ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದ ಅಪ್ಸರ್ ಕೊಡ್ಲಿಪೇಟೆ
ಬೆಂಗಳೂರು: ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಉರ್ದು ವಿಷಯಕ್ಕೆ ಎಷ್ಟು ಹುದ್ದೆಗಳನ್ನು ನೀಡಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು SDPI ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
- ಮೊದಲ ಸಿನಿಮಾ ಚಿತ್ರ ಬಿಡುಗಡೆ ನೆನಪು ಮಾಡಿಕೊಂಡ ಅನಿರುದ್ಧ
- ಮಲೆನಾಡ ಶೈಲಿಯ ಬಿಸಿಬಿಸಿ ‘ನೀರುಪ್ಪಿಟ್ಟು’ ಮಾಡುವ ವಿಧಾನ
- ದಸರಾ ಪುಸ್ತಕ ಮೇಳದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅರ್ಜಿ ಆಹ್ವಾನ
- ಎಸ್ಐಆರ್ ರಾಜಕೀಯಕ್ಕೆ ಬಳಕೆ ಸರಿಯಲ್ಲ: ಡಿ ಕೆ ಶಿವಕುಮಾರ್
ಈ ಕುರಿತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಮತ್ತು ಇ-ಮೇಲ್ ಮೂಲಕ ಮನವಿ ಸಲ್ಲಿಸಿ, ಕರ್ನಾಟಕದಲ್ಲಿನ ಉರ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಗಳತ್ತ ಗಮನ ಹರಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ 814 ಹುದ್ದೆಗಳ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ವಾಣಿಜ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹಲವು ವಿಷಯಗಳಿಗೆ ಹುದ್ದೆಗಳನ್ನು ಗುರುತಿಸಿರುವ ಸಂದರ್ಭದಲ್ಲಿ ಉರ್ದು ವಿಷಯದ ಖಾಲಿ ಹುದ್ದೆಗಳ ಸಂಖ್ಯೆ ಎಷ್ಟು ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಉರ್ದು ಉಪನ್ಯಾಸಕರ ಖಾಲಿ ಹುದ್ದೆಗಳ ಸಂಖ್ಯೆ ಬಹಿರಂಗಪಡಿಸಿ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಸ್ತುತ ಎಷ್ಟು ಉರ್ದು ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ? ಜಿಲ್ಲಾವಾರು ಮತ್ತು ಕಾಲೇಜುವಾರು ಖಾಲಿ ಹುದ್ದೆಗಳ ಸಂಖ್ಯೆ ಎಷ್ಟು? 814 ಹುದ್ದೆಗಳ ನೇಮಕಾತಿಯಲ್ಲಿ ಉರ್ದು ವಿಷಯಕ್ಕೆ ಎಷ್ಟು ಹುದ್ದೆಗಳನ್ನು ನೀಡಲಾಗಿದೆ? ಉರ್ದು ಹುದ್ದೆಗಳನ್ನು ನೇಮಕಾತಿ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆಯೇ? ಪ್ರಕಟಿಸದಿದ್ದರೆ ಅದಕ್ಕೆ ಕಾರಣವೇನು? ಉಳಿದಿರುವ ಹುದ್ದೆಗಳಿಗೆ ಪ್ರತ್ಯೇಕ ಅಥವಾ ಪೂರಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದೇ? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಉರ್ದು ಉಪನ್ಯಾಸಕರ ನೇಮಕಾತಿ ಕೇವಲ ಉದ್ಯೋಗಾಕಾಂಕ್ಷಿಗಳ ಉದ್ಯೋಗದ ಪ್ರಶ್ನೆಯಲ್ಲ. ಇದು ಉರ್ದು ಭಾಷೆಯನ್ನು ಅಥವಾ ಉರ್ದು ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕಿನ ಪ್ರಶ್ನೆಯಾಗಿದೆ. ವಿದ್ಯಾರ್ಥಿಗಳು ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡ ನಂತರ ಅದನ್ನು ಬೋಧಿಸಲು ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದರೆ, ಅದರ ನೇರ ಪರಿಣಾಮ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬೀಳುತ್ತದೆ ಎಂದು ಹೇಳಿದ್ದಾರೆ.
