ಪಿಎಸ್ಐ ಅಕ್ರಮ ನೇಮಕ: ಅಮೃತ್ ಪೌಲ್​ ಪ್ರಾಸಿಕ್ಯೂಷನ್​ಗೆ ಸರ್ಕಾರದ ಅನುಮತಿ

3 years ago

ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪೌಲ್​ ಪ್ರಾಸಿಕ್ಯೂಷನ್​ಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಸೇವೆಯಿಂದ ಅಮಾನತುಗೊಂಡು ಜೈಲಿನಲ್ಲಿರುವ ಅಮೃತ್ ಪೌಲ್ ಅವರಿಗೆ ಸಂಕಷ್ಟ ಎದುರಾಗಿದೆ.

ಕೆಲ ದಿನಗಳ ಹಿಂದೆ ನಗರದ 24ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಲಕ್ಷ್ಮಿ ನಾರಾಯಣ ಭಟ್ ಅವರು ಜಾಮೀನು ತಿರಸ್ಕರಿಸಿ ಆದೇಶ ಹೊರಡಿಸಿದ್ದರು. ಈಗ ಅಮೃತ್ ಪೌಲ್ ವಿರುದ್ಧ ಪ್ರಾಸಿಕ್ಯೂಷನ್​ಗೆ ಸರ್ಕಾರ ಅನುಮತಿ ನೀಡಿದೆ.

ಐಪಿಸಿ ಸೆಕ್ಷನ್ 120B(ಅಪರಾಧಿಕ ಒಳಸಂಚು), 409(ಸರ್ಕಾರಿ ನೌಕರನಾಗಿ ಅಪರಾಧಿಕ ನಂಬಿಕೆ ದ್ರೋಹ), 420(ವಂಚನೆ), 465(ಸುಳ್ಳು ಸ್ಪಷ್ಟನೆಗೆ ದಂಡನೆ), 468(ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ), 471(ಸುಳ್ಳು ಸ್ಪಷ್ಟನೆ ದಾಖಲಿಸಿ, ದಸ್ತಾವೇಜು ಅಭಿಲೇಖ ನೈಜವಾದುದೆಂದು ಬಳಕೆ), 420, IPC 34 (ಏಕೋದ್ದೇಶವನ್ನು ಮುಂದುವರೆಸಲು ಅನೇಕ ವ್ಯಕ್ತಿಗಳೊಂದಿಗೆ ಮಾಡಿದ ಕೃತ್ಯಲೋಪ) ಅಡಿ ಅಮೃತ್ ಪೌಲ್​ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಮೃತ್ ಪಾಲ್ ವಿರುದ್ಧ ಹಲವು ಸಾಕ್ಷ್ಯಗಳು ದೊರೆತಿದ್ದು, ಸಿಆರ್ ಪಿಸಿ 164 ಅಡಿಯಲ್ಲಿ ನ್ಯಾಯಾಲಯದ ಮುಂದೆ ಅಮೃತ್ ಪೌಲ್ ವಿರುದ್ಧದ ಹೇಳಿಕೆಗಳನ್ನು ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ. ಕಳೆದ ಮೇ ನಲ್ಲಿಯೇ ಪಿಎಸ್ಐ ಪರೀಕ್ಷಾ ಅಕ್ರಮ ನೇಮಕ ಕುರಿತಂತೆ ದೂರು ಬಂದಿದ್ದವು. ಅಕ್ಟೋಬರ್ ನಲ್ಲಿ ಬಂಧಿತ ಡಿವೈಎಸ್​ಪಿ ಶಾಂತರಾಜು ಸೇರಿ ಪಿಎಸ್ಐ ಅವ್ಯವಹಾರದ ಬಗ್ಗೆ ಪಿಟಿಶನ್ ಹಾಕಲಾಗಿತ್ತು.

ನೇಮಕ ವಿಭಾಗದ ಆಡಳಿತಾಧಿಕಾರಿ ಸುನೀತಾ ಬಾಯಿಗೆ ಕೆಲವರು ದೂರು ನೀಡಿದ್ದರು. ಈ ವೇಳೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ ಗಮನಕ್ಕೆ ತಂದಿದ್ದರು. ಈ ವೇಳೆ ಪಿಎಸ್ಐ ಪರೀಕ್ಷಾ ಅಕ್ರಮ ದೂರಿನ ಪ್ರತಿ ಕಸದ ಬುಟ್ಟಿಗೆ ಎಸೆಯುವಂತೆ ಅಮೃತ್ ಪೌಲ್ ಹೇಳಿದ್ದರು. ಈ ಬಗ್ಗೆ ಸಿಐಡಿ ತನಿಖೆ ವೇಳೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕದ್ದು ದಾಖಲಾಗಿದೆ. ಈ ಕುರಿತು ನ್ಯಾಯಾಲಯದ ಮುಂದೆ ಸುಮೀತಾ ಬಾಯಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಖುದ್ದು ದೂರು ಆಲಿಕೆ: ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪೌಲ್ ಅಣತಿಯಂತೆ ಪಿಎಸ್ಐ ಸ್ಕ್ಯಾಮ್ ಮಾಡಲಾಗಿದೆ. ಜೂನ್ 6 ಮತ್ತು 12 ರಂದು ಕೆಲ ಅಭ್ಯರ್ಥಿಗಳು ಖುದ್ದು ಅಮೃತ್ ಪೌಲ್ ಅವರನ್ನು ಸಿಐಡಿ ಕಾರ್ಲಟನ್ ಭವನದ ಆವರಣದಲ್ಲಿರುವ ಅಮೃತ್ ಪಾಲ್ ಕಚೇರಿಯಲ್ಲಿ ಭೇಟಿ ಮಾಡಿದ್ದರು.

