ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ

1 day ago

ಪ್ರಜಾಪ್ರಭುತ್ವದಲ್ಲಿ ಪ್ರಧಾನಮಂತ್ರಿಯೂ ರಾಜಕೀಯ ವ್ಯಂಗ್ಯಕ್ಕೆ ಅತೀತರಲ್ಲ. ಹುದ್ದೆ ಎಷ್ಟೇ ಉನ್ನತವಾಗಿದ್ದರೂ, ಅದು ಜನರ ಪ್ರಶ್ನೆಗಳಿಗೆ, ಟೀಕೆಗಳಿಗೆ ಮತ್ತು ವ್ಯಂಗ್ಯಕ್ಕೆ ಅತೀತವಾದ “ಪವಿತ್ರ ಸ್ಥಾನ”ವಲ್ಲ. ಅದೇ ಸಮಯದಲ್ಲಿ ವ್ಯಂಗ್ಯವೂ ಕಾನೂನುಬದ್ಧ ಮಿತಿಗಳನ್ನು ಮೀರಬಾರದು.

ಪ್ರಧಾನಮಂತ್ರಿಯ ಮೇಲೆ ವ್ಯಂಗ್ಯ ಮಾಡುವುದು ಪ್ರಜಾಪ್ರಭುತ್ವದಲ್ಲಿ ಏಕೆ ಅಗತ್ಯ?: ಭಾರತೀಯ ಸಂವಿಧಾನದ ಅನುಚ್ಛೇದ 19(1)(a) ನಾಗರಿಕರಿಗೆ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ಅದೇ ಅನುಚ್ಛೇದ 19(2) ಕೆಲವು ನಿರ್ದಿಷ್ಟ ಕಾರಣಗಳ ಆಧಾರದ ಮೇಲೆ ಸಮಂಜಸವಾದ ನಿರ್ಬಂಧಗಳನ್ನು ಅನುಮತಿಸುತ್ತದೆ—ಉದಾಹರಣೆಗೆ ಮಾನಹಾನಿ, ಸಾರ್ವಜನಿಕ ಶಾಂತಿ, ಅಪರಾಧಕ್ಕೆ ಪ್ರಚೋದನೆ ಮುಂತಾದ ವಿಷಯಗಳು.

ಅಂದರೆ ಸಂವಿಧಾನ ಹೇಳುವುದು: “ಅಧಿಕಾರದಲ್ಲಿರುವವರನ್ನು ಪ್ರಶ್ನಿಸಬೇಡಿ” ಎಂಬುದಲ್ಲ. “ಅಧಿಕಾರದಲ್ಲಿರುವವರನ್ನೂ ಕಾನೂನುಬದ್ಧ ಮಿತಿಗಳೊಳಗೆ ಯಾರಾದರೂ ಪ್ರಶ್ನಿಸಬಹುದು” ಎಂಬುದೇ ಪ್ರಜಾಪ್ರಭುತ್ವದ ಸ್ಫೂರ್ತಿ.

ಹಾಗಾದರೆ ಪ್ರಧಾನಮಂತ್ರಿಯವರು ಇತರರ ಮೇಲೆ ವ್ಯಂಗ್ಯ ಮಾಡಬಹುದೇ?: ಪ್ರಧಾನಮಂತ್ರಿಯವರೂ ಒಬ್ಬ ರಾಜಕೀಯ ನಾಯಕರು. ಅವರಿಗೆ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ನೀತಿಗಳನ್ನು ಟೀಕಿಸುವ ಹಾಗೂ ರಾಜಕೀಯವಾಗಿ ವ್ಯಂಗ್ಯ ಮಾಡುವ ಹಕ್ಕು ಇದೆ. ಆದರೆ ಅದೇ ಸ್ವಾತಂತ್ರ್ಯವನ್ನು ಪ್ರತಿಪಕ್ಷ, ಪತ್ರಕರ್ತರು, ಕಾರ್ಟೂನಿಸ್ಟ್‌ಗಳು, ಲೇಖಕರು ಮತ್ತು ಸಾಮಾನ್ಯ ನಾಗರಿಕರೂ ಬಳಸಲು ಸಾಧ್ಯವಾಗಬೇಕು. ಒಂದೇ ಪ್ರಜಾಪ್ರಭುತ್ವದಲ್ಲಿ ದ್ವಂದ್ವ ಮಾನದಂಡಗಳು ಇರಬಾರದು.

“ಪ್ರಧಾನಮಂತ್ರಿಯವರು ಮಾಡಿದರೆ ರಾಜಕೀಯ ವ್ಯಂಗ್ಯ… ಜನರು ಅಥವಾ ಪ್ರತಿಪಕ್ಷ ಮಾಡಿದರೆ ಅವಮಾನ” ಎಂಬ ದ್ವಂದ್ವ ಮಾನದಂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾನ್ಯವಾಗುವುದಿಲ್ಲ.

