ಗಣಿಗಳ ದುರ್ಬಳಕೆ ಮಾಡಿಕೊಂಡರೆ ಎಲ್ಲವೂ ನಾಶವಾಗುತ್ತದೆ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ದೇಶದಲ್ಲಿ ಗಣಿಗಳ ಸದ್ಬಳಕೆಯಿಂದ ದೇಶ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಗಣಿಗಳ ದುರ್ಬಳಕೆ ಮಾಡಿಕೊಂಡರೆ ಎಲ್ಲವೂ ನಾಶವಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕಲ್ಲಿದ್ದಲು ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ‌ ಅವರು, ಭಗವಂತನ ಪಂಚಭೂತದಲ್ಲಿ ಭೂಮಿ ತಾಯಿಯೊಬ್ಬಳು, ಭೂತಾಯಿಯ ಗರ್ಭದಲ್ಲಿ ಮನುಷ್ಯನ ಭವಿಷ್ಯ ಇದೆ. ಭೂಮಿಯಲ್ಲಿ ದೇವರ ಅಸ್ತಿತ್ವ ಕಾಣುತ್ತೇವೆ. ದೇವರ ಅಸ್ತಿತ್ವ ಮನುಕುಲದ ಒಳಿತಿಗೆ ಇದೆ. ಹಾಗಾಗಿ, ಗಣಿಗಳ ದುರ್ಬಳಕೆಯಾಗಬಾರದು, ಗಣಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಧಾನಿ ಮೋದಿ ಅವರು ಕನಸುಗಾರರು ಗಣಿ ಉದ್ಯಮದ ಸದ್ಬಳಕೆಗೆ ಗಣಿ ನೀತಿಯನ್ನು ಜಾರಿ ಮಾಡಿದ್ದಾರೆ. ಗಣಿ ಉದ್ಯಮ ಗಣಿ ನೀತಿಯನ್ನು ಬಳಸಿಕೊಂಡು ಗಣಿಗಾರಿಕೆಯನ್ನು ದೇಶದ ಒಳಿತಿಗೆ ಪೂರಕವಾಗಿ ಮಾಡಬೇಕು ಎಂದರು.

ರಾಜ್ಯದಲ್ಲೂ ಗಣಿ ನೀತಿ ಜಾರಿಯಾಗಿದೆ. ಕರ್ನಾಟಕ ಅತೀ ಹೆಚ್ಚು ನವೀಕರಣ ಇಂಧನ ಉತ್ಪಾದಿಸುವ ರಾಜ್ಯವಾಗಿದೆ. ಮುಂದಿನ ಮೂರು ವರ್ಷದಲ್ಲಿ ನವೀಕರಣ ಇಂಧನದಲ್ಲಿ 2.5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದರು.

ಗಣಿ ಉದ್ಯಮದವರಿಗೆ ರಾಜ್ಯ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ರಾಜ್ಯ ಒಳ್ಳೆಯ ಗಣಿ ನೀತಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಕಬ್ಬಿಣ ಮತ್ತು ಅದಿರು ಉತ್ಪಾದನೆಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಲಿದೆ ಎಂದರು.

ಅನೇಕ ಗಣಿ ಕಂಪನಿಗಳು ಕೋಲಾರ ಚಿನ್ನದ ಗಣಿ ಮರು ಆರಂಭಿಸಲು ಮನವಿ ಸಲ್ಲಿಸಿವೆ. ರಾಜ್ಯದಲ್ಲಿ ಸರಳ ಗಣಿ ನೀತಿಯನ್ನು ಉದ್ಯಮಿಗಳು ಬಳಸಿಕೊಂಡು ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಅವರು ಕರೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಷಿ, ಕಲ್ಲಿದ್ದಲ್ಲನ್ನು ಮುಂದಿನ ಪೀಳಿಗೆಗೆ ಉಳಿಸುವ ರೀತಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯಬೇಕಿದೆ ಎಂದರು.

ಕಲ್ಲಿದ್ದಲು ಹರಾಜಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಗಣಿಗಾರಿಕೆ ನೀತಿಯಲ್ಲೂ ಬದಲಾವಣೆ ತಂದಿದ್ದೇವೆ, ಕಳೆದ ಒಂದು ವರ್ಷದಲ್ಲಿ 115 ಕಲ್ಲಿದ್ದಲು ಬ್ಲಾಕ್‌ಗಳು ಹರಾಜಾಗಿವೆ. ಹೆಚ್ಚು ಮಾಲಿನ್ಯವಾಗದಂತೆ ಗಣಿಗಾರಿಕೆಗಳು ನಡೆಯಬೇಕು ಎಂದರು.

ಮುಂದಿನ ದಿನಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ. ಶೇ. 25 ರಷ್ಟು ಹೆಚ್ಚು ವಿದ್ಯುತ್ ಬೇಡಿಕೆ ಇದೆ. 2040ರ ವೇಳೆಗೆ ವಿದ್ಯುತ್ ಬೇಡಿಕೆ ದ್ವಿಗುಣವಾಗಬಹುದು ಎಂದು ಅವರು ಹೇಳಿದರು.

ಸಮಾವೇಶದಲ್ಲಿ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹಾಗೂ ಗಣಿ ಉದ್ಯಮಿಗಳು ಪಾಲ್ಗೊಂಡಿದ್ದರು.

Leave a Reply