ನಾವೆಲ್ಲಾ ಈ ಪತ್ರಾವಳಿಗಳನ್ನ ಮರೆಯೋಕೆ ಸಾಧ್ಯನಾ? ಈಗ ಹೊಸ ತಲೆಮಾರಿಗೆ ಕೇವಲ ಹದಿನೈದಿಪ್ಪತ್ತು ವರ್ಷದ ಹಿಂದೆ ಊರೆಲ್ಲಾ ಮಷುವೆ, ದೇವರ ಕಾರ್ಯ, ಇತರೆ ಇತರೆ ಶುಭ ಸಮಾರಂಬಗಳಿಗೆ ಊಟಕ್ಕೆ ಬಳಸ್ತಾ ಇದ್ದಿದ್ದು ಈ ಪತ್ರಾವಳಿ ಎಂಬ ಮುತ್ತಲೆಲೆಯ ಹಾಳೆ. ಮುತ್ತುಗದ ಮರದ ಎಲೆಗಳನ್ನು ಆಯ್ದು ತಂದು ತೆಂಗಿನ ಕಡ್ಡಿ ಇಂದ ಪೋಣಿಸಿ ಅಂದವಾಗಿ ಪೂರ್ಣ ಚಂದ್ರಾಕಾರವಾಗಿ ರೂಪಿಸಿ ಊಟದ ಎಲೆ ಸಿದ್ಧಪಡಿಸುತ್ತಿದ್ದರು. ಆಹಾ… ನನಗಿನ್ನೂ ನೆನಪಿದೆ. ಒಣಗಿದ ಮುತ್ತುಗದ ಎಲೆಯ ಘಮಲು ಮೂಗಿಗೆ ರಾಚಿದಾಂತಾಗುತ್ತದೆ. ಈ ಮುತ್ತುಗದೆಲೆಯ ಹಾಳೆಯ ಮೇಲೆ ಬಿಸಿಬಿಸಿ ಆಹಾರ ಪದಾರ್ಥ ಬಿದ್ದಾಗಲಂತೂ ಆ ಬಿಸಿ ಹಬೆಯ ಜೊತೆ ಮುತ್ತುಗದ ಎಲೆಯ ಗಂಧವೂ ಮಿಳಿತವಾಗಿ ಮುದನೀಡುತ್ತಿತ್ತು. ಯಾವೊಬ್ಬ ಅತಿಥಿಯೂ ಈ ಮುತ್ತುಗದ ಎಲೆಯ ಆತಿಥ್ಯವನ್ನು ನಿರಾಕರಿಸುತ್ತಿದ್ದಿಲ್ಲ. ಧನಿಕನಿಂದ ಬಡವನ ವರೆಗೆ ಅತಿ ಕಡಿಮೆ ಬೆಲೆಗೆ ದೊರಕುತ್ತಿದ್ದ ಪತ್ರಾವಳಿಗಳು ಈಗ ಬರಿಯ ನೆನಪು. ಊರಿನ ಅಂಗಡಿಗಳ ಮುಂದೆಲ್ಲಾ ಬಣವೆ ಒಟ್ಟುತ್ತಿದ್ದ ದೃಷ್ಯಗಳು ಈಗ ಎಲ್ಲಿಯೂ ಕಾಣಸಿಗೋದಿಲ್ಲ. ಪರಿಸರ ಸ್ನೇಹಿ ಊಟದ ಎಲೆಗಳಿವು. ತಾವು ತುಂಬ ಧನಿಕರು ಎಂದು ತೋರಿಸಿಕೊಳ್ಳುವವರಷ್ಟೆ ಬಾಳೆಯ ಎಲೆಯ ಊಟ ಹಾಕಿಸುತ್ತಿದ್ದುದು. ಅದೂ ಪರಿಸರಸ್ನೇಹಿಯೇ ಬಿಡಿ.
