ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಇದೇ ತಿಂಗಳು 27ಕ್ಕೆ ಮುಂದೂಡಿಕೆ

3 years ago

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲ ಬಿದರೂರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿರುವ ಎಲ್ಲಾ ಆಕಾಂಕ್ಷಿಗಳ ಸಭೆ ಬೆಂಗಳೂರು ಹೊರವಲಯದ ವರ್ತೂರಿನ ಖಾಸಗಿ ರೆಸಾರ್ಟ್ ನಲ್ಲಿ‌ ನಡೆಯುತ್ತಿದೆ. ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದ ಶ್ರೀಶೈಲ ಅವರೂ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಆರಂಭದಲ್ಲೇ ವಾಂತಿ ಮಾಡಿಕೊಂಡ ಅವರು ಅಲ್ಲಿಯೇ ಕುಸಿದುಬಿದ್ದರು.

ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆಸ್ಪತ್ರೆಯಲ್ಲಿ  ಚಿಕಿತ್ಸೆ ಆರಂಭಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು. ತೀವ್ರ ಹೃದಯಾಘಾತದಿಂದ ಅವರು ‌ಮೃತ ಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಬಿಜೆಪಿಯಿಂದ ರೋಣ ಮತ್ತು ಗದಗ ಕ್ಷೇತ್ರಗಳಿಂದ ತಲಾ ಒಂದು ಬಾರಿ ಶಾಸಕರಾಗಿದ್ದ ಶ್ರೀಶೈಲ ಅವರಿಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷ ಟಿಕೆಟ್‌ ನೀಡಿರಲಿಲ್ಲ. 2019ರಲ್ಲಿ ಅವರು ಕಾಂಗ್ರೆಸ್‌ ಸೇರಿದ್ದರು. ಈ ಬಾರಿ ಗದಗ ಮತ್ತು ರೋಣ ಕ್ಷೇತ್ರಗಳಲ್ಲಿ ಟಿಕೆಟ್ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಶ್ರೀಶೈಲ ಅವರಿಗೆ 60 ವರ್ಷ ವಯಸ್ಸಾಗಿತ್ತು.

ಇದಾದ ನಂತರ ಟಿಕೆಟ್ ಆಕಾಂಕ್ಷಿಗಳ ಸಭೆ ಆರಂಭಿಸುವ ಮುನ್ನ ಕಾಂಗ್ರೆಸ್ ನಾಯಕರು ಮೌನಾಚರಣೆ ಮಾಡುವ ಮೂಲಕ ಬಿದರೂರು ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಬಳಿಕ ಶ್ರೀಶೈಲಪ್ಪ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಇದೇ ತಿಂಗಳು 27 ರಂದು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಬಿದರೂರು ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣೆವೇ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ದುರಾದೃಷ್ಟವಶಾತ್ ಅವರು ಬದುಕುಳಿಯಲಿಲ್ಲ ಎಂದು ಅವರು ಹೇಳಿದರು.

ನಾನು ಮತ್ತು ಅವರು ಶಾಸಕರಾಗಿ ಹಲವು ಸಮಿತಿಗಳಲ್ಲಿ ಕೆಲಸ ಮಾಡಿದ್ದೇವೆ. ಇಂದು ಸಭೆಯಲ್ಲಿ ಭಾಗವಹಿಸಲು ಆಗಮಿಸಿದಾಗ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಕೊನೆಯುಸಿರೆಳೆದಿದ್ದಾರೆ. ನಾನು, ನಮ್ಮ ಕಾರ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಿ ಎಲ್ಲರ ಒಮ್ಮತದ ತೀರ್ಮಾನದ ಮೇರೆಗೆ ಈ ಸಭೆಯನ್ನು 27ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಅಂದಿನ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಅಭ್ಯರ್ಥಿಯಾಗಲು ಅರ್ಜಿ ಹಾಕಿರುವವರಿಗೆ ಜೂಮ್ ಸಭೆ ಲಿಂಕ್ ಕಳುಹಿಸಲಾಗುವುದು. ನಿಮಗೆ ಕೊಡಬೇಕಾದ ಮಾರ್ಗದರ್ಶನವನ್ನು ನೀವುಗಳು ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಶೇರ್ ಮಾಡುತ್ತೇವೆ. ಮತದಾರರ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್ ಗೆ ನೀಡಲಾಗುವುದು. ನೀವುಗಳು ನಿಮ್ಮ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಪರಿಶೀಲಿಸಬೇಕು. ಕೈಬಿಡಲಾಗಿರುವ ಹೆಸರನ್ನು ಮತ್ತೆ ಸೇರಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.

Leave a Reply