ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಕೆಂಪುಪಟ್ಟಿ ಸಂಸ್ಕೃತಿಗೆ ವಿದಾಯ ಹೇಳಿ, ಹೂಡಿಕೆದಾರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕು. ಈ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಬೆಂಗಳೂರಿನಲ್ಲಿ ಏರ್ಪಡಿಸಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನ ಇನ್ವೆಸ್ಟ್ ಕರ್ನಾಟಕವನ್ನು ವರ್ಚ್ಯುಯಲ್ ಆಗಿ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಸಂಪ್ರದಾಯ ಮತ್ತು ತಂತ್ರಜ್ಞಾನ ಎರಡೂ ಇರುವ ಅದ್ಭುತ ಸ್ಥಳವಾಗಿದೆ. ಇದು ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮವಿರುವ ಸ್ಥಳವಾಗಿದೆ. ನಾವು ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ನಮ್ಮ ಮನಸ್ಸಿಗೆ ಮೊದಲು ಬರುವುದೇ ಬ್ರ್ಯಾಂಡ್ ಬೆಂಗಳೂರು ಎಂದರು.
ನಿನ್ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆದಿದೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು. ಕರ್ನಾಟಕ ಸ್ಟಾರ್ಟಪ್ ಹಬ್, ಪ್ರಪಂಚದಲ್ಲಿ ಬ್ರಾಂಡ್ ಬೆಂಗಳೂರು ಎಂಬ ಹೆಸರು ಖ್ಯಾತಿ ಪಡೆದಿದೆ. ಕರ್ನಾಟಕ ಪ್ರವಾಸೋದ್ಯಮ ತಾಣವಾಗಿದೆ. ಇಲ್ಲಿನ ಭಾಷೆ ಸಮೃದ್ಧಿಯಾಗಿದೆ. ಇಲ್ಲಿನ ಕಲೆ, ಸಂಸ್ಕೃತಿ ಮತ್ತು ಆಚರಣೆ ಅದ್ಭುತವಾಗಿದೆ ಎಂದರು.
ಕೋವಿಡ್ ಸಂಕಷ್ಟದ ಸವಾಲಿನ ನಡುವೆಯೂ ದೇಶ ಪ್ರಗತಿಯ ಹಾದಿಯಲ್ಲಿದೆ. ಸವಾಲುಗಳನ್ನು ಎದುರಿಸಿಕೊಂಡು ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ರಾಜ್ಯಗಳು ಪ್ರಗತಿ ಸಾಧಿಸಿದರೆ ದೇಶವೂ ಅಭಿವೃದ್ಧಿ ಹೊಂದುತ್ತದೆ. ಈ ದಿಸೆಯಲ್ಲಿ ಜಾಗತಿಕ ಹೂಡಿಕೆದಾರರ ಸಮ್ಮೇಳನ ಹೆಚ್ಚು ಅನುಕೂಲಕಾರಿ ಎಂದರು.
ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಸಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕಾಗಿ ನಮ್ಮ ಸರ್ಕಾರ 1,500 ಹಳೆಯ ಮತ್ತು ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ. ದೇಶ ಈಗ ಡಿಜಿಟಲ್ ಕ್ರಾಂತಿಯ ಹಾದಿಯಲ್ಲಿದೆ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.
ಭಾರತ ಮುಂದುವರೆಯಬೇಕಿದ್ದರೆ ರಾಜ್ಯಗಳು ಮುಂದುವರೆಯಬೇಕು. ವಿಶೇಷ ಸೆಕ್ಟರ್‌ನಲ್ಲಿ ರಾಜ್ಯಗಳು ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಷಯ. ಈ ಸಮಾವೇಶದಲ್ಲಿ ಸಾವಿರಾರು ಕೋಟಿ ಹೂಡಿಕೆಯಾಗುತ್ತಿದೆ. ಇದರಿಂದ ಅನೇಕರಿಗೆ ಉದ್ಯೋಗ ಸಿಗಲಿದೆ ಎಂದರು.
