ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರನ್ನು ಗುಲಾಮರನ್ನಾಗಿಸಬೇಡಿ

3 years ago

ಸದ್ಯದಲ್ಲಿಯೇ ಚುನಾವಣೆಗಳು ರಾಜ್ಯ ವಿಧಾನಸಭೆಗೆ ನಡೆಯುವ ಹಿನ್ನೆಲೆಯಲ್ಲಿ ಬಿ.ಜೆ.ಪಿ.ಯ ರಾಷ್ಟ್ರೀಯ ನಾಯಕರುಗಳ ಕರ್ನಾಟಕದ ಪ್ರವಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಮುಂದಿನ ನಾಲ್ಕೈದು ತಿಂಗಳುಗಳ ಕಾಲ ಎಲ್ಲರೂ ಇಲ್ಲಿಯೇ ಮನೆ ಮಾಡಿಕೊಂಡು ವಾಸ ಮಾಡುವ ಸ್ಥಿತಿಗೆ ಬಂದಿದ್ದಾರೆ‌. ಆದರೆ ಬಿ.ಜೆ.ಪಿ.ಯ ನಾಯಕರುಗಳು ತಮ್ಮ ರಾಷ್ಟ್ರ ನಾಯಕರನ್ನು ಓಲೈಸಿಕೊಳ್ಳುವ ಸಲುವಾಗಿ ತಾವು ಅವರಿಗೆ ಗುಲಾಮರಾಗುವುದು ಸಾಲದು ಎಂಬಂತೆ ಸಮಸ್ತ ಕನ್ನಡಿಗರನ್ನ ಗುಜರಾತಿನ ಗುಲಾಮರನ್ನಾಗಿಸುವ ಅಪಾಯದ ಸ್ಥಿತಿಗೆ ರಾಜ್ಯವನ್ನು ತಲುಪಿಸುತ್ತಿದ್ದಾರೆ.

1913ರಲ್ಲಿ ನಾಲ್ಕು ಕೃಷ್ಣರಾಜ ಒಡೆಯ‌ರು ಮತ್ತು ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿತ್ವದಿಂದ ಸ್ಥಾಪನೆಯಾದ ನಮ್ಮ ಹೆಮ್ಮೆಯ ಮೈಸೂರು ಬ್ಯಾಂಕ್‌ ಮುಳುಗುತ್ತಿರುವ ಉತ್ತರ ಭಾರತೀಯರ ಬ್ಯಾಂಕಿನಲ್ಲಿ ವಿಲೀನವಾಗಿ ನಮ್ಮ ಹಿರಿಮೆಯನ್ನೇ ಕಳೆದುಕೊಂಡು, 23- 10-1931ರಲ್ಲಿ ಎ.ಬಿ. ಶೆಟ್ಟಿರವರ ಕನಸಿನ ಕೂಸಾದ ವಿಜಯಾ ಬ್ಯಾಂಕ್ ಮತ್ತೊಂದು, ಬ್ಯಾಂಕಿನಲ್ಲಿ ವಿಲೀನವಾಗಿ ನಮ್ಮ ತನವನ್ನು ಕಳೆದುಕೊಂಡೆವು. 1925ರಲ್ಲಿ ಉಪೇಂದ್ರ ಅನಂತ ಪೈ ಮತ್ತು ಟಿ.ಎಂ.ಎ. ಪೈ ಇವರ ಕನಸಿನ ಕೂಸಾದ ಸಿಂಡಿಕೇಟ್ ಬ್ಯಾಂಕ್ ಸಹ ಮತ್ತೊಂದು ಬ್ಯಾಂಕಿನಲ್ಲಿ ವಿಲೀನವಾಗಿ ನಮ್ಮ ಅಭಿಮಾನವನ್ನೇ ಕಳೆದುಕೊಂಡವು. 12-03- 1906ರಲ್ಲಿ ಉಡುಪಿಯಲ್ಲಿ ಕಾನ್ ಬಹದ್ದೂರ್ ಆಜಿ ಅಬ್ದುಲಾ, ಆಸಿ ಖಾಸಿಂ ಬಹದ್ದೂರು, ಪಿ.ದಿ, ಭಂಡಾರಿ ಇವರುಗಳು ಸ್ಥಾಪಿಸಿದ ಕಾರ್ಮೋರೇಷನ್ ಬ್ಯಾಂಕ್ ವಿಲೀನದ ಪ್ರಕ್ರಿಯೆಯಿಂದ ಮಾಯವಾಯಿತು.
