ದಾವಣಗೆರೆ: ಮೂರು ದಿನಗಳಿಂದ ನಾಪತ್ತೆಯಾಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಶಿವಮೊಗ್ಗ ಮೂಲಕ ಹೊನ್ನಾಳಿ ಕಡೆ ಬಂದು ಕಣ್ಮರೆಯಾಗಿದ್ದು, ಅವರು ಹಾಗೂ ಅವರ ಕಾರು ಹೊನ್ನಾಳಿ ತಲುಪಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ವೈಟ್ ಕ್ರೇಟಾ ಕಾರು ಶಿವಮೊಗ್ಗದಿಂದ ಸುರಹೊನ್ನೆ ಬಳಿ ಪಾಸ್ ಆಗಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಪಾಸ್ ವಿಡಿಯೋ ಮಾತ್ರ ಲಭ್ಯವಾಗಿದೆ. ಆದರೆ ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಸುಳಿವಿಲ್ಲ. ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಯಾವುದೇ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿಲ್ಲ. ಹೀಗಾಗಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಅ.30 ರಂದು ಚಿಕ್ಕಮಗಳೂರಿಗೆ ಹೋಗಿದ್ದ ಚಂದ್ರಶೇಖರ್ ವಾಪಸ್ ಹೊನ್ನಾಳಿ ತಲುಪಿದ್ದಾರೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಚಂದ್ರಶೇಖರ್ ಮೊಬೈಲ್ ಹೊನ್ನಾಳಿಯಲ್ಲೇ ಸ್ವಿಚ್ ಆಫ್ ಆಗಿದ್ದು ಸಿಸಿ ಟಿವಿ ದೃಶ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸುರಹೊನ್ನೆ ಬಳಿ ಎರಡು ಕಾರು ಜೊತೆಯಲ್ಲಿ ಪಾಸ್ ಆಗಿವೆ. ಒಂದು ಕಾರ್ ಚಂದ್ರು ಅವರದಾಗಿದ್ದು, ಇನ್ನೊಂದು ಕಾರು ಯಾರದ್ದು ಎನ್ನುವ ಪ್ರಶ್ನೆ ಉದ್ಭವಿಸಿದೆ. ಚಂದ್ರು ಎಲ್ಲಿದ್ದಿಯೋ ಬಾರೋ ಎಂದು ಅಣ್ಣನ ಮಗನನ್ನು ನೆನೆದು ಶಾಸಕ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿದ್ದಾರೆ.
ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡುತ್ತಿದ್ದ ಚಂದ್ರಶೇಖರ್ ಅ.30 ರ ಸಂಜೆ ಆರು ಗಂಟೆಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಆಗಮಿಸಿದ್ದ ವಿನಯ್ ಗುರೂಜೀಯವರನ್ನು ಸ್ನೇಹಿತ ಕಿರಣ್ ರೊಂದಿಗೆ ಭೇಟಿ ಮಾಡಿ ಕೆಲವರಿಗೆ ಊಟ ಕೊಡಿಸಿದ್ದಾರೆ. ಅದಾದ ಬಳಿಕ ಶಿವಮೊಗ್ಗದಿಂದ ಹಿಂದಿರುಗಿದ ಚಂದ್ರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಬಂದಿದ್ದೇ ಕೊನೆ. ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಇನ್ನು ಪೊಲೀಸರು ಕುಟುಂಬಸ್ಥರು ಕೂಡ ಸಾಕಷ್ಟು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಶಾಸಕ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅಳುತ್ತ ಮಾಹಿತಿ ನೀಡಿದರು.
ಇನ್ನು ತಮ್ಮ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ಚಂದ್ರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ. ಚಂದ್ರಶೇಖರ್ ತಂದೆ ರಮೇಶ್ ತಲೆ ಮೇಲೆ ಕೈ ಹೊತ್ತು ಕೂತಿರುವ ದೃಶ್ಯಗಳು ಕಂಡುಬಂದಿವೆ. ಅ.30ರ ರಾತ್ರಿ ಶಿವಮೊಗ್ಗದಲ್ಲಿ ಚಂದ್ರಶೇಖರ್ ಕಾರು ಪಾಸ್ ಆಗಿರುವುದು ಸಿಸಿಟಿವಿ ಸೆರೆಯಾಗಿದೆ. ಅಂದು ರಾತ್ರಿ 11.56ಕ್ಕೆ ಶಿವಮೊಗ್ಗದಿಂದ ವಾಹನ ಪಾಸ್ ಆಗಿದ್ದು, ಅ.31 ಬೆಳಿಗ್ಗೆ 6.48 ಮೊಬೈಲ್ ಫೋನ್ ಕೊನೆಯ ಲೊಕೇಶನ್ ತೋರಿಸಿದೆ.
ದಾವಣಗೆರೆ ಪೊಲೀಸರಿಂದ ತೀವ್ರ ತಪಾಸಣೆ ಕಾರ್ಯ ಮುಂದುವರೆದಿದ್ದು, ಚಂದ್ರಶೇಖರ್ ಅವರು ಚಲಾಯಿಸುತ್ತಿದ್ದ ಕ್ರೇಟಾ ಕಾರು ಸಹ ಇದುವರೆಗೂ ಪತ್ತೆಯಾಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇನ್ನು ತಮ್ಮ ನಾಯಕನಿಗೆ ಸಮಾಧಾನ ಮಾಡಲು ಎಂಪಿ ರೇಣುಕಾಚಾರ್ಯ ನಿವಾಸಕ್ಕೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸುತ್ತಿದ್ದು, ಕೆಎ17 ಎಂಎ 2534 ಕ್ರೇಟಾ ಕಾರು ಚಂದ್ರಶೇಖರ್ ಮೊಬೈಲ್ ಸಂಖ್ಯೆ 8792667691 ಇದಾಗಿದ್ದು ಇದುವರೆಗೂ ಸ್ವಿಚ್ ಆಫ್ ಆಗಿದೆ.




