.

ಹಾಗೇ ಆನ್ಲೈನ್ ಮೂಲಕ ಕಟ್ಟಿ ಎಂದು ಹೇಳುವ ಇವರು ಆನ್ಲೈನ್ ನಲ್ಲಿ ಕಟ್ಟಲು ಹೋದರೆ ಅಲ್ಲಿ ಪೂರ್ತಿ ಹಣ ಕಟ್ಟಿ ಎಂಬ ಸೂಚನೆ ಬರುತ್ತದೆ. ಹೀಗೇ ಜನ ಒಂದಷ್ಟು ಹಣ ಕಟ್ಟಲು ಮುಂದೆ ಬಂದರೂ ಕಟ್ಟಿಸಿಕೊಳ್ಳದೆ ವಿಳಂಬ ಮಾಡಿಸಿ ಕೊನೆಗೆ ಬಡ್ಡಿ ಹೆಚ್ಚಳ ಮಾಡಿ ಅಕ್ರಮ ಲಾಭ ಮಾಡಿಕೊಂಡು ಸಾಮಾನ್ಯ ಜನರ ಚಿನ್ನ ದೋಚುವಲ್ಲಿ ನಿರತವಾಗಿವೆ ಎಂದಿದ್ದಾರೆ.

ಈ ಕೂಡಲೇ RBI ಮತ್ತು ಪೊಲೀಸ್ ಇಲಾಖೆಗಳು ತನಿಖೆ ನಡೆಸಿ ಈ ಎರಡು ಸಂಸ್ಥೆಗಳಿಂದ ಮತ್ತು ಈ ರೀತಿಯ ಇತರ ಸಂಸ್ಥೆಗಳಿಂದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ತಡೆದು ಸಾಮಾನ್ಯ ಜನರಿಗೆ ಈ ಸಂಕಷ್ಟದ ಸಮಯದಲ್ಲಿ ಈ ಸಂಸ್ಥೆಗಳು ಇನ್ನಷ್ಟು ತೊಂದರೆ ನೀಡದಂತೆ ನೋಡಿಕೊಳ್ಳಬೇಕಾಗಿ ವಿನಂತಿಸಿಕೊಂಡಿದ್ದಾರೆ.

Leave a Reply