ಅಂದು ನಾವು ಯಾವ ಕನ್ನಡಿಗರು ವಿಲೀನದ ಪ್ರಕ್ರಿಯೆಯನ್ನು ವಿರೋಧಿಸಲೇ ಇಲ್ಲ. ಇದರ ಪರಿಣಾಮವಾಗಿ ಉತ್ತರ ಭಾರತೀಯರಿಗೆ ನಮ್ಮ ಮೌನ ಅವರಿಗೆ ಮತ್ತಷ್ಟು ಶಕ್ತಿಯನ್ನು ತುಂಬಿ ಈಗ ನಮ್ಮ ಹೆಮ್ಮೆಯ ಡಾ.ರಾಜ್ ಕುಮಾರ್ ಮತ್ತು ಪುನೀತ್‌ ರಾಜ್ ಕುಮಾ‌ರವರು ಉಚಿತವಾಗಿ ರಾಯಭಾರತ್ವವನ್ನು ನೀಡಿದ ಕೆ.ಎಂ.ಎಫ್ ಸಂಸ್ಥೆಯ ಉತ್ಪನ್ನಗಳಾದ ನಂದಿನಿಯನ್ನು ಅಮುಲ್ ವಿಲೀನ ಹೆಸರಿನಲ್ಲಿ ನುಂಗಲು ಹೊರಟಿದೆ.
ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್‌ರವರ ಕನಸಿನ ಕೂಸು ಭಾರತ ದೇಶದಲ್ಲಿ ಆನಂದ್ ಎಂಬ ಸಂಸ್ಥೆಯೊಂದಿಗೆ ಆರಂಭವಾಗಿ ಅಮುಲ್ ಡೇರಿ ಉತ್ಪನ್ನಗಳು ಆರಂಭಗೊಂಡು ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್‌ ಬಹದ್ದೂರ್ ಶಾಸ್ತ್ರಿ ಅಂತಿಮವಾಗಿ ಶ್ರೀಮತಿ ಇಂದಿರಾಗಾಂಧಿರವರ ನೆರವಿನಿಂದ ಕ್ಷೀರ ಕ್ರಾಂತಿಯಾಗಿ ಹೈನುಗಾರಿಕೆ ನಮ್ಮ ದೇಶದ ಅತ್ಯಂತ ದೊಡ್ಡ ಕ್ಷೇತ್ರವಾಗಿ ಕೋಟ್ಯಂತರ ಭಾರತೀಯರ ಬದುಕಿಗೆ ಆಸರೆಯಾಗಿ ಕೋಟ್ಯಂತರ ಜನರಿಗೆ ಉದ್ಯೋಗವನ್ನು ನೀಡಿ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಕರ್ನಾಟಕದಲ್ಲಿ 1955ರಲ್ಲಿ ಕೊಡಗು ಮಿಲ್ಕ್ ಫೆಡರೇಷನ್ ಎಂದು ಆರಂಭವಾಗಿ 1974ರಲ್ಲಿ ಇಡೀ ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ಡೇರಿ ಡೆವಲಪ್‌ಮೆಂಟ್ ಬೋರ್ಡ್ ಎಂದು ಸ್ಥಾಪನೆಯಾಗಿ 1984ರಲ್ಲಿ ಕರ್ನಾಟಕ ಮಿಲ್ಕ್ ಫೆಡರೇಷನ್ ಎಂಬ ಹೆಸರಿನೊಂದಿಗೆ ಹಲವಾರು ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನ ಘಟಕಗಳು, ಸಂಸ್ಕರಣ ಕೇಂದ್ರಗಳು ಹಾಗೂ ಹಾಲಿನಿಂದ ಅನೇಕ ತಿಂಡಿ ತಿನಿಸುಗಳನ್ನು, ಪದಾರ್ಥಗಳನ್ನು ತಯಾರಿಸಿ ನಂದಿನಿಯ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದೇವೆ.
