ಮರಿಯಮ್ಮನಹಳ್ಳಿ: ಸಿಮೆಂಟ್ ಕಾರ್ಖಾನೆಗೆ ಪರವಿರೋಧದ ವಾಗ್ವಾದ

4 years ago

ವಿಜಯನಗರ: ಮರಿಯಮ್ಮನಹಳ್ಳಿ ಸಮೀಪದ ಡಣಾಪುರ ಗ್ರಾಮದ ಬಳಿಯಿರುವ  20 ಬಿ.ಎಂ.ಎಂ.ಇಸ್ಪಾತ್ ಪ್ರೈವೇಟ್ ಲಿ. ಸ್ಟೀಲ್ ತಯಾರಿಕಾ ಕಾರ್ಖಾನೆಯ 2.1 ಎಂ.ಟಿ.ಪಿ.ಎ. ಸಾಮರ್ಥ್ಯದ ಘಟಕ ಯೋಜನಾ ವಿಸ್ತರಣೆ, ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದು ಸಾರ್ವಜನಿಕರು ಸಿಮೆಂಟ್ ಕಾರ್ಖಾನೆಗೆ ಅನುಮತಿ ನೀಡಬಾರದೆಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಈ ಕುರಿತು ಇತ್ತೀಚೆಗೆ  ಜರುಗಿದ ಸಾರ್ವಜನಿಕ ಅಹವಾಲು ಸಭೆಯಲ್ಲಿ  ಕಾರ್ಖಾನೆ ಸ್ಥಾಪನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಮರಿಯಮ್ಮನಹಳ್ಳಿ ಹೋಬಳಿಯ ಡಣಾಪುರ ಗಾಳೆಮ್ಮನಗುಡಿ, ಹನುಮನಹಳ್ಳಿ, ಮರಿಯಮ್ಮನಹಳ್ಳಿ ಸುತ್ತಮುತ್ತಲ ಪರಿಸರ ಹಾಳಾಗಿದೆ. ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಎಂದು  ಸ್ಥಳೀಯರು ಸಭೆಯಲ್ಲಿ  ಆಕ್ರೋಶ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಪರಿಸರ ಸಾರ್ವಜನಿಕ ಆಲಿಕೆ ಕಾರ್ಯಕ್ರಮದಲ್ಲಿ ಪರ-ವಿರೋಧದ ಜಟಾಪಟಿ ನಡೆದಿದೆ. ಕಾರ್ಖಾನೆ ವಿಸ್ತರಣೆಗೆ ಮತ್ತು ಹೊಸ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ರೈತರು ಸಹಮತ ಸೂಚಿಸಿ ಪತ್ರ ಬರೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದಾಗ ಅಲ್ಲಿ ನರೆದಿದ್ದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮ್ಮೆಲೆ ವೇದಿಕೆಯ ಮುಂಭಾಗ ಬಂದು ಫ್ಯಾಕ್ಟರಿ ವಿರುದ್ಧ ಘೋಷಣೆ ಕೂಗಿ  ಅಸಮಾಧಾನ ವ್ಯಕ್ತಡಿಸಿದರು.

ಸಭೆಯಲ್ಲಿ ಕಾರ್ಖಾನೆ ಪರವಾಗಿ ಕಂಪನಿಯವರು ವಿವರಿಸುತ್ತಾ ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ತೆರೆದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಜತೆಗೆ ನೂರಾರು ಕುಟುಂಬಗಳ ಬದುಕು ಹಸನಾಗುತ್ತದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 12,100 ಉದ್ಯೋಗಗಳು ಸೃಷ್ಟಿಯಾಗುತ್ತವೆ. ಖಾಯಂ ಆಗಿ 4,200 ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಉತ್ಪಾದನೆ ಮಾಡಲಾಗುತ್ತದೆ. ಜೊತೆಗೆ ಕಾರ್ಖಾನೆಗೆ ಬಳಕೆ ಮಾಡಿದ ನೀರನ್ನು ಪುನಃ ನಾವೆ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.

ನಂತರ ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಸೇರಿದ್ದ ಜನರಿಗೆ ಕಾರ್ಖಾನೆ ತೆರೆದರೆ ಅನುಕೂಲವೋ ಅಥವಾ ಅನಾನುಕೂಲವೋ ಎಂದು ಅಭಿಪ್ರಾಯ ಸಂಗ್ರಹಣೆಗೆ ಮುಂದಾದರು.

ಸಿಮೆಂಟ್ ಕಾರ್ಖಾನೆ ತೆರೆದರೆ ನಮ್ಮ ಸ್ಥಳೀಯ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಿ ಬಡತನ ನಿವಾರಣೆಯಾಗುತ್ತದೆ ಎಂದು ರೈತ ಮುಖಂಡರು ಹೇಳುತ್ತಿದ್ದಂತೆ ಸಾರ್ವಜನಿಕರು ಭಾರಿ ವಿರೋಧ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಒಮ್ಮಲೇ ವೇದಿಕೆ ಮುಂಭಾಗಕ್ಕೆ ಜಮಾಯಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತೆರಳಿತು. ಪೊಲೀಸರು ಮಧ್ಯ ಪ್ರವೇಶಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು ಮಾತನಾಡಿ ಯಾರೂ ಸಹ ಗೊಂದಲ ಮಾಡಿಕೊಳ್ಳಬೇಡಿ. ಇಲ್ಲಿ ಬಂದಿರುವಂತಹ ಪ್ರತಿಯೊಬ್ಬರಿಗೂ ಮಾತನಾಡುವುದಕ್ಕೆ ಅವಕಾಶ ಇದೆ ಹಾಗಾಗಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದರು.

