ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಚೆಕ್ ಮೂಲಕ 1.30 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ಎನ್.ಆರ್.ರಮೇಶ್, ಈ ಸಂಬಂಧ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಸಾಲದ ರೂಪದಲ್ಲಿ 1.3 ಕೋಟಿ ರೂ ಹಣ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ಗುತ್ತಿಗೆ ಪಡೆದಿರುವ ಎಲ್.ವಿವೇಕಾನಂದ ಎನ್ನುವವರಿಂದ ಸಿದ್ದರಾಮಯ್ಯ 1.30 ಕೋಟಿ ಲಂಚ ಪಡೆದಿದ್ದರು. ಲಂಚದ ಹಣ ಸಂದಾಯವಾದ ನಂತರವೇ ಅವರು 2014ರಲ್ಲಿ ಟರ್ಫ್ ಕ್ಲಬ್ ಉಸ್ತುವಾರಿ ಹುದ್ದೆಗೆ ವಿವೇಕಾನಂದ ಅವರನ್ನು 3 ವರ್ಷಗಳ ಅವಧಿಗೆ ನೇಮಿಸಿದ್ದರು ಎಂದು ಆರೋಪಿಸಿದ್ದಾರೆ.
ಮೈಸೂರಿನ ಕಿಂಗ್ಸ್ ಕೋರ್ಟ್ ಗುತ್ತಿಗೆ ಪಡೆದಿರುವ ಎಲ್ ವಿವೇಕಾನಂದ ಅವರಿಂದ ತಾವು ಸಾಲ ಪಡೆದಿರುವುದಾಗಿ ಸಿದ್ದರಾಮಯ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದರು. ಆದರೆ ಇದು ಸಾಲವಾಗಿರಲಿಲ್ಲ. ಕೇಂದ್ರ ಗೃಹ ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ ಯಾರಿಗಾದರೂ ಯಾವುದಾದರೂ ಹುದ್ದೆ ನೀಡುವುದಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್ ಪಡೆಯುವಂತಿಲ್ಲ ಎಂದರು.