ವ್ಯಂಗ್ಯ ಎಂದರೆ ಅವಮಾನವಲ್ಲ: ರಾಜಕೀಯ ವ್ಯಂಗ್ಯದ ಪ್ರಮುಖ ಉದ್ದೇಶ ಸಾಮಾನ್ಯವಾಗಿ ವ್ಯಕ್ತಿಯನ್ನು ಅವಮಾನಿಸುವುದಲ್ಲ; ಅಧಿಕಾರವನ್ನು ಪ್ರಶ್ನಿಸುವುದು, ನೀತಿಯಲ್ಲಿರುವ ವೈರುಧ್ಯವನ್ನು ಬಹಿರಂಗಪಡಿಸುವುದು ಹಾಗೂ ನಾಯಕನ ಮಾತು ಮತ್ತು ಕೃತ್ಯಗಳ ನಡುವಿನ ವ್ಯತ್ಯಾಸವನ್ನು ತೋರಿಸುವುದಾಗಿದೆ.

ಪ್ರಜಾಪ್ರಭುತ್ವದಲ್ಲಿ ಕೆಲವೊಮ್ಮೆ ಒಂದು ಕಾರ್ಟೂನ್, ಒಂದು ವ್ಯಂಗ್ಯವಾಕ್ಯ ಅಥವಾ ಒಂದು ಸಣ್ಣ ಮೀಮ್ ಕೂಡ ದೊಡ್ಡ ರಾಜಕೀಯ ಪ್ರಶ್ನೆಯನ್ನು ಎತ್ತಬಹುದು. ಆದರೆ ವೈಯಕ್ತಿಕ ನಿಂದನೆ, ಆಧಾರರಹಿತ ಮಾನಹಾನಿ, ಬೆದರಿಕೆಗಳು ಅಥವಾ ಅಪರಾಧಕ್ಕೆ ಪ್ರಚೋದಿಸುವ ಮಾತುಗಳನ್ನು “ವ್ಯಂಗ್ಯ” ಎಂಬ ಹೆಸರಿನಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಸಂವಿಧಾನದ ಅನುಚ್ಛೇದ 19(2) ಇಂತಹ ಮಿತಿಗಳನ್ನು ಸ್ಪಷ್ಟವಾಗಿ ಗುರುತಿಸುತ್ತದೆ.

ಅಸಲಿ ಪ್ರಶ್ನೆ ಇದೇ, ಪ್ರಧಾನಮಂತ್ರಿಯವರು ಜನರ ಮೇಲೆ, ಪ್ರತಿಪಕ್ಷದ ಮೇಲೆ ಹಾಗೂ ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ವ್ಯಂಗ್ಯ ಮಾಡಿದಾಗ “ಇದು ಪ್ರಜಾಪ್ರಭುತ್ವದ ರಾಜಕೀಯ ಭಾಷೆ” ಎಂದು ಹೇಳಿ… ಅದೇ ಪ್ರಧಾನಮಂತ್ರಿಯವರ ಮೇಲೆ ಜನರು ಅಥವಾ ಪ್ರತಿಪಕ್ಷ ವ್ಯಂಗ್ಯ ಮಾಡಿದಾಗ “ಇದು ಪ್ರಧಾನಮಂತ್ರಿ ಹುದ್ದೆಗೆ ಅವಮಾನ” ಎಂದು ಹೇಳುವುದು ಏಕೆ?

ಹುದ್ದೆಗೆ ಗೌರವ ಇರಬೇಕು. ಆದರೆ ಹುದ್ದೆಯಲ್ಲಿರುವ ವ್ಯಕ್ತಿಗೆ ಪ್ರಶ್ನೆಗಳಿಂದ ಮುಕ್ತವಾದ ಹಕ್ಕು ಇರಬಾರದು. ಪ್ರಜಾಪ್ರಭುತ್ವದಲ್ಲಿ ಜನರು ಮತ ಚಲಾಯಿಸುತ್ತಾರೆ, ತೆರಿಗೆ ಪಾವತಿಸುತ್ತಾರೆ ಹಾಗೂ ಸರ್ಕಾರದ ನಿರ್ಧಾರಗಳ ಪರಿಣಾಮವನ್ನು ಎದುರಿಸುತ್ತಾರೆ. ಆದ್ದರಿಂದ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಕೂಡ ಅವರಿಗೆ ಇರಬೇಕು.

ಪ್ರಧಾನಮಂತ್ರಿಯವರ ಮೇಲೆ ವ್ಯಂಗ್ಯ ಮಾಡಬಾರದು ಎಂಬುದೂ ಪ್ರಜಾಪ್ರಭುತ್ವದ ತತ್ವವಲ್ಲ. ಅಧಿಕಾರದಲ್ಲಿರುವವರಿಗೆ ಎಷ್ಟು ಸ್ವಾತಂತ್ರ್ಯವಿದೆಯೋ, ಕಾನೂನುಬದ್ಧ ಮಿತಿಗಳೊಳಗೆ ಜನರಿಗೆ ಮತ್ತು ಪ್ರತಿಪಕ್ಷಕ್ಕೂ ಅಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು.

ಏಕೆಂದರೆ? ಪ್ರಜಾಪ್ರಭುತ್ವದಲ್ಲಿ—ಹುದ್ದೆ ದೊಡ್ಡದಾಗಿರಬಹುದು… ಆದರೆ ಜನರ ಪ್ರಶ್ನೆಗಳಿಗಿಂತ ದೊಡ್ಡದಲ್ಲ.

– ವಾಸುದೇವರೆಡ್ಡಿ.ಕೆ.

Leave a Reply