ಅರ್ಜಿಗಳ ಸ್ವೀಕಾರ: ಬಳ್ಳಾರಿಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ದೊಡ್ಡ ಶಣಯ್ಯ ಅವರಿಗೆ ಮತ್ತು ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು ಅವರಿಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಹವಾಲು ಸಲ್ಲಿಸಿದರು.

ಪರ & ವಿರೋಧ: ಸಿಮೆಂಟ್ ಕಾರ್ಖಾನೆ ಪ್ಲಾಂಟ್ ಹಾಕುವುದಕ್ಕೆ ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಕೆಲವು ಸಾರ್ವಜನಿಕರು ಪ್ಲಾಂಟ್ ತೆರೆದರೆ ಸ್ಥಳೀಯವಾಗಿ ನಮ್ಮ ಮಕ್ಕಳಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಜತೆಗೆ ನಮಗೂ ಸಹ ಉದ್ಯೋಗ ಲಭಿಸಿದಂತಾಗುತ್ತದೆ. ಒಂದು ವೇಳೆ ಪ್ಲಾಂಟ್ ಹಾಕದೇ ಇದ್ದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ನಮ್ಮ ಮಕ್ಕಳು ದೂರದ ಊರುಗಳಿಗೆ ತೆರಳಬೇಕಾಗುತ್ತದೆ ಹಾಗಾಗಿ ಪ್ಲಾಂಟ್ ಹಾಕಬೇಕು ಎಂದು ವಾದ ಮಂಡಿಸಿದರು.

ಇನ್ನು ಕೆಲವು ನಾಗರಿಕರು ಇಲ್ಲಿ ಸಿಮೆಂಟ್ ಪ್ಲಾಂಟ್ ಹಾಕುವುದರಿಂದ ವಾತಾವರಣ ಕಲುಷಿತಗೊಂಡು ಅಸ್ತಮ, ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗಿ 80 ವರ್ಷ ಬದುಕುವರು ಕೇವಲ 40-45 ವರ್ಷಕ್ಕೆ ವಿವಿಧ ಕಾಯಿಲೆಗಳಿಂದ ಬಳಲಿ ಸಾಯುವಂತಹ ಪರಿಸ್ಥಿತಿ ಎದುರಾಗುತ್ತದೆ. ಜತೆಗೆ ಪ್ಲಾಂಟ್ ಹಾಕುವವರೆಗೂ ಮಾತ್ರ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ ಉದ್ಯೋಗ ಕೊಡ್ತೀವಿ ಎಂದು ಸುಳ್ಳು ಭರವಸೆ ನೀಡುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು.

ಕಾರ್ಖಾನೆಗೆ ಭೂಮಿ ಕಳೆದುಕೊಂಡವರ ರೋಧನೆ: ಡಣಾಪುರದ ಬಿಎಂಎಂ ಕಾರ್ಖಾನೆ ಹಾಕುವುದಕ್ಕೆ ಸ್ಥಳೀಯ ರೈತರು ತಮ್ಮ ಭೂಮಿಯನ್ನು ನೀಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ನಮ್ಮನ್ನು ಇವತ್ತಿಗೂ ಕೆಲಸಕ್ಕಾಗಿ ಅಲೆದಾಡಿಸುತ್ತಿದ್ದಾರೆ. ಪ್ಲಾಂಟ್ ಹಾಕುವ ತನಕ ಅಷ್ಟೆ ನಮಗೆ ಹುಸಿ ಭರವಸೆಗಳನ್ನ ನೀಡುತ್ತಾರೆ. ಆದರೆ ಪ್ಲಾಂಟ್ ಹಾಕಿದ ಮೇಲೆ ನಮ್ಮನ್ನ ಚಪ್ಪಲಿ ಕಿತ್ತೋಗೊವರೆಗೂ ಕಂಪನಿಗೆ ಓಡಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನಮಗೆ ಇಲ್ಲಿ ಪ್ಲಾಂಟ್ ಹಾಕುವುದು ಬೇಡ ಎಂದು ಒತ್ತಾಯಿಸಿದರು.

ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಸಾರ್ವಜನಿಕರಿಗೆ ಅಭಿಪ್ರಾಯ ಹೇಳುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು ಕೆಲವರು ಸಿಮೆಂಟ್ ಕಾರ್ಖಾನೆ ಪ್ಲಾಂಟ್ ಹಾಕುವುದಕ್ಕೆ ಹೇಳಿದ್ರೆ ಮತ್ತೆ ಕೆಲವರು ಇಲ್ಲಿ ಕಾರ್ಖಾನೆ ಹಾಕೋದು ಬೇಡ ಅಂತ ಹೇಳಿದ್ದಾರೆ. ಜತೆಗೆ ಅರ್ಜಿಗಳು ಸಹ ಪರ ವಿರೋಧ ಬಂದಿದ್ದಾವೆ. ಎಲ್ಲವನ್ನು ಪರಿಶೀಲಿಸಿ ಮುಂದಿನ ತೀರ್ಮಾನ ತಿಳಿಸಲಾಗುತ್ತದೆ

– ಮಹೇಶ್ ಬಾಬು, ವಿಜಯನಗರ ಅಪರ ಜಿಲ್ಲಾಧಿಕಾರಿ

Leave a Reply