15,000 ಶಿಕ್ಷಕರ ನೇಮಕಾತಿಯಲ್ಲಿ ಉರ್ದುವಿಗೆ ನ್ಯಾಯ ಯಾವಾಗ?: 2026–27ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಸುಮಾರು 15,000 ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಉರ್ದು ಸೇರಿದಂತೆ ಪ್ರತಿಯೊಂದು ಭಾಷೆ ಮತ್ತು ವಿಷಯದ ನಿಜವಾದ ಖಾಲಿ ಹುದ್ದೆಗಳ ವಿವರವನ್ನು ಸರ್ಕಾರ ಜಿಲ್ಲಾವಾರು, ಶಾಲಾವಾರು, ಕಾಲೇಜುವಾರು ಮತ್ತು ವಿಷಯವಾರು ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಉರ್ದು ಶಿಕ್ಷಕರ ನಿಜವಾದ ಖಾಲಿ ಹುದ್ದೆಗಳ ಸಂಖ್ಯೆ ಎಷ್ಟು? ಅವುಗಳಲ್ಲಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ? ಎಷ್ಟು ಹುದ್ದೆಗಳು ಇನ್ನೂ ಖಾಲಿ ಉಳಿಯಲಿವೆ? ಈ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಕ್ಕೆ ಮನವಿ: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ದುರ್ಬಲ ವರ್ಗಗಳ ಹಕ್ಕುಗಳ ಪರವಾಗಿ ತನ್ನ ರಾಜಕೀಯ ಬದ್ಧತೆಯನ್ನು ಪ್ರತಿಪಾದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಉರ್ದು ಭಾಷಿಕ ವಿದ್ಯಾರ್ಥಿಗಳು ಹಾಗೂ ಉರ್ದು ಶಿಕ್ಷಕರ ನೇಮಕಾತಿಯ ಪ್ರಶ್ನೆಯನ್ನೂ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ಪರಿಶೀಲಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿರುವ ಪತ್ರದಲ್ಲಿ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ:
1. ಕರ್ನಾಟಕದ ಉರ್ದು ಶಿಕ್ಷಕರು ಮತ್ತು ಉಪನ್ಯಾಸಕರ ಖಾಲಿ ಹುದ್ದೆಗಳ ಕುರಿತು ರಾಜ್ಯ ಸರ್ಕಾರದಿಂದ ಸಂಪೂರ್ಣ ವರದಿ ಪಡೆಯಬೇಕು.
2. ಖಾಲಿ ಹುದ್ದೆಗಳ ನಿಖರ ಮಾಹಿತಿಯನ್ನು ಜಿಲ್ಲಾವಾರು, ಶಾಲಾವಾರು ಹಾಗೂ ಕಾಲೇಜುವಾರು ಸಾರ್ವಜನಿಕಗೊಳಿಸಬೇಕು.
3. 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದು ವಿಷಯಕ್ಕೆ ಸಂಬಂಧಿಸಿದ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟಪಡಿಸಬೇಕು.
4. ಅರ್ಹ ಉರ್ದು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಇತರ ಭಾಷಾ ವಿಷಯಗಳ ಅಭ್ಯರ್ಥಿಗಳಂತೆ ಸಮಾನ ನೇಮಕಾತಿ ಅವಕಾಶ ಕಲ್ಪಿಸಬೇಕು.
5. ಅಗತ್ಯವಿದ್ದಲ್ಲಿ ಉಳಿದಿರುವ ಉರ್ದು ಹುದ್ದೆಗಳಿಗೆ ಪ್ರತ್ಯೇಕ ಅಥವಾ ಪೂರಕ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.
6. ಉರ್ದು ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು.
7. ಉರ್ದುವಿಗೆ ವಿಶೇಷ ಅನುಕಂಪ ಬೇಡ; ಸಮಾನ ಅವಕಾಶ ಬೇಕು.
8. ನಾವು ಯಾರ ಮೇಲೂ ವಿಶೇಷ ಅನುಕಂಪವನ್ನು ಕೇಳುತ್ತಿಲ್ಲ. ಯಾವುದೇ ಭಾಷೆಗೆ ಅನ್ಯಾಯವಾಗಲಿ ಎಂಬುದೂ ನಮ್ಮ ಬೇಡಿಕೆಯಲ್ಲ. ಕನ್ನಡಕ್ಕೆ ನ್ಯಾಯ ಸಿಗಲಿ, ಉರ್ದುವಿಗೂ ನ್ಯಾಯ ಸಿಗಲಿ. ಪ್ರತಿಯೊಂದು ಭಾಷೆಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು.
ಒಂದು ಭಾಷೆಯ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಉಂಟಾದಾಗ ಅದು ಕೇವಲ ಆ ಭಾಷೆಯ ಸಮಸ್ಯೆಯಾಗುವುದಿಲ್ಲ; ಅದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯ ಪ್ರಶ್ನೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
814 ಉಪನ್ಯಾಸಕರ ನೇಮಕಾತಿಯ ಸಂಪೂರ್ಣ ವಿಷಯವಾರು ಮಾಹಿತಿಯನ್ನು ಸಾರ್ವಜನಿಕಗೊಳಿಸಿ, ಉರ್ದು ಸೇರಿದಂತೆ ಎಲ್ಲಾ ಭಾಷಾ ವಿಷಯಗಳ ಖಾಲಿ ಹುದ್ದೆಗಳನ್ನು ಬಹಿರಂಗಪಡಿಸಿ, ಅರ್ಹ ಉರ್ದು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಅವರು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರೇ, ಕಾಂಗ್ರೆಸ್ ಹೈಕಮಾಂಡ್‌ರೇ, ಕರ್ನಾಟಕದ ಉರ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಧ್ವನಿಯನ್ನು ಆಲಿಸಿ. ನ್ಯಾಯದ ಮಾತು ಕೇವಲ ಘೋಷಣೆಯಲ್ಲಿ ಅಲ್ಲ, ನೇಮಕಾತಿಯಲ್ಲೂ ಕಾಣಿಸಲಿ ಎಂದು ಅಪ್ಸರ್ ಕೊಡ್ಲಿಪೇಟೆ ಮನವಿ ಮಾಡಿದ್ದಾರೆ.




