ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶರಣರ ವಿರುದ್ಧ FIR

4 years ago

ಮೈಸೂರು: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಸಮಾಜದಲ್ಲಿ ಪ್ರಗತಿಪರ ಮತ್ತು ಜಾತ್ಯತೀತ ಸ್ವಾಮೀಜಿ ಎಂದೇ ಗೌರವಕ್ಕೆ ಪಾತ್ರವಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಇವರೊಂದಿಗೆ ಇವರ ಮಠಕ್ಕೆ ಸೇರಿದ ಮೂವರು ಮತ್ತು ಮೈಸೂರಿನ ಇನ್ನಿಬ್ಬರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ನಿನ್ನೆ ತಡರಾತ್ರಿ ದೂರು ದಾಖಲಿಸಲಾಗಿದೆ.

ಸದರಿ ಪ್ರಕರಣದಲ್ಲಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ಮಠದ ವ್ಯಾಪ್ತಿಯಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಎರಡನೇ ಆರೋಪಿ, ಮಠದ ಬಸವಾದಿತ್ಯ ಮೂರನೇ ಆರೋಪಿಯಾಗಿದ್ದು, ಮಠದ ಭಕ್ತರು ಎಂದು ಹೇಳಲಾಗಿರುವ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಸಿ.ಚಂದ್ರಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷಗಳಿಂದ ಲೈಂಗಿಕವಾಗಿ ದೌರ್ಜನ್ಯ ಮಾಡುತ್ತಿರುವುದಾಗಿ, ಈ ಕೃತ್ಯಕ್ಕೆ ಉಳಿದ ಆರೋಪಿಗಳು ಸಹಕರಿಸಿರು ಆರೋಪ ಕೇಳಿಬಂದಿದೆ. ದೂರು ನೀಡಲು ಕಾರಣರಾಗಿರುವ ಧೈರ್ಯವಂತ ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ವೇಳೆ ಈ ಹೇಳಿಕೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ದೂರು ನೀಡಿರುವ ಬಾಲಕಿಯರು ಸದ್ಯಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಯ ಆಶ್ರಯದಲ್ಲಿದ್ದಾರೆ.

Leave a Reply