ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಸ್ಯಾಂಟ್ರೋ ರವಿ ಬಗ್ಗೆ ಯಾವುದಾದರೂ ದೂರುಗಳಿದ್ದರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದ ಕೋರಮಂಗಲದ ಕೆಎಸ್ ಆರ್ ಪಿ ಪೆರೇಡ್ ಮೈದಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆ ಸಿಬ್ಬಂದಿಗೆ ನೀಡಲಾಗುವ ಕೇಂದ್ರ ಗೃಹ ಸಚಿವಾಲಯದ ಪ್ರಶಸ್ತಿಗೆ ಪಾತ್ರರಾದ ವಿಜೇತರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ. ಕುಮಾರಸ್ವಾಮಿಯವರಿಗೆ ಹೆಚ್ಚಿನ ಮಾಹಿತಿ ಇರಬೇಕು. ಏನೇ ಇದ್ದರೂ ಕಾನೂನು ಕ್ರಮ ವಹಿಸಲಾಗುವುದು ಎಂದರು.
ಆತ ಯಾವುದಾದರೂ ಅಪರಾಧ ಚಟುವಟಿಕೆಗಳಲ್ಲಿ, ಭಾಗಿಯಾಗಿದ್ದರೆ, ಪೊಲೀಸರು ಸೂಕ್ತ ಕ್ರಮ ತೆಗೆದು ಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಿನಿತ್ಯ ನನ್ನನ್ನು ನೂರಾರು ಜನರು ಅಹವಾಲು ಸಲ್ಲಿಸಲು ಭೇಟಿಯಾಗುತ್ತಾರೆ. ಕಾಣಲು ಬರುವ ಎಲ್ಲರ ಹಿನ್ನೆಲೆ ಚರಿತ್ರೆ ಬಗ್ಗೆ ಮಾಹಿತಿ ಇರುವುದಿಲ್ಲ ಎಂದರು.
ರಾಜ್ಯದ ಪೊಲೀಸ್ ಇಲಾಖೆಗೆ, ದೇಶದಲ್ಲಿಯೇ ಸೇವಾನಿಷ್ಟೆ, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದೆ ಎಂದ ಅವರು ಇಂದು ಪ್ರದಾನ ಮಾಡಲ್ಪಟ್ಟ ಗೌರವವು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ ಎಂದರು.
ಇಲಾಖೆಯ ಸಿಬ್ಬಂದಿ ದಕ್ಷತೆ ಹೆಚ್ಚಿಸಲು ಸರಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆಯ ಮೇಲೆ ಗಮನ ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ಅಪರ ಕಾರ್ಯದರ್ಶಿ ರಜನೀಶ್ ಗೋಯಲ್ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