ಊರ ಮುಂದೆ ಹೋದರೆ ನೂರಾರು ಮುತ್ತುಗದ ಮರ ಸಿಗುತ್ತಿದ್ದವು. ಮಲೆನಾಡು ಮತ್ತು ಅರೆಮಲೆನಾಡಿನಲ್ಲಿ ಹೇರಳವಾಗಿ ಬೆಳೆಯುವ ಈ ಮುತ್ತುಗ ಅಥವಾ ಮುತ್ತಲ ಮರ ಬಡ ಮಹಿಳೆಯರ ಜೀವನಾಧಾರವಾಗಿದ್ದವು. ಮುತ್ತಲು ಎಲೆ ಸಂಗ್ರಹಿಸಿ ಪತ್ರಾವಳಿ ತಯಾರಿಸಿ ಸಾವಿರಾರು ಕುಟುಂಬಗಳು ಬದುಕುತ್ತಿದ್ದವು. ಇಡೀ ಕರ್ನಾಟಕಕ್ಕೆ ಆಗುವಷ್ಟು ಎಲೆಗಳು ತಯಾರಾಗುತ್ತಿದ್ದವು. ಯಾವಾಗ ಮನುಷ್ಯನ ಬದುಕುವ ಶೈಲಿ ಬದಲಾಯಿತೋ ಆಗ ಈ ಪತ್ರಾವಳಿ ಊಟದ ಸಂಸ್ಕೃತಿ ವೇಗವಾಗಿ ನೇಪತ್ಯಕ್ಕೆ ಸರಿಯಿತು. ಈಗ ಊಟಕ್ಕೆ ಗ್ರಾಮೀಣ ಪರಿಸರದಲ್ಲಿ ಬಾಳೆ ಎಲೆಯ ಊಟದ್ದೇ ಪಾರುಪತ್ಯ. ನಗರಗಳಲ್ಲಿ ಪ್ಲಾಸ್ಟಿಕ್ ಬಾಳೆಯ ಎಲೆ, ಪ್ಲಾಸ್ಟಿಕ್ ಕೋಟೆಡ್ ಬಾಳೆಯ ಎಲೆ, ಪ್ಲಾಸ್ಟಿಕ್ ಕೋಟೆಡ್ ಪತ್ರಾವಳಿ, ಫೈಬರ್ ಸ್ಟೀಲ್ ತಟ್ಟೆಗಳು, ಪಿಂಗಾಣಿ ತಟ್ಟೆಗಳು ಅವರವರ ಘನತೆ ಧನಿಕತೆಯ ಎತ್ತರಕ್ಕೆ ತಕ್ಕಂತೆ ಊಟ ಉಪಚಾರ ಎಲ್ಲವೂ ಬದಲಾಗಿವೆ. ಈಗ ಗ್ರಾಮೀಣ ಪ್ರದೇಶದಲ್ಲಿಯೂ ಊಟಕ್ಕೆ ಪತ್ರಾವಳಿ ತಂದಿಟ್ಟರೆ ಎಷ್ಟೋ ಜನ ಊಟ ಬಿಟ್ಟು ಎದ್ದುಹೋಗಬಹುದು. ಬಡವರನ್ನು ನಿರ್ಗತಿರನ್ನು ಹಂಗಿಸಲು “ಹೇ ಅವನತ್ರ ಏನಿದೆ ಪತ್ರಾವಳಿ ನನ್ಮಗ” “ಅವನೊಬ್ಬ ಪತ್ರಾವಳಿ” ಎಂಬೆಲ್ಲಾ ನುಡಿಗಟ್ಟುಗಳಿವೆ. ಕಾಲ ಹೇಗೆ ಬದಲಾಗುತ್ತಲ್ಲಾ….
