ಸ್ಯಾಂಟ್ರೋ ರವಿ ವಿರುದ್ಧ ಸಮಗ್ರ ತನಿಖೆ: ಆರಗ ಜ್ಞಾನೇಂದ್ರ

3 years ago

ಬೆಂಗಳೂರು: ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರಿಗೆ ಬೇಕಾಗಿರುವ ಸ್ಯಾಂಟ್ರೋ ರವಿ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು, ಎಲ್ಲವೂಗಳ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು ಪೊಲೀಸರು ಸ್ಯಾಂಟ್ರೊ ರವಿಯನ್ನು ಹುಡುಕಾಡುತ್ತಿದ್ದಾರೆ. ಆತ ಉಳಿದುಕೊಂಡಿದ್ದ ವಸತಿಗೃಹ ಸಹಿತ ಎಲ್ಲ ಕಡೆ ಶೋಧ ನಡೆಸುತ್ತಿದ್ದಾರೆ. ಆದರೆ, ಆತ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಹುಡುಕುವುದು ಕಷ್ಟವಾಗಿದೆ ಎಂದರು.

ಆತ ಎಲ್ಲೇ ಇದ್ದರೂ ನಮ್ಮ ಪೊಲೀಸರು ಹುಡುಕಿ ಎಳೆದು ತರುತ್ತಾರೆ ಎಲ್ಲಾ ಆರೋಪಗಳ ಬಗ್ಗೆ ಸತ್ಯಾಂಶವನ್ನು ಹೊರಗೆಡವುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಏನೇ ಆರೋಪ ಮಾಡಲು ಹೇಸುವುದಿಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆದಿದ್ದಾನೆ. ಆತನನ್ನು ನಾವು ಮಟ್ಟ ಹಾಕುತ್ತೇವೆ. ಯಾರೇ ಆಗಿದ್ದರೂ ಬಿಡುವುದಿಲ್ಲ. ಬಂಧನ ಮಾಡಿಯೇ ಮಾಡುತ್ತೇವೆ ಎಂದರು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ನಾವು ಯಾರನ್ನು ಬಿಟ್ಟಿದ್ದೇವೆ? ಇದೇ ರವಿ ಸಿಗಲಿ. ಯಾರೇ ಇದ್ದರೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಏನನ್ನೂ ಹೇಳಲು ಆಗುವುದಿಲ್ಲ. ವಿಚಾರಣೆಯಿಂದ ಎಲ್ಲ ಸಂಗತಿ ಹೊರಗೆ ಬರಲಿ ಎಂದರು.

ಸ್ಯಾಂಟ್ರೋ ರವಿ ತಮಗೆ ಕರೆ ಮಾಡಿರುವ ಹಾಗೂ ಸಂದೇಶ ಕಳುಹಿಸಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರ ಕರೆ ಬಂದರೂ ನಾವು ಪ್ರತಿಕ್ರಿಯೆ ನೀಡಲೇಬೇಕು. ನಾವು ಸುಲವಾಗಿ ಲಭ್ಯ ಇರುತ್ತೇವೆ. ಆಗ ಇಂಥವರೂ ಕೂಡ ಕರೆ ಮಾಡ್ತಾರೆ. ನಾನು ನಿಮ್ಮೆಲ್ಲರಿಗೂ (ಮಾಧ್ಯಮದವರು) ಗೊತ್ತು. ಯಾರು ಬೇಕಾದರೂ ನನ್ನನ್ನು ಭೇಟಿ ಮಾಡಬಹುದು. ನನ್ನ ಮನೆಗೆ ಬರುವಾಗ ಪೊಲೀಸರಿಂದ ಪ್ರಮಾಣಪತ್ರ ತೆಗೆದುಕೊಂಡು ಬಾ ಎಂದು ಹೇಳಲು ಆಗಲ್ಲ. ಅನೇಕರು ಬಂದಾಗ ಪೋಟೊ ತೆಗೆಸಿಕೊಳ್ಳುತ್ತಾರೆ. ಆ ಕಾರಣಕ್ಕೆ ನಾವು ಅವರ ಜೊತೆ ಇರಲ್ಲ ಎಂದರು.

ತಮ್ಮ ನೇತೃತ್ವದ ತಂಡ ಗುಜರಾತ್ ಪ್ರವಾಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಎಫ್‌ಎಸ್‌ಎಲ್‌ ವಿಧಿವಿಜ್ಞಾನ ಪರೀಕ್ಷೆ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅಲ್ಲಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜೊತೆ ಸಭೆ ಇದೆ. ನಾನು, ಅಧಿಕಾರಿಗಳಾದ ರಜನೀಶ್ ಗೋಯಲ್, ಹಿತೇಂದ್ರ ಹೋಗುತ್ತಿದ್ದೇವೆ ಎಂದರು.

Leave a Reply