545 ಪಿಎಸ್ಐ ಅಭ್ಯರ್ಥಿಗಳಿಂದ ಎಡಿಜಿಪಿ ಅಮೃತ್ ಪಾಲ್ ಖುದ್ದು ದೂರು ಆಲಿಸಿದ್ದರು. ಬ್ಲೂಟೂತ್ ಸೇರಿದಂತೆ ಇನ್ನೂ ಕೆಲ ಮಾದರಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಅಭ್ಯರ್ಥಿಗಳು ಹೇಳಿದ್ದರು. ಈ ವೇಳೆ ಅಮೃತ್ ಪೌಲ್ ದೂರನ್ನು ಗಂಭೀರವಾಗಿ ಪರಿಗಣಿಸದೆ, ಕ್ರಮ ಜರುಗಿಸದೆ ಅರಿವಿದ್ದು ಇಲ್ಲದಂತೆ ವರ್ತನೆ ಮಾಡಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕವೂ ಕ್ರಮ ಜರುಗಿಸದೆ ಕಳ್ಳಾಟ ಮುಂದುವರೆಸಿದ್ದರು. ಈ ಎಲ್ಲಾ ಅಂಶಗಳನ್ನ ಸಿಐಡಿ ಅಧಿಕಾರಿಗಳು ತನಿಖೆ ವೇಳೆ ಎಳೆ-ಎಳೆಯಾಗಿ ದಾಖಲಿಸಿಕೊಂಡಿದ್ದಾರೆ.

1 ಕೋಟಿ 35 ಲಕ್ಷ: ಇನ್ನು ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಹರ್ಷ ಎಂಬಾತ ಪಿಎಸ್ಐ ಅಕ್ರಮ ನೇಮಕದ ಅಭ್ಯರ್ಥಿಗಳಿಂದ ಸಂಗ್ರಹಿದ್ದ ಬರೋಬ್ಬರಿ 1 ಕೋಟಿ 35 ಲಕ್ಷ ಹಣವನ್ನು ಕಾರ್ಪೋರೇಷನ್ ಸಮೀಪದ ಹಡ್ಸನ್ ಸರ್ಕಲ್ ಬಳಿ ಪಡೆದಿದ್ದರು. ಹರ್ಷ ಪಡೆದಿದ್ದ ಲಂಚದ ಹಣ ಬ್ಯಾಗ್ ಅನ್ನು ಡಿವೈಎಸ್ ಪಿ ಶಾಂತಕುಮಾರ್ ಪಡೆದುಕೊಂಡಿದ್ದರು. ನೀಲಿ‌ ಬಣ್ಣದ ಬ್ಯಾಗ್ ನಲ್ಲಿ 2000 ಮತ್ತು 500 ಮುಖಬೆಲೆಯ ಹಣವಿತ್ತು. ಮೈಸೂರು ಬ್ಯಾಂಕ್ ಸಮೀಪದ ಮುನೇಶ್ವರ ದೇವಾಲಯದ ಬಳಿ ಡಿವೈಎಸ್ ಪಿ ಶಾಂತಕುಮಾರ್ ಹಣದ ಬ್ಯಾಗ್ ಪಡೆದಿದ್ದರು.

ಅಮೃತ್ ಪೌಲ್ ಗೆ ಕರೆ: ಮರುದಿನ ಸಿಐಡಿ ಶನೇಶ್ವರ ದೇವಾಲಯದ ಬಳಿ ಹಣದ ಸಮೇತ ಬರುವಂತೆ ಅಮೃತ್ ಪೌಲ್ ಕರೆ ಮಾಡಿ ಹಣ ಪಡೆದಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಅಮೃತ್ ಪಾಲ್​ಗೆ ಖುದ್ದು ಡಿವೈಎಸ್​ಪಿ ಶಾಂತಕುಮಾರ್ 1 ಕೋಟಿ 35 ಲಕ್ಷ ಹಣವನ್ನು ನೀಡಿದ್ದರು. ಹಣವನ್ನು ಪಡೆದುಕೊಂಡ ಎಡಿಜಿಪಿ ಅಮೃತ್ ಪೌಲ್ ತನ್ನ ಮನೆಗೆ ತೆಗೆದುಕೊಂಡಿ ಹೋಗಿದ್ದರು ಎಂಬ ಬಗ್ಗೆ ಸಿಐಡಿ ತನಿಖೆ ವೇಳೆ ಮಾಹಿತಿ ಸಿಕ್ಕಿತ್ತು.

Leave a Reply