ಕೆಂಗಲ್ ಹನುಮಂತಯ್ಯನವರು ಒಂದು ರಾಷ್ಟ್ರೀಯ ಪಕ್ಷದ ಮುಖ್ಯಮಂತ್ರಿಯಾಗಿದ್ದರು, ರಾಜ್ಯದ ಹಿತದ ಪ್ರಶ್ನೆ ಬಂದಾಗ ನೆಹರೂರವರ ಅಭಿಪ್ರಾಯವನ್ನು ಸಹ ತಿರಸ್ಕರಿಸಿರುತ್ತಾರೆ. ಅದೇ ರೀತಿಯಲ್ಲಿ ನಿಜಲಿಂಗಪ್ಪನವರು ರಾಜ್ಯದ ಸ್ವಾಭಿಮಾನದ ಪ್ರಶ್ನೆ ಬಂದಾಗ ಕೇಂದ್ರ ನಾಯಕರುಗಳ ವಿರುದ್ಧ ಸೆಟೆದು ನಿಂತಿದ್ದಾರೆ. ಅರಸುರವರು ಸಹ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದ ನಾಯಕರುಗಳ ಮುಂದೆ ತಮ್ಮ ಕುರ್ಚಿಯ ಸಲುವಾಗಿ ಎಂದು ತಲೆಬಾಗಿ ನಿಂತವರಲ್ಲ. ಕನ್ನಡಿಗರಾದ ನಾವು ಈಗಾಗಲೇ ಬೆಂಗಳೂರು ನಗರದಲ್ಲಿ ನಮ್ಮ ಭೂಮಿಯನ್ನು ಬಹುಮಹಡಿಗಳ ಕಟ್ಟಡಗಳ ನೆಪದಲ್ಲಿ ಉತ್ತರ ಭಾರತೀಯರಿಗೆ ಮಾರಾಟ ಮಾಡಿದ್ದೇವೆ. ರಾಷ್ಟ್ರೀಯ ಭಾಷಾ ನೀತಿಯ ಹೆಸರಿನಲ್ಲಿ ಕನ್ನಡವನ್ನು ಕಡೆಗಣಿಸುತ್ತಿದ್ದರೂ ಸುಮ್ಮನಿದ್ದೇವೆ. ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ವಿದ್ಯುತ್ ಸಾಮಗ್ರಿಗಳ ಮಾರಾಟ, ವಸ್ತ್ರ ವ್ಯಾಪಾರ ಹೀಗೆ ಎಲ್ಲವೂ ಉತ್ತರ ಭಾರತೀಯರ ಪಾಲಾಗಿದೆ.
ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವವರು ದೊರೆಯುತ್ತಲೇ ಇಲ್ಲ. ಹೀಗೆಯೇ ನಾವು ಧರ್ಮ, ದೇವರ ಹೆಸರಿನಲ್ಲಿ ಉತ್ತರ ಭಾರತೀಯರು ಎರಚುವ ಬೂದಿಗೆ ಮರಳಾಗಿ ನಮ್ಮತನವನ್ನು ಕಳೆದುಕೊಂಡರೆ, ಕರ್ನಾಟಕವನ್ನು ಕನ್ನಡಿಗರು ಆಳುವುದಿಲ್ಲ. ಗುಜರಾತಿನ ಮಂದಿ ಆಳುತ್ತಾರೆ. ನಿಮ್ಮ ಸ್ವಾರ್ಥ ಅಧಿಕಾರದ ಆಸೆಗಾಗಿ ಉತ್ತರ ಭಾರತೀಯರನ್ನು ಅತಿಯಾಗಿ ವಿಜೃಂಭಿಸುವುದು ಅವರ ಕೈಗೊಂಬೆಗಳಾಗಿ ಬದುಕುವುದು ನಿಮ್ಮ ಸ್ವಾರ್ಥವಷ್ಟೆ. ನಿಮ್ಮ ಸ್ವಾರ್ಥಕ್ಕಾಗಿ ಸಮಸ್ತ ಕನ್ನಡಿಗರನ್ನು ಗುಜರಾತಿನ ಗುಲಾಮರನ್ನಾಗಿಸಬೇಡಿ. ಈ ಚುನಾವಣೆ ಗುಜರಾತಿನಿಂದ ಆಳುವ ಸರ್ಕಾರ ಬೇಕೋ ಕನ್ನಡಿಗರಿಂದ ಆಳಿಸಿಕೊಳ್ಳುವ ಸರ್ಕಾರ ಬೇಕೋ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಾಗಿದೆ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply