ಬಿಜೆಪಿ ತನ್ನೊಳಗಿನ ಭಯ, ಆತಂಕ, ಅಭದ್ರತೆಯನ್ನು ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರು ಮಾಡಿಕೊಂಡಿದೆ. ಅದೂ ಕೂಡ ಹಣ ಖರ್ಚು ಮಾಡಿ! ಎಂದು ಕೆಪಿಸಿಸಿ ಹೇಳಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ನಿನ್ನೆ ಕರ್ನಾಟಕ ತಲುಪಿದೆ. ಕನ್ಯಾಕುಮಾರಿಯಿಂದ ಹೊರಟಿರುವ ಯಾತ್ರೆ ಸುಮಾರು 3,750 ಕಿಮೀ ಪಾದಯಾತ್ರೆ ನಡೆಯಲಿದ್ದು, ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ವಿಚಲಿತವಾದಂತೆ ಕಂಡುಬಂದಿರುವ ಬಿಜೆಪಿ ಇಂದು ಕೆಲವು ಮಾಧ್ಯಮಗಳಲ್ಲಿ ಪೂರ್ಣ ಪುಟ ಜಾಹೀರಾತು ನೀಡಿದ್ದು, ಕಾಶ್ಮೀರ ವಿಭಜನೆಗೆ ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಕಾರಣ. ಅವರ ಕುಟುಂಬವರಿಂದ ಜೋಡಿಸುವ ಕೆಲಸ ಸಾಧ್ಯವಿಲ್ಲ ಎಂಬರ್ಥ ಮೂಡಿಸಲು ಯತ್ನಿಸಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ರಾಜಕೀಯ ಪಕ್ಷಗಳು ಸಹಜವಾಗಿ ತಮ್ಮ ಸಾಧನೆ ಹೇಳಲು, ಸಕಾರಾತ್ಮಕ ಸಂದೇಶ ನೀಡಲು ಪತ್ರಿಕೆಗಳ ಮುಖಪುಟದ ಜಾಹೀರಾತು ನೀಡುವುದು ವಾಡಿಕೆ. ಆದರೆ BJP Karnataka ಕೋಟಿ ಕೋಟಿ ಖರ್ಚು ಮಾಡಿ ನಕಾರಾತ್ಮಕ ಜಾಹೀರಾತು ನೀಡಿದೆ ಎಂದರೆ ಅವರಲ್ಲಿ ಅದೆಷ್ಟು ಭಯ, ಆತಂಕ, ಅಭದ್ರತೆಯನ್ನು #BharatJodoYatra ಮೂಡಿಸಿರಬಹುದೆಂದು ಊಹಿಸಬಹುದು ಎಂದಿದೆ.
#ಭಾರತಐಕ್ಯತಾಯಾತ್ರೆಯುದ್ದಕ್ಕೂ Rahul Gandhi ಅವರು ಯಾವುದೇ ರಾಜಕೀಯ ಭಾಷಣ ಮಾಡಲಿಲ್ಲ, ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಲಿಲ್ಲ. ದ್ವೇಷವನ್ನು ತೊಡೆದು ಹಾಕಿ ಪ್ರೀತಿಯನ್ನು ಬೆಸೆಯುವ ಭಾವ, ನಡಿಗೆ, ಮಂದಹಾಸ, ಸಂವಾದ, ಅಪ್ಪುಗೆ, ಸಾಂತ್ವನಗಳಷ್ಟೇ ಅವರಲ್ಲಿ ಕಂಡಿದ್ದು ಎಂದಿದೆ.
ಜಾತಿ ಧರ್ಮಗಳ ಆಚೆಗೆ, ಪಕ್ಷ ಬೇಧವನ್ನು ಮರೆತು ಎಲ್ಲರೂ ಈ ನಡಿಗೆಗೆ ತಮ್ಮ ಬೆಂಬಲ ನೀಡುತ್ತಿದ್ದಾರೆ. ಪ್ರೀತಿ ಬೆಸೆಯಬೇಕೆಂಬ ರಾಹುಲ್ ಗಾಂಧಿ ಅವರ ಅಚಲ ನಡಿಗೆಯೊಂದಿಗೆ ಸಾಗರೋಪಾದಿಯಲ್ಲಿ ಜನರು ತಮ್ಮ ಹೆಜ್ಜೆ ಸೇರಿಸುತ್ತಿದ್ದಾರೆ. ಈ ಎಲ್ಲವೂ ಬಿಜೆಪಿಗೆ ಭಯ ಹುಟ್ಟಿಸಿದೆ, ಭಾರತ ಒಗ್ಗೂಡುತ್ತಿರುವುದೇ ಬಿಜೆಪಿ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ತನ್ನೊಳಗಿನ ದ್ವೇಷವನ್ನು, ಅಸೂಯೆಯನ್ನು ಬಿಜೆಪಿ ಪತ್ರಿಕೆಯ ಮುಖಪುಟದ ಜಾಹಿರಾತಿನಲ್ಲೂ ಹೊರಹಾಕಿದೆ ಎಂದಿದೆ.
ಜಗತ್ತಿನ ಯಾವುದೇ ಶಕ್ತಿ, ಯಾವುದೇ ಜಾಹೀರಾತು, ಯಾವುದೇ ಅಡೆ-ತಡೆಗಳು ಭಾರತವನ್ನು ಒಗ್ಗೂಡಿಸುವ ಪ್ರಯತ್ನವನ್ನು ತಡೆಯಲು ಸಾಧ್ಯವಿಲ್ಲ. #ಭಾರತಐಕ್ಯತಾಯಾತ್ರೆಯಲ್ಲಿ ಕರ್ನಾಟಕ ರಾಜ್ಯ ರಾಹುಲ್ ಗಾಂಧಿ ಅವರ ಧೃಢವಾದ ನಡಿಗೆಯ ಜೊತೆಗೆ ನಿಲ್ಲಲಿದೆ. ಅಲ್ಲದೇ ಅವರ ಜೊತೆಗೆ ಹೆಜ್ಜೆ ಹಾಕಲಿದೆ ಎಂದಿದೆ.
ಆದರೆ ವಾಸ್ತವದಲ್ಲಿ ದೇಶ ವಿಭಜನೆಯ ಪ್ರಸ್ತಾವ ಇರಿಸಿದ್ದೇ ಆರ್.ಎಸ್.ಎಸ್. ನಾಯಕ ವಿನಾಯಕ ದಾಮೋದರ್ ಸಾವರ್ಕರ್. ಸು. 1925ರಲ್ಲಿ ಹಿಂದು ಮತ್ತು ಮುಸ್ಲಿಂ ವಿಭಜನೆ ಆಧಾರದಲ್ಲಿ ದೇಶ ಇಬ್ಭಾಗವಾಗಬೇಕು ಎಂಬ ಸಿದ್ಧಾಂತ ಮಂಡಿಸಿದವರು ಸಾವರ್ಕರ್. ಆದರೆ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಅಂದಿನ ಕಾಂಗ್ರೆಸ್, ಮಹಾತ್ಮಾ ಗಾಂಧಿ ಮತ್ತು ಜವಾಹರ್ ಲಾಲ್ ನೆಹರು ಸಿದ್ಧರಿರಲಿಲ್ಲ.
ವಿಭಜನೆ ಪ್ರಸ್ತಾವನೆಯನ್ನು ಇರಿಸಿದ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ವೇಳೆ ಸ್ಥಳೀಯ ಸರ್ಕಾರಗಳನ್ನು ಜಂಟಿಯಾಗಿ ರಚಿಸಿ ಅಧಿಕಾರ ಅನುಭವಿಸಿದ್ದವು. ಇದೇ ಕಾಲಘಟ್ಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕಿಂತ ಸ್ವಾತಂತ್ರ್ಯ ಮುಖ್ಯವೆಂದು ಬೀದಿಗಿಳಿದಿತ್ತು.
ಇವೆಲ್ಲ ಬೆಳವಣಿಗೆಗಳ ನಡುವೆ, ಮಹಮ್ಮದ್ ಅಲಿ ಜಿನ್ನಾ ಸಾವರ್ಕರ್ ಪ್ರಣೀತ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರಬಲವಾಗಿ ಮಂಡಿಸಿದರು. ಇದು ಕಡೆಗೆ ದೇಶ ವಿಭಜನೆಗೆ ಕಾರಣವಾಯಿತು. ಆದರೆ ಇಂದು ದೇಶ ವಿಭಜನೆಗೆ ನೆಹರು ಕಾರಣ ಎಂದು ಬಿಜೆಪಿ ಮುಖಪುಟಗಳಲ್ಲಿ ಜಾಹೀರಾತು ನೀಡಿದೆ. ಇದನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪ್ರಶ್ನಿಸಿದ್ದು, ದೇಶದ ನೈಜ ಇತಿಹಾಸವನ್ನು ತಿರುಚಬಾರದು ಎಂದಿದ್ದಾರೆ.




