ಭಾರತೀಯ ರಾಜಕೀಯದಲ್ಲಿ ಹೊಸ ಡಿಜಿಟಲ್ ಬಂಡಾಯದ ದಿಕ್ಸೂಚಿಯೇ CJP?

7 days ago

ಭಾರತೀಯ ರಾಜಕೀಯ ಇತಿಹಾಸದಲ್ಲಿ ಪ್ರತಿಭಟನೆಗಳು, ಸತ್ಯಾಗ್ರಹಗಳು ಮತ್ತು ರ‍್ಯಾಲಿಗಳು ವ್ಯವಸ್ಥೆಯನ್ನು ಬದಲಿಸಿದ ಉದಾಹರಣೆಗಳು ಸಾಕಷ್ಟಿವೆ. ಆದರೆ, 2026ರ ಈ ಮೇ ತಿಂಗಳಲ್ಲಿ ಇಡೀ ದೇಶದ ಗಮನ ಸೆಳೆಯುತ್ತಿರುವುದು ಯಾವುದೇ ರಸ್ತೆಯ ಹೋರಾಟವಲ್ಲ; ಬದಲಿಗೆ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟ್ಟರ್) ಪರದೆಯ ಮೇಲೆ ಸೃಷ್ಟಿಯಾಗಿರುವ ಒಂದು ವರ್ಚುವಲ್ ಸುನಾಮಿ! ಅದರ ಹೆಸರೇ ‘ಕಾಕ್ರೋಚ್ ಜನತಾ ಪಾರ್ಟಿ’ (CJP).

​ಕೇವಲ ಒಂದೇ ವಾರದಲ್ಲಿ 2 ಕೋಟಿಗೂ (20 Million) ಹೆಚ್ಚು ಡಿಜಿಟಲ್ ಫಾಲೋವರ್ಸ್ ಪಡೆದು, ದೇಶದ ಆಡಳಿತಾರೂಢ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣದ ಸಂಖ್ಯೆಯನ್ನೇ ಹಿಂದಿಕ್ಕಿರುವ ಈ ‘ಜಿರಳೆ ಸೈನ್ಯ’ದ ಆಳ ಮತ್ತು ಭವಿಷ್ಯದ ರಾಜಕೀಯದ ಮೇಲಿನ ಇದರ ಪ್ರಭಾವದ ಕುರಿತಾದ ಒಂದು ವಿಶೇಷ ವಿಶ್ಲೇಷಣೆ ಇಲ್ಲಿದೆ.

​ಬಂಡಾಯದ ಕಿಡಿಯಾದ ಆ ಒಂದು ‘ಪದ’!: ​ಯಾವುದೇ ಒಂದು ದೊಡ್ಡ ಚಳವಳಿಯ ಹಿಂದೆ ತೀವ್ರವಾದ ಆಕ್ರೋಶದ ಹಿನ್ನೆಲೆಯಿರುತ್ತದೆ. ಇಲ್ಲಿಯೂ ಅಷ್ಟೇ, ಇತ್ತೀಚಿನ ನ್ಯಾಯಾಂಗದ ವಿಚಾರಣೆಯೊಂದರಲ್ಲಿ ದೇಶದ ನಿರುದ್ಯೋಗಿ ಯುವಕರನ್ನು “ಜಿರಳೆಗಳು” ಮತ್ತು “ಪರಾವಲಂಬಿಗಳು” ಎಂದು ಸಂಬೋಧಿಸಲಾಯಿತು ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದವು. ವ್ಯವಸ್ಥೆಯ ನಿರ್ಲಕ್ಷ್ಯದಿಂದ ಈಗಾಗಲೇ ಜರ್ಜರಿತರಾಗಿದ್ದ ಯುವ ಸಮೂಹಕ್ಕೆ ಈ ಪದ ಒಂದು ಬಂಡಾಯದ ಕಿಡಿಯಾಯಿತು.

​ಮೇ 16 ರಂದು ಡಿಜಿಟಲ್ ತಜ್ಞ ಅಭಿಜಿತ್ ದಿಪ್ಕೆ ಎಂಬುವವರು ವ್ಯಂಗ್ಯವಾಗಿ (Satire) ಆರಂಭಿಸಿದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಪೇಜ್, ದೇಶದ ಕೋಟ್ಯಂತರ ಯುವಕರ ಹತಾಶೆ ಮತ್ತು ಆಕ್ರೋಶಕ್ಕೆ ಅಧಿಕೃತ ಧ್ವನಿಯಾಗಿ ರೂಪಾಂತರಗೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ.