ಕೋವಿಡ್ ಹೊಡೆತ ಹಾಗೂ ಉಕ್ರೇನ್ ಯುದ್ಧದಿಂದ ಇಡೀ ವಿಶ್ವ ಬಳಲುತ್ತಿದೆ. ಭಾರತದಲ್ಲಿ ಕೂಡ ಇದರ ಪರಿಣಾಮ ಸಾಕಷ್ಟು ಬೀರಿದೆ. ಆದರೆ, ಭಾರತ ಇದನ್ನು ಭಿನ್ನವಾಗಿ ನೋಡುತ್ತಿದೆ. ಭಾರತದ ಅರ್ಥವ್ಯವಸ್ಥೆ ಗಟ್ಟಿಯಾಗಿದೆ. ಎಷ್ಟೇ ಅಡೆತಡೆಗಳು ಬಂದರೂ ಭಾರತ ತನ್ನ ಕೆಲಸಗಳನ್ನು ಮಾಡುತ್ತಲೇ ಇದೆ. ಕೋವಿಡ್ ಸಮಯದಲ್ಲಿ ಔಷಧಿ, ಲಸಿಕೆಯನ್ನು ವಿಶ್ವಕ್ಕೆ ನೀಡುವಲ್ಲಿ ಕೂಡ ಯಶಸ್ವಿಯಾಗಿದೆ. ಭಾರತದ ಅರ್ಥವ್ಯವಸ್ಥೆಯು ದಿನದಿಂದ ದಿನಕ್ಕೆ ಗಟ್ಟಿಯಾಗಿ ಮುಂದುವರೆಯುತ್ತಿದೆ. ವಿಶ್ವಕ್ಕೆ ನಮ್ಮ ತಯಾರಿಯನ್ನು ತೋರಿಸಬೇಕಾಗಿದೆ. ಕೆಲವು ವರ್ಷಗಳ ಮುನ್ನ ನಾವು ಪಾಲಿಸಿ ಮೇಕಿಂಗ್‌ನಲ್ಲಿ ಕಷ್ಟ ಪಡುತ್ತಿದ್ದೆವು. ಆದರೆ ಈಗ ನಮ್ಮ ನಿಲುವುಗಳು ಬದಲಾಗಿದೆ ಎಂದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನವು ಸ್ಪರ್ಧಾತ್ಮಕ ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಯ ಭಾಗ. ಜಗತ್ತಿನ ಹಲವು ರಾಷ್ಟ್ರಗಳ ಹೂಡಿಕೆದಾರರು ರಾಜ್ಯವೊಂದರಲ್ಲಿ ಹಲವು ಸಾವಿರ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ದೇಶಕ್ಕೆ ಮತ್ತಷ್ಟು ವಿದೇಶಿ ನೇರ ಬಂಡವಾಳ ಹರಿದು ಬರಲಿದೆ ಎಂದರು.
ಹೆಚ್ಚು ಪ್ರಮಾಣದ ವಿದೇಶಿ ನೇರ ಹೂಡಿಕೆ ಆಕರ್ಷಿಸುವುದಕ್ಕಾಗಿಯೇ ಹೊಸ ಹೊಸ ಕ್ಷೇತ್ರಗಳಲ್ಲಿ ಎಫ್‌ಡಿಐಗೆ ಅನುಮತಿ ನೀಡಲಾಗಿದೆ. ರಕ್ಷಣಾ ಕ್ಷೇತ್ರದಲ್ಲೂ ವಿದೇಶಿ ಹೂಡಿಕೆಗೆ ಸಮ್ಮತಿಸಲಾಗಿದೆ. ಬ್ಯಾಂಕಿಂಗ್ ಸೇರಿ ಹಲವು ವಲಯಗಳಲ್ಲಿ ಸುಧಾರಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ. ಹಳೆಯ ಹಲವು ಕಾನೂನುಗಳನ್ನು ರದ್ದು ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಸಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯಲಾಗಿದೆ ಎಂದರು.




