ಎಸ್.ಎಲ್.ಭೈರಪ್ಪನವರಿಗೊಂದು ಬಹಿರಂಗ ಪತ್ರ
ಶ್ರೀ ಭೈರಪ್ಪನವರೇ ವಯಸ್ಸಿನಲ್ಲಿ ನೀವು ನನಗೆ ತಂದೆಯ ಸಮಾನರು. ಜೊತೆಗೆ ಸಾವಿನ ಮನೆಯತ್ತ ಮುಖ ಮಾಡಿ ನಿಂತಿರುವವರು. ಈ ಸಂದರ್ಭದಲ್ಲಿ ಕಠಿಣ ಶಬ್ದಗಳಲ್ಲಿ ನಿಮ್ಮನ್ನು ನಿಂದಿಸುವುದು ತರವಲ್ಲ. ಹಾಗಾಗಿ ಸೌಮ್ಯವಾಗಿ ನಿಮ್ಮೆದೆರು ಹಲವು ಪ್ರಶ್ನೆಗಳನ್ನಿಟ್ಟು ಜೊತೆಗೆ ಸಲಹೆಗಳನ್ನೂ ನೀಡುತ್ತಿದ್ದೀನಿ.
ನೀವು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನಾರೋಗ್ಯದಿಂದ ಭಾಗವಹಿಸದೆ, ನೀವು ನೀಡಿದ್ದ ಭಾಷಣವನ್ನು ಅಲ್ಲಿ ಓದಲಾಗಿದೆ. ಸಂಸ್ಕೃತ ಭಾಷೆ ಭಾರತದ ಶ್ರೀಮಂತ ಭಾಷೆ ಅದರಿಂದ ಕನ್ನಡ ಭಾಷೆ ಶ್ರೀಮಂತಗೊಂಡಿದೆ ಹಾಗೂ ಶೇಕಡ ಅರವತ್ತರಷ್ಟು ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದಿವೆ ಎಂಬ ನಿಮ್ಮ ಅನಿಸಿಕೆಯನ್ನು ಅಲ್ಲಿ ಓದಲಾಗಿದೆ.
ಭೈರಪ್ಪನವರೇ, ನೀವು ಮೂರುವರೆ ದಶಕಗಳ ಕಾಲ ಉಪನ್ಯಾಸಕ ವೃತ್ತಿಯಲ್ಲಿ ಇದ್ದವರು. ಐವತ್ತು ವರ್ಷಗಳ ಸುಧೀರ್ಘ ಕಾಲ ಕನ್ನಡ ಕಾದಂಬರಿ ಬರೆದವರು. ಕನ್ನಡ ಸಾಹಿತ್ಯದ ಕೃಷಿಯಲ್ಲಿ ನಿಮ್ಮಂತಹವರು ಶ್ರೇಷ್ಟತೆಯ ಹಂಗಿಗಾಗಿ ಸಂಸ್ಕೃತ ಭಾಷೆಯಿಂದ ಪ್ರಭಾವಿತರಾಗಿ ಕಥೆ, ಕಾದಂಬರಿ, ಕಾವ್ಯ ರಚಿಸಿದ್ದೀರಿ. ಪಂಡಿತರೆನಿಸಿಕೊಂಡಿದ್ದೀರಿ. ನೀವು ಎಂದಾದರೂ ನಮ್ಮ ಕನ್ನಡ ನೆಲದ ನಮ್ಮ ಜನಪದರ ಭಾಷೆಯನ್ನು ಗಮನಿಸಿದ್ದೀರಾ? ದಕ್ಷಿಣದ ಚಾಮರಾಜನಗರದಿಂದ ಉತ್ತರದ ಬೀದರ್ ವರೆಗೆ ಮತ್ತು ಪೂರ್ವದ ಕೋಲಾರದಿಂದ ಪಶ್ಚಿಮದ ಕರಾವಳಿ ಹಾಗೂ ಬೆಳಗಾವಿಯವರೆಗೆ ಎಷ್ಟೋಂದು ಬಗೆಯ ಕನ್ನಡ ಭಾಷೆ ಇದೆ ಎಂಬುದನ್ನು ಬಲ್ಲಿರಾ?
ಹನ್ನೊಂದು ಮತ್ತು ಹನ್ನೆರೆಡನೆಯ ಶತಮಾನದಲ್ಲಿ ಡೋಹರ ಕಕ್ಕಯ್ಯ, ದೇವರ ದಾಸಿಮಯ್ಯನಿಂದ ಹಿಡಿದು ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಮತ್ತು ಮುಕ್ತಾಯಕ್ಕ ಇಂತಹ ಮಹನೀಯರ ವಚನಗಳನ್ನು ಓದಿದ್ದೀರಾ? ಅವರ ವಚನಗಳಲ್ಲಿ ಎಷ್ಟು ಸಂಸ್ಕೃತ ಶಬ್ದಗಳಿವೆ ಹುಡುಕಿ ಹೇಳಬಲ್ಲಿರಾ?
