ಅಂಗವಿಕಲರಿಗಾಗಿ ಆರೋಗ್ಯ ಸಿರಿ ವಿಶೇಷ ಯೋಜನೆ ಜಾರಿ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ಅಂಗವಿಕಲರಿಗಾಗಿ ರಾಜ್ಯ ಸರ್ಕಾರ ಆರೋಗ್ಯ ಸಿರಿ ವಿಶೇಷ ಯೋಜನೆಯನ್ನು ಜಾರಿ ಮಾಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲ ಮಕ್ಕಳಿಗೆ ಐದು ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯಾದ ಆರೋಗ್ಯ ಸಿರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದರು.

ಅಂಗವಿಕಲರಿಗೆ ಉದ್ಯೋಗದಲ್ಲಿ ಶೇ.5 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಹಾಗೆಯೇ, ಸರ್ಕಾರಿ ಮನೆಗಳನ್ನು ಹಂಚಿಕೆ ಮಾಡುವಾಗಲೂ ಅಂಗವಿಕಲರಿಗೆ ಮೀಸಲಾತಿ ಒದಗಿಸುವುದಾಗಿಯೂ ಹೇಳಿದರು.

ಅಂಗವಿಕಲರಿಗೆ ದ್ವಿಚಕ್ರ ಮೋಟಾರು ವಾಹನಗಳನ್ನು ನೀಡಲು ಈಗಿರುವ 15 ಕೋಟಿ ರೂ. ಜತೆಗೆ ಇನ್ನೂ 22 ಕೋಟಿ ರೂ.ಗಳನ್ನು ಒದಗಿಸಿ 2 ಸಾವಿರ ಅಂಗವಿಕಲರಿಗೆ ಮೋಟಾರು ದ್ವಿಚಕ್ರ ವಾಹನಗಳನ್ನು ವಿತರಿಸುವುದಾಗಿ ಹೇಳಿದರು. ಜೊತೆಗೆ ಮುಂದಿನ ಬಜೆಟ್‌ನಲ್ಲಿ ಅಂಗವಿಕಲರಿಗೆ ವಿಶೇಷ ಅನುದಾನವನ್ನು ಒದಗಿಸುವ ಭರವಸೆ ನೀಡಿದರು.

ಬುದ್ಧಿಮಾಂಧ್ಯ ಮಕ್ಕಳಿಗೆ ಶೆಲ್ಟರ್‍ಡ್ ವರ್ಕ್‌ಶಾಪ್‌ಗಳನ್ನು ಮಾಡುವ ತೀರ್ಮಾನ ಮಾಡಲಾಗಿದೆ. ಅಂಗವಿಕಲ ಮಕ್ಕಳು ದೇವರ ಮಕ್ಕಳಿದ್ದಂತೆ, ನನ್ನೆಲ್ಲ ದೇವರ ಮಕ್ಕಳಿಗೆ ನಮಸ್ಕಾರ. ನಿಮ್ಮಲ್ಲಿ ನಾವು ಯಾರಿಗೂ ಕಡಿಮೆ ಎಂಬ ಕೊರಗು ಬೇಡ, ವಿಶೇಷ ಶಕ್ತಿ ಹೊಂದಿರುವ ದೇವರ ಮಕ್ಕಳು ನೀವು. ನಮ್ಮೆಲ್ಲರಿಗಿಂತಲೂ ಶಕ್ತಿಶಾಲಿಗಳು. ಸಮಾಜದಲ್ಲಿ ಎಲ್ಲವನ್ನು ಉಳ್ಳವರು ದೇವರ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಉಪಸ್ಥಿತರಿದ್ದರು.

Leave a Reply