ಬೆಂಗಳೂರು: ಭಾರತದ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು, ಜನಮುಖಿಯಾದ ಸರ್ವರ ಕಲ್ಯಾಣ ರಾಷ್ಟ್ರವಾಗಿಸಲು ಬಾಬಾ ಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ನಾಟಕಕಾರರೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ವೈ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
ಸರ್ಕಾರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಕಲ್ಯಾಣ ರಾಷ್ಟ್ರವಾಗಲು ಯುವ ತಲೆಮಾರನ್ನು ತಯಾರುಮಾಡಲು ಪ್ರಾಥಮಿಕ ಶಿಕ್ಷಣದಿಂದಲೇ ಅಂಬೇಡ್ಕರರ ವಿಚಾರಧಾರೆಗಳು ಮನಮುಟ್ಟುವಂತ ಶಿಕ್ಷಣ ಕ್ರಮವನ್ನು ರೂಪಿಸಬೇಕು ಎಂದು ಕರೆನೀಡಿದರು.
ಅಂಬೇಡ್ಕರ್ ಅವರನ್ನು ಕೇವಲ ವ್ಯಕ್ತಿಯಾಗಿ ನೋಡದೆ ನಮ್ಮ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಬಾಬಾಸಾಹೇಬರ ವಿಚಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಬೇಕಾಗಿದೆ. ಆದ್ದರಿಂದ ಶಿಕ್ಷಣವೇ ಅಂಬೇಡ್ಕೀಕರಣವಾಗಬೇಕು ಎಂದು ಪ್ರತಿಪಾದಿಸಿದರು.

ಅಂಬೇಡ್ಕರ್ ಅವರನ್ನು ಆಚೆಯಿಡುವ ಪ್ರಯತ್ನಗಳು ನಡೆಯುತ್ತಿರುವ ಬಗೆಗೆ ಆತಂಕವನ್ನು ವ್ಯಕ್ತಪಡಿಸಿದ ಅವರು, ಯುವ ಜನತೆಯು ಅಂಬೇಡ್ಕರರ ವಿಚಾರಧಾರೆಗಳ ಹಿನ್ನೆಲೆಯಲ್ಲಿ ನಡೆದು ರಾಷ್ಟ್ರವನ್ನು ಕಲ್ಯಾಣ ರಾಷ್ಟ್ರವನ್ನಾಗಿ ಕಟ್ಟಬೇಕೆಂದು ಕರೆನೀಡಿದರು.
ಭಾರತದ ಭವಿಷ್ಯದ ದಾರಿ ಮತ್ತು ಬೆಳಕು ಅಂಬೇಡ್ಕರರ ವಿಚಾರಧಾರೆಗಳ ಮೇಲಿದೆಯೆಂದು ಬಲವಾಗಿ ಪ್ರತಿಪಾದಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಸಿ. ನಾಗೇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕಲುಷಿತಗೊಳ್ಳುತ್ತಿರುವ ಸಮಕಾಲೀನ ಸಮಾಜಕ್ಕೆ ಅಂಬೇಡ್ಕರರ ವಿಚಾರಧಾರೆಗಳು ಪರಿಹಾರೋಪಾಯಗಳಾಗಿವೆ ಎಂದು ತಿಳಿಸಿದರು.
ವಿಚಾರಧಾರೆಗಳು ಕಲಾತ್ಮಕವಾಗಿ ಮೂಡಿದಾಗ ಹೆಚ್ಚು ಪರಿಣಾಕಾರಿಯಾಗಿರುತ್ತವೆ. ಡಾ. ಕೆ.ವೈ. ನಾರಾಯಣ ಸ್ವಾಮಿಯವರು ವರ್ಣ ಪಲ್ಲಟ ನಾಟಕದಲ್ಲಿ ಅಂಬೇಡ್ಕರರ ವಿಚಾರಧಾರೆಗಳನ್ನು ಕಲಾತ್ಮಕಗೊಳಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ನಿರೂಪಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಚಲುವರಾಜು ಸ್ವಾಗತಿಸಿದರು. ಐ.ಕ್ಯು.ಎ.ಸಿ. ಸಂಚಾಲಕ ಡಾ. ನಾಗೇಶ ಜಿ., ಕೆಜಿಸಿಟಿಎ ಕಾರ್ಯದರ್ಶಿ ಡಾ. ನಾರಾಯಣ ಹೆಚ್.ಜಿ., ಅಧ್ಯಾಪಕಿಯರಾದ ಡಾ. ನಾಜಿಯ ಒಬೇದ್ ಹಾಗೂ ಡಾ. ಸುಮ ಡಿ ಅವರು ಉಪಸ್ಥಿತರಿದ್ದರು.
ಅನಾವರಣ ತಂಡದವರು ಶಶಿಧರ್ ಭಾರಿಘಾಟ್ ನಿರ್ದೇಶನದಲ್ಲಿ ಡಾ. ಕೆ.ವೈ. ನಾರಾಯಣ ಸ್ವಾಮಿಯವರ ವರ್ಣ ಪಲ್ಲಟ ನಾಟಕವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ನಾಟಕವನ್ನು ವೀಕ್ಷಿಸಿ ಸಂವಾದದಲ್ಲಿ ಭಾಗವಹಿಸಿದ್ದರು.



