ಚುನಾವಣಾ ವರ್ಷ ಆಗಿರುವುದರಿಂದ ಆರೋಪಗಳು ಸಾಮಾನ್ಯ: ಬೊಮ್ಮಾಯಿ

3 years ago

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ‌ಅವಧಿಯಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ಹಿಂದೆ ನಾವು ಬಿಡುಗಡೆ ಮಾಡಿದ್ದ ಚಾರ್ಜ್‍ಶೀಟ್‍ಗೆ ರಾಜ್ಯದ ಜನತೆಯ ಮುಂದೆ ಉತ್ತರ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ

ಮಾಜಿ ಪ್ರಧಾನಿ ಲಾಲ್ ಬಹು ದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ  ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ‌ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಬಿಡುಗಡೆ ಮಾಡಿರುವ ಚಾರ್ಜ್ ಷೀಟ್ ಗೆ ತಿರುಗೇಟು ನೀಡಿದರು.

ನಾವು ಅವರಿಗಿಂತ ಮೊದಲೇ ಚಾರ್ಜ್‍ಶೀಟ್‍ನ್ನು ಬಿಡುಗಡೆ ಮಾಡಿದ್ದೆವು. ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರಾ ಮೊದಲು ನಮ್ಮ ಆರೋಪಗಳಿಗೆ ಉತ್ತರ ನೀಡಿ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್‍ನಲ್ಲಿ ಯಾವುದೇ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ. ಮೊದಲು ನಿಮ್ಮ ಕಾಲದಲ್ಲಿ ನಡೆದಿರುವ ಕರ್ಮಕಾಂಡಗಳಿಗೆ ಉತ್ತರ ಕೊಡಿ ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ವರ್ಷ ಆಗಿರುವುದರಿಂದ ಇಂತಹ ಆರೋಪಗಳು ಬರುವುದು ಸರ್ವೆ ಸಾಮಾನ್ಯ. ಇದಕ್ಕೆ ನಾವು ಹೆಚ್ಚು ಗಮನಹರಿಸಬೇಕಾದ ಅಗತ್ಯವಿಲ್ಲ. ಮೊದಲು ನಿಮ್ಮ ಸರ್ಕಾರದ ಹಗರಣಗಳು ಏನಾದವು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಿರುಗೇಟು ಕೊಟ್ಟರು.

ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಸತ್ಯ, ನಿಷ್ಠೆಯಿಂದ ಕೆಲಸ ಮಾಡಿದ ಅಪರೂಪದ ರಾಜಕಾರಣಿ. ಅವರು ಇನ್ನಷ್ಟು ದಿನ ಬದುಕಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ನೆಲೆಯೂರಲೆಂದು ತಾಷ್ಕೆಂಟ್‍ಗೆ ಹೋದಾಗ ಅನಿರೀಕ್ಷಿತವಾಗಿ ಸಾವನ್ನಪ್ಪಿದರು. ಇದು ಅತ್ಯಂತ ದುರಂತಮಯ ಎಂದು ವಿಷಾದಿಸಿದರು.

ಲಾಲ್‍ಬಹುದ್ದೂರ್ ಶಾಸ್ತ್ರಿಯವರು ಬಡ ಕುಟುಂಬದಿಂದ ಬಂದವರು. ಶ್ರೀಮಂತರಾಗಬೇಕೆಂಬ ಹಂಬಲ ಎಂದೂ ಇಟ್ಟುಕೊಂಡಿರಲಿಲ್ಲ. ಜೈ ಜವಾನ್, ಜೈ ಕಿಸಾನ್ ಘೋಷಣೆ ನೀಡಿ ಇಡೀ ಭಾರತೀಯರಲ್ಲೇ ಸ್ವಾಭಿಮಾನದ ಕಿಚ್ಚು ಹಚ್ಚಿದರು. ಈ ಘೋಷಣೆಯಲ್ಲಿ ದೇಶದ ಸ್ವಾವಲಂಬನೆ, ಸಮೃದ್ದಿ, ಅಭಿವೃದ್ಧಿಗೆ ಬೇಕಾದ ಅಂಶಗಳಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.

Leave a Reply