​’ಮೀಮ್ಸ್’ ಮತ್ತು ‘ವ್ಯಂಗ್ಯ’: ಹೊಸ ತಲೆಮಾರಿನ ರಾಜಕೀಯ ಅಸ್ತ್ರ

​”ವ್ಯವಸ್ಥೆಯು ಕ್ರೂರವಾದಾಗ, ವ್ಯಂಗ್ಯವೇ ಅತ್ಯಂತ ಶಕ್ತಿಶಾಲಿ ಪ್ರತಿರೋಧವಾಗುತ್ತದೆ.”

​ಒಂದು ಕಾಲದಲ್ಲಿ ರಾಜಕೀಯ ಪ್ರತಿಭಟನೆ ಎಂದರೆ ಭಾಷಣಗಳು, ಬ್ಯಾನರ್‌ಗಳು, ಧರಣಿಗಳಾಗಿದ್ದವು. ಆದರೆ ಇಂದಿನ ‘ಜೆನ್-ಝಿ’ (Gen-Z) ಮತ್ತು ಯುವ ಪೀಳಿಗೆಗೆ ಮೀಮ್ಸ್ (Memes) ಮತ್ತು ಶಾರ್ಟ್ ವೀಡಿಯೋಗಳೇ ಅಸ್ತ್ರಗಳು. ನೀಟ್ (NEET) ಪರೀಕ್ಷಾ ಅಕ್ರಮಗಳು, ನಿರಂತರ ಪೇಪರ್ ಲೀಕ್ ಹಗರಣಗಳು ಮತ್ತು ಗಗನಕ್ಕೇರುತ್ತಿರುವ ನಿರುದ್ಯೋಗ ವಿರುದ್ಧ ಯುವಕರು ಈ ವೇದಿಕೆಯಲ್ಲಿ ಸೃಷ್ಟಿಸುತ್ತಿರುವ ವ್ಯಂಗ್ಯಚಿತ್ರಗಳು ಮತ್ತು ತೀಕ್ಷ್ಣ ಬರಹಗಳು ಮುಖ್ಯವಾಹಿನಿಯ ರಾಜಕಾರಣಿಗಳನ್ನು ಬೆಚ್ಚಿಬೀಳಿಸುವಂತಿವೆ. “Voice of the Lazy & Unemployed” (ಸೋಮಾರಿ ಮತ್ತು ನಿರುದ್ಯೋಗಿಗಳ ಧ್ವನಿ) ಎಂಬ ಇವರ ಟ್ಯಾಗ್‌ಲೈನೇ ಇಂದಿನ ಆರ್ಥಿಕ ನೀತಿಗಳ ಮೇಲಿನ ದೊಡ್ಡ ಚಾವಟಿ ಏಟು.

​ಡಿಜಿಟಲ್ ಸಾಮರ್ಥ್ಯ ಮತ್ತು ‘Slacktivism’ ಮಿತಿ: ​ಒಬ್ಬ ಡಿಜಿಟಲ್ ಮಾಧ್ಯಮ ವಿಶ್ಲೇಷಕನ ದೃಷ್ಟಿಯಿಂದ ನೋಡಿದರೆ, ಸಿಜೆಪಿಯ ಇಂದಿನ ಯಶಸ್ಸು ಅಭೂತಪೂರ್ವ. ಆದರೆ ಇದರ ಮುಂದಿರುವ ಯಕ್ಷಪ್ರಶ್ನೆ: ಇದು ವರ್ಚುವಲ್ ಪರದೆಯಿಂದ ಹೊರಬಂದು ರಸ್ತೆಯ ಹೋರಾಟವಾಗಬಲ್ಲದೇ?

​ಡಿಜಿಟಲ್ ಜಗತ್ತಿನಲ್ಲಿ ಲೈಕ್ ಒತ್ತುವುದು ಅಥವಾ ಶೇರ್ ಮಾಡುವುದು ಸುಲಭ. ಇದನ್ನು ಸೋಷಿಯಾಲಜಿಯಲ್ಲಿ ‘Slacktivism’ (ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಪ್ರತಿಭಟಿಸಿ ಸುಮ್ಮನಾಗುವುದು) ಎನ್ನಲಾಗುತ್ತದೆ. ತಳಮಟ್ಟದ ಸಂಘಟನಾ ಚತುರತೆ, ಸ್ಪಷ್ಟ ಸದ್ಧಾಂತಿಕ ಚೌಕಟ್ಟು ಮತ್ತು ದೇಶವ್ಯಾಪಿ ಶಾಖೆಗಳಿಲ್ಲದೆ ಕೇವಲ ಆನ್‌ಲೈನ್ ಕ್ರೇಜ್‌ನಿಂದ ವ್ಯವಸ್ಥೆಯನ್ನು ದೀರ್ಘಕಾಲ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ, ಇದು ಭವಿಷ್ಯದಲ್ಲಿ ಆಮ್ ಆದ್ಮಿ ಪಾರ್ಟಿಯಂತೆ (AAP) ಒಂದು ಅಧಿಕೃತ ರಾಜಕೀಯ ಶಕ್ತಿಯಾಗಿ ರೂಪಾಂತರಗೊಂಡರೆ ಅಚ್ಚರಿಪಡಬೇಕಿಲ್ಲ.