ಹಿಂದೆಲ್ಲಾ ಮದುವೆ, ಮದುವೆ ನಿಚ್ಚಾಯ, ಚೌಡಮ್ಮನ ಹಬ್ಬ, ಕಣಹಬ್ಬ, ನಾಮಕರಣ, ತಿಥಿ, ದೇವರ ಪರವು, ದಾಸೋಗ, ಉರೂಸ್, ಅಂತೆಲ್ಲಾ ಕಾರ್ಯಗಳಿದ್ದಾಗ ಪತ್ರಾವಳಿಯದೇ ಕಾರುಬಾರು. ದೇವರೆಡೆಗೆ ಮಾತ್ರ ಬಾಳೆ ಎಲೆ ಇಡುತ್ತಿದ್ದದ್ದು. ಹಳತು ಪತ್ರಾವಳಿಗಳು ಕಂದು ಬಣ್ಣಕ್ಕೆ ತಿರುಗಿದರೆ ಹೊಚ್ಚಹೊಸವು ಹಚ್ಚಹಸಿರು. ನಿಮಗೆ ನೆನಪಿರಬಹುದು ಪತ್ರಾವಳಿ ಮೇಲೆ ಬಾಡೂಟದ(ಮಾಂಸದ ಅಡುಗೆ) ರುಚಿಯೇ ರುಚಿ. ಇದು ಕೇವಲ ಮನಸಿನ ಸ್ಥಿತಿಯೊ ಸತ್ಯವೊ ಗೊತ್ತಿಲ್ಲ. ಮುತ್ತಲೆಲೆಯ ಘಮಲು ಬಾಡಿನ ಘಮಲು ಎರಡೂ ಸೇರಿ ಊಟ ಮೋಹಕವಾಗುತ್ತಿತ್ತು. ಈಗ ಇದೆಲ್ಲ ಬರಿಯ ನೆನಪು ಅಸ್ಟೆ. ಹಾಗೆ ಉಣ್ಣಬೇಕೆಂದರೆ ಅನುಭವಿಸಬೇಕೆಂದರೆ ನಾವೇ ಹೋಗಿ ನಾಲ್ಕಾರು ಎಲೆ ಕಿತ್ತು ಪೋಣಿಸಿ ಹಾಳೆ ಮಾಡಿ ಉಣ್ಣುವ ಅವಕಾಶಕ್ಕೆ ಯಾರದೇನು ಅಡ್ಡೀ? ಮುತ್ತಲು ಮರ ಔಷದೀಯ. ಅದರ ಪಂಚಾಂಗಗಳು ಔಷದಿಯಲ್ಲಿ ಬಳಕೆಯಾಗುತ್ತವೆ. ಮುತ್ತುಗದೆಲೆಯ ಪುಡಿ ಮೂಲವ್ಯಾಧಿ, ರಕ್ತ ಪರಿಚಲನೆ, ಮಲಬದ್ಧತೆ ಮೊದಲಾದವಕ್ಕೆ ಒಳ್ಳೆಯ ಔಷಧ ಎಂದು ಅನೇಕ ಮೂಲಿಕೆಯ ಪುಸ್ತಕಗಳು ದಾಖಲಿಸುತ್ತವೆ. ಬೌದ್ಧ ಜೈನ, ವೈದಿಕ, ವೈದಿಕೇತರ ಧರ್ಮಗಳು ಬುಡಕಟ್ಟು ಸಮುದಾಯಗಳಲ್ಲಿ ಮುತ್ತುಗಕ್ಕೆ ಧಾರ್ಮಿಕ ಸಾಂಸ್ಕೃತಿ ಮತ್ತು ಮೂಲಿಕಾ ಮಹತ್ವವಿದೆ. ಅದರ ಹೂವಿನ ಬಗ್ಗೆ ಹೇಳೋದೇ ಬೇಡ. ಇಂತಹಾ ಔಷಧೀಯ ಗುಣವುಳ್ಳ ಮರದ ಎಲೆಯ ಮೇಲಿನ ಊಟ ಎಂದಿಗೂ ಆರೋಗ್ಯಕರವೇ ಅಲ್ಲವೇ?
ಮನುಷ್ಯ ಪ್ರಕೃತಿಯಿಂದ ದೂರ ಹೋದಂತೆ ಅವನಿಗೆ ಪ್ರಕೃತಿ ಅಪರಿಚಿತವಾಗುತ್ತದೆ. ಅವನ ಮತ್ತು ನಿರ್ಗದ ಸಂಬಂಧ ಕೆಸುವಿನ ಎಲೆ ಮತ್ತು ಮಳೆ ಹನಿಯಂತಾಗುತ್ತದೆ. ಮನುಷ್ಯ ಅನಾಥನಾಗುತ್ತಾನೆ ಮತ್ತು ಅವನ ಅಸ್ಥಿತ್ವದ ಇಟ್ಟಿಗೆಗಳು ಕಳಚಿ ಬೀಳುತ್ತವೆ.
– ಸುರೇಶ ಎನ್ ಶಿಕಾರಿಪುರ, ಬರಹಗಾರರು