ಹೋಗಲಿ ನಮ್ಮ ತತ್ವಪದಕಾರರ ಗೀತೆಗಳನ್ನು ಆಲಿಸಿದ್ದೀರಾ? ಅಥವಾ ಓದಿದ್ದೀರಾ? ನಮ್ಮ ಮೌಖಿಕ ಕಾವ್ಯಗಳಾದ ಮಲೆ ಮಹಾದೇಶ್ವರ, ಮೈಲಾರಲಿಂಗ, ಮಂಟೆ ಸ್ವಾಮಿ ಕಾವ್ಯ ಹೀಗೆ ನೂರಾರು ಕಥನ ಕಾವ್ಯಗಳಿವೆ ಅವುಗಳು ಸಂಸ್ಕೃತ ಭಾಷೆಯಿಂದ ಪ್ರಭಾವಿತವಾದ ಕಾವ್ಯಗಳು ಎಂದು ಹೇಳಬಲ್ಲ ಧೈರ್ಯ ಇದೆಯಾ? ನಿಮಗೆ?
ದಯವಿಟ್ಟು ಅವುಗಳನ್ನು ಈಗಲಾದರೂ ಓದಿ. ನಿಮ್ಮ ತಲೆಯೊಳಗಿನ ಕಸ ಕರಗೀತು. ಅವರುಗಳು ನಿಮ್ಮ ಹಾಗೆ ಪ್ರಶಸ್ತಿ ಅಥವಾ ಸ್ಥಾನಮಾನಗಳಿಗೆ ಹಾತೊರೆದು ಹಾಡಿದವರಲ್ಲ, ತಾವು ಕಂಡ ಲೋಕವನ್ನು ಯಾವುದೇ ಹಂಗಿಲ್ಲದೆ ತಾವು ಬದುಕಿದ ಸಮಾಜದ ಜನರ ನುಡಿಯಲ್ಲಿ ಹಾಡಿದವರು.
ಅಷ್ಟೇ ಏಕೆ? ದಕ್ಷಿಣ ಕರ್ನಾಟಕದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ, ಶ್ರೀ ಕೃಷ್ಣ ಆಲನಹಳ್ಳಿ, ದೇವನೂರು ಮಹಾದೇವ ಅವರ ಗ್ರಾಮ ಭಾರತದ ಕಥೆಗಳು, ಉತ್ತರದಲ್ಲಿ ರಾವ್ ಬಹುದ್ದೂರ್ ಅವರ ಗ್ರಾಮಾಯಣ ದಂತಹ ಕಾದಂಬರಿ ಹೀಗೆ ಅನೇಕರನ್ನು ಹೆಸರಿಸಬಲ್ಲೆ. ಅಷ್ಟೇ ಏಕೆ ಪಿ.ಲಂಕೇಶರ ಬರವಣೆಗೆಯ ಭಾಷೆಯಲ್ಲಿ ಸಂಸ್ಕೃತ ಎಷ್ಟು ಪ್ರಮಾಣದಲ್ಲಿದೆ ಹೇಳಬಲ್ಲಿರಾ?
ಭೈರಪ್ಪನವರೇ ಉತ್ತರದವರ ಹಂಗಿನಲ್ಲಿ ಈವರೆಗೆ ಬದುಕಿದ್ದು ಸಾಕು. ಜೀವನದ ಕೊನೆಯ ದಿನಗಳಲ್ಲಿ ನೀವು ಹುಟ್ಟಿದ ಚೆನ್ನರಾಯ ಪಟ್ಟಣ ತಾಲ್ಲೂಕಿನ ಅಥವಾ ಬದುಕುತ್ತಿರುವ ಮೈಸೂರು ಜಿಲ್ಲೆಯ ಗ್ರಾಮೀಣ ಭಾಷೆಯನ್ನು ಒಮ್ಮೆ ಅವಲೋಕಿಸಿ. ನಿಮ್ಮಂತಹವರ ಸಾಹಿತ್ಯ ನಾಟಕದ ಕಲಾವಿದನೊಬ್ಬ ರಾತ್ರಿ ಬಣ್ಣ ಬಳಿದುಕೊಂಡು ಬೆಳಕಾದ ನಂತರ ತೊಳೆದು ಹಾಕುತ್ತಾನಲ್ಲಾ ಅಂತಹದ್ದು. ಜನರ ಎದೆಗೆ ಕಿವಿಯಾಗಿ ಅವರ ನೋವಿಗೆ ಧ್ವನಿಯಾದವರ ಕನ್ನಡ ನುಡಿ ಅಥವಾ ಭಾಷೆಗೆ ಎಂದಿಗೂ ಸಾವಿಲ್ಲ. ಇದಕ್ಕೆ ನಮ್ಮ ಮುಂದಿರುವ ವಚನಗಳೇ ಸಾಕ್ಷಿಯಾಗಿವೆ. ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ವಚನಗಳನ್ನು, ಮೌಖಿಕ ಕಾವ್ಯಗಳನ್ನು ಮತ್ತು ತತ್ವ ಪದಗಳನ್ನು ಓದಿರಿ. ಎಲ್ಲವೂ ಅಕ್ಷರ ರೂಪದಲ್ಲಿ ದಾಖಲಾಗಿವೆ.
ಇಂತಿ ನಿಮ್ಮ ಅಭಿಮಾನಿಯಾಗಲೊಲ್ಲದ
– ಜಗದೀಶ್ ಕೊಪ್ಪ, ಮೈಸೂರು




