ಬೆಂಗಳೂರು: ನಮ್ಮ ಶಿಕ್ಷಣ ಕೇವಲ ಬದುಕುವ ದಾರಿಯಾಗಬಾರದು. ಅದರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಪ್ರಖ್ಯೂತ ಮಾನವೀಯತೆ ಇರಬೇಕು. ಈ ಗುಣಗಳಿಲ್ಲದ ಶಿಕ್ಷಣಕ್ಕೆ ಅರ್ಥವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕರ್ನಾಟಕದ ಬಹುಮುಖ ಪರಂಪರೆಯನ್ನು ಬಿಂಬಿಸುವ ‘ಕನ್ನಡ ಸಾಮರಸ್ಯ ನೆಲೆಗಳು’ ಸರಣಿಯ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ಯೋಜನೆಯಡಿ ಒಟ್ಟು 100 ಪುಸ್ತಕಗಳನ್ನು ಹೊರತರುವ ಗುರಿಯಿದ್ದು, ಇಂದು ಬಿಡುಗಡೆಯಾದ ಕೃತಿಗಳಲ್ಲದೆ ಇನ್ನುಳಿದ 59 ಪುಸ್ತಕಗಳು ಶೀಘ್ರದಲ್ಲೇ ಓದುಗರ ಕೈ ಸೇರಲಿವೆ. ಈ ಪುಸ್ತಕಗಳು ಕೇವಲ ಗ್ರಂಥಾಲಯದ ಪಾಲಾಗಬಾರದು. ಇವು ಯುವಜನತೆಯನ್ನು ತಲುಪಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಸಮಾನತೆಯ ಹಾದಿ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥೈಸಿಕೊಂಡಾಗ ಮಾತ್ರ ಒಂದು ಸದೃಢ ‘ಸಮ ಸಮಾಜ’ ನಿರ್ಮಾಣ ಮಾಡಲು ಸಾಧ್ಯ ಎಂದು ಸಿಎಂ ಪ್ರತಿಪಾದಿಸಿದರು.
ಜಾತಿ ವ್ಯವಸ್ಥೆಯ ಜಡತ್ವಕ್ಕೆ ವೈಚಾರಿಕತೆಯ ಮದ್ದು
ನಮ್ಮ ದೇಶದ ವೈವಿಧ್ಯತೆಯಲ್ಲಿಯೇ ಏಕತೆಯನ್ನು ಗುರುತಿಸಿದ ಮುಖ್ಯಮಂತ್ರಿಗಳು, ಸಾಮಾಜಿಕ ಸುಧಾರಣೆಯ ಕುರಿತು ಕಳಕಳಿ ವ್ಯಕ್ತಪಡಿಸಿದರು.
ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರಂತಹ ಮಹನೀಯರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಸಂವಿಧಾನ ಬಂದ ಮೇಲೆ ಸುಧಾರಣೆಯ ವೇಗ ಹೆಚ್ಚಿದೆಯಾದರೂ, ಸಾಮಾಜಿಕ ವ್ಯವಸ್ಥೆ ಇಂದಿಗೂ ಸಂಪೂರ್ಣವಾಗಿ ಬದಲಾಗಿಲ್ಲ. ಈ ಜಡತ್ವ ತೊಲಗಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬರಬೇಕು ಎಂದರು.
ಗುಡಿ-ಚರ್ಚ್ಗಳಿಗಿಂತ ಮನುಷ್ಯತ್ವ ದೊಡ್ಡದು: ಕುವೆಂಪು ಮತ್ತು ಬಸವಣ್ಣನವರ ತತ್ವಗಳನ್ನು ನೆನಪಿಸಿದ ಅವರು, “ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ. ಕುವೆಂಪು ಅವರು ಕೂಡ ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬರಲು ಕರೆ ನೀಡಿದ್ದರು. ಮನುಷ್ಯತ್ವವಿಲ್ಲದೆ ಮಾಡುವ ಪೂಜೆಯಿಂದ ಯಾವುದೇ ಫಲ ದೊರೆಯುವುದಿಲ್ಲ. ನಮ್ಮಲ್ಲಿ ‘ಇವ ನಮ್ಮವ’ ಎನ್ನುವ ಭಾವನೆ ಮೊಳೆಯಬೇಕು,” ಎಂದರು.
ಹೊಸ ಪೀಳಿಗೆಗೆ ಪ್ರೇರಣೆ: ಇಂದಿನ ತಲೆಮಾರು ಪಂಪ, ಕನಕದಾಸ, ಬಸವಣ್ಣ ಮತ್ತು ಕುವೆಂಪು ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ಕನ್ನಡ ಸಾಮರಸ್ಯ ನೆಲೆಗಳು’ ಕೃತಿಗಳನ್ನು ತಂದಿರುವುದು ಶ್ಲಾಘನೀಯ ಕೆಲಸ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.







