ಚಾಮರಾಜನಗರ: ಕೊರೊನಾ ಸೋಂಕು ಕಡಿಮೆಯಾದ ಬಳಿಕ SSLC ಪರೀಕ್ಷೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಹನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬೈನಂತ ಮಹಾನಗರಿಯಲ್ಲೇ ಕೊರೊನಾ ಸೋಂಕು ಕಡಿಮೆಯಾಗಿದೆ. ನಮ್ಮಲ್ಲೂ ಸೋಂಕಿನ ಪ್ರಮಾಣ ಇಳಿಯಲಿದೆ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು, ಸೋಂಕು ಕಡಿಮೆಯಾಗಲೆಂದು ನಾವೆಲ್ಲರೂ ಆಶಿಸೋಣ ಎಂದರು.
ಕೊರೊನಾ ಟೆಸ್ಟ್ ಕಡಿಮೆ ಮಾಡಿಲ್ಲ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು, ಪ್ರಾಥಮಿಕ ಸಂಪರ್ಕಿತರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕು ಇಳಿಮುಖಗೊಂಡು ಮರಣ ಪ್ರಮಾಣ ತಗ್ಗಿಸುವುದರತ್ತ ನಾವು ಕೆಲಸ ಮಾಡುತ್ತಿದ್ದೇವೆ, ಪರೀಕ್ಷೆ ಸಂಖ್ಯೆ ಕಡಿಮೆ ಮಾಡಿಲ್ಲ ಎಂದರು.
ಹೈ ಕೋರ್ಟ್ ಗೆ ತನಿಖಾ ತಂಡ ವರದಿ ನೀಡಿದ್ದು, ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಲಿದೆ. ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರದ ನಿಲುವಿನ ಬಗ್ಗೆ ಚಿಂತಿಸಲಾಗುತ್ತಿದ್ದು ಸಿಎಂ ಚರ್ಚೆ ನಡೆಸಿ, ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದಲೇ ಸಾವು, ಕ್ಷಮೆ ಕೇಳಲು ಮೈಸೂರು ಡಿಸಿ ಒತ್ತಾಯದ ಕುರಿತು ಸಚಿವ ಸುರೇಶ್ ಕುಮಾರ್ ಅವರು ಮಾತನಾಡಲು ನಿರಾಕರಿಸಿದರು.