​ಸೆನ್ಸಾರ್‌ಶಿಪ್ ಮತ್ತು ಸರ್ಕಾರದ ಆತಂಕ: ​ಯಾವಾಗ ಈ ವರ್ಚುವಲ್ ಪಕ್ಷದ ಪ್ರಭಾವ ಹೆಚ್ಚಾಯಿತೋ, ಆಗಲೇ ವ್ಯವಸ್ಥೆಯ ದಮನಕಾರಿ ನೀತಿಯೂ ಆರಂಭವಾಯಿತು. ಇತ್ತೀಚೆಗೆ ಸಿಜೆಪಿಯ ‘X’ (ಟ್ವಿಟ್ಟರ್) ಖಾತೆಯನ್ನು ಬ್ಲಾಕ್ ಮಾಡಿರುವುದು ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತುಹಿಸುಕುವ ಕುತಂತ್ರ ಎಂಬ ಟೀಕೆ ವ್ಯಕ್ತವಾಗಿದೆ. ಪ್ರತಿಪಕ್ಷಗಳ ನಾಯಕರೂ ಸಹ ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದಾರೆ. ಆದರೆ, ಡಿಜಿಟಲ್ ಯುಗದಲ್ಲಿ ಒಂದು ಖಾತೆಯನ್ನು ಮುಚ್ಚಿದರೆ ಹತ್ತು ಹೊಸ ಖಾತೆಗಳು ಹುಟ್ಟಿಕೊಳ್ಳುತ್ತವೆ ಎಂಬ ಕನಿಷ್ಠ ಜ್ಞಾನವೂ ನಿಯಂತ್ರಕರಿಗೆ ಇಲ್ಲದಿರುವುದು ದುರಂತ.

​ಮುಖ್ಯವಾಹಿನಿಯ ರಾಜಕೀಯಕ್ಕೆ ಎಚ್ಚರಿಕೆಯ ಗಂಟೆ: ​ಡಿ.ಆರ್. ನಾಗರಾಜ್ ಅವರು ತಮ್ಮ ಚಿಂತನೆಗಳಲ್ಲಿ ಉಲ್ಲೇಖಿಸುವ ‘ಪ್ರತಿರೋಧದ ಸಾಂಸ್ಕೃತಿಕ ಮಾದರಿಗಳು’ ಇಂದು ಡಿಜಿಟಲ್ ರೂಪ ಪಡೆದುಕೊಂಡಿವೆ. ಕಾಕ್ರೋಚ್ ಜನತಾ ಪಾರ್ಟಿ (CJP) ಕೇವಲ ಒಂದು ತಮಾಷೆಯ ಪೇಜ್ ಅಲ್ಲ; ಅದು ಇಂದಿನ ಯುವ ಜನಾಂಗದ ಒಳಬೇಗುದಿಯ ಸಂಕೇತ.

​ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಇನ್ಮುಂದೆಯೂ ಕೇವಲ ಧರ್ಮ, ಜಾತಿ ಅಥವಾ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಶಿಕ್ಷಣ, ಉದ್ಯೋಗ ಮತ್ತು ಯುವಕರ ಭವಿಷ್ಯದ ಭದ್ರತೆಯನ್ನು ಕಡೆಗಣಿಸಿದರೆ, ಸೋಷಿಯಲ್ ಮೀಡಿಯಾದ ಈ ‘ಜಿರಳೆಗಳು’ ಭವಿಷ್ಯದ ರಾಜಕೀಯದ ಚಿತ್ರಣವನ್ನೇ ಬದಲಿಸಬಲ್ಲವು ಎಂಬ ಎಚ್ಚರಿಕೆಯ ಗಂಟೆಯನ್ನು ಈ ಚಳವಳಿ ಬಾರಿಸಿದೆ.

Leave a Reply