ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಹೈಕಮಾಂಡ್ ಗಳೇ ಎಲ್ಲದರಲ್ಲೂ ಅಂತಿಮವೆಂದು ಭಾವಿಸಿರುತ್ತಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಮತದಾರನೆಂಬ ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಾ ಇದ್ದಾರೆ ಎಂಬುದನ್ನು ತಿಳಿದಿರಬೇಕು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕರ್ನಾಟಕ ರಾಜ್ಯದಲ್ಲಿ ಯಾವ ಯಾವ ಸಂದರ್ಭದಲ್ಲಿ ಸರ್ಕಾರಗಳಲ್ಲಿ ಗೊಂದಲ ಮತ್ತು ಅಸ್ಥಿರತೆ ಉಂಟಾಗುತ್ತದೆ ಆ ಎಲ್ಲ ಸಂದರ್ಭಗಳಲ್ಲಿ ಚುನಾವಣೆಗಳಲ್ಲಿ ಮತದಾರರು ತಮ್ಮ ಆಕ್ರೋಶವನ್ನು ಮತದಾನದ ಮೂಲಕ ವ್ಯಕ್ತಪಡಿಸಿರುತ್ತಾರೆ.
1978 ರಲ್ಲಿ ದೇವರಾಜ್ ಅರಸುರವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರ 1979ರ ನಂತರ ನಡೆದಂತಹ ರಾಜಕೀಯ ಬೆಳವಣಿಗೆಗಳು ಮತ್ತು 1980ರಲ್ಲಿ ಮುಖ್ಯಮಂತ್ರಿಯ ಬದಲಾವಣೆ ಅರಸ್ ಅವರು ಪ್ರತ್ಯೇಕವಾದ ಪಕ್ಷವನ್ನ ಸ್ಥಾಪಿಸಿದ್ದು, ಜೊತೆಗೆ 1980ರ ನಂತರ ರಾಜ್ಯದಲ್ಲಿ ನಡೆದಂತಹ ರೈತ ಚಳವಳಿ, ಕನ್ನಡ ಚಳವಳಿ ಮತ್ತು ಕಾರ್ಮಿಕ ಚಳವಳಿಗಳು 1983ರಲ್ಲಿ ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬರಲು ಸಾಧ್ಯವಾಯಿತು.
ಉತ್ತಮವಾದ ಜನಪರವಾದ ಆಡಳಿತವನ್ನು ಕೊಟ್ಟ ಕಾರಣಕ್ಕೆ 1984ರ ಲೋಕಸಭೆಯಲ್ಲಿ ಆಡಳಿತ ಪಕ್ಷವಾದ ಜನತಾ ಪಕ್ಷಕ್ಕೆ ಕೇವಲ ನಾಲ್ಕು ಸ್ಥಾನವನ್ನು ಕೊಟ್ಟರೂ ಸಹ, ವಿಧಾನಸಭೆಯ ವಿಸರ್ಜನೆಯ ನಂತರ 1985ರಲ್ಲಿ ರಾಜ್ಯದ ಜನತೆ 139 ಸ್ಥಾನಗಳನ್ನು ಅಂದಿನ ಜನತಾ ಪಕ್ಷಕ್ಕೆ ನೀಡಿ ಮನ್ನಣೆ ನೀಡಿದರು.
1987ರ ನಂತರ ಮತ್ತೆ ಜನತಾ ಪಕ್ಷದಲ್ಲಿ ಆದಂತಹ ಆಂತರಿಕ ಬಿಕ್ಕಟ್ಟು, ಭಿನ್ನಮತೀಯ ಚಟುವಟಿಕೆ, ಪಕ್ಷಗಳ ವಿಭಜನೆ ಕಾರಣದಿಂದ 1989ರಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿದ್ದ ಜನತಾ ದಳಕ್ಕೆ ಕೇವಲ 24 ಸ್ಥಾನವನ್ನು ನೀಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 189 ಸ್ಥಾನಗಳನ್ನು ನೀಡಿದರು.
ವೀರೇಂದ್ರ ಪಾಟೀಲ್ ಅವರನ್ನ ಅಧಿಕಾರದಿಂದ ಕೆಳಗಿಳಿಸಿ, ಬಂಗಾರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಆನಂತರ ವೀರಪ್ಪ ಮೊಯ್ಲಿರವರು ಮುಖ್ಯಮಂತ್ರಿಯಾದದ್ದು ಸರಿ ಅಷ್ಟೇ. ಈ ಸಂದರ್ಭದಲ್ಲಿ ಮೂರು ಜನ ಮುಖ್ಯಮಂತ್ರಿಗಳು ಮತ್ತು ಮತ್ತೆ ಸರಕಾರದಲ್ಲಿ ಗೊಂದಲಗಳು ಉಂಟಾದ ಕಾರಣದಿಂದ ಜನತೆ ರೋಸಿ ಹೋಗಿ 1994ರ ಚುನಾವಣೆಯಲ್ಲಿ ಕೇವಲ 34 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದರು.
ಬಹಳ ಭರವಸೆಯಿಂದ 1994ರಲ್ಲಿ ಜನತಾದಳದ ಸರ್ಕಾರವನ್ನು ರಚಿಸಲು 120 ಸ್ಥಾನಗಳನ್ನು ನೀಡಿದ ಜನತೆ ಮತ್ತೆ ಇಲ್ಲಿ ಉಂಟಾದಂತಹ ಗೊಂದಲಗಳು ರಾಮಕೃಷ್ಣ ಹೆಗಡೆರವರ ಉಚ್ಚಾಟನೆ ಈ ಕಾರಣದಿಂದ 1999ರಲ್ಲಿ ಮತ್ತೆ ಜನತೆ ಜನತಾದಳವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ನೀಡಿದರು.
ಎಸ್ ಎಮ್ ಕೃಷ್ಣ ರವರು ಅವಧಿ ಪೂರ್ಣಗೊಳಿಸಿ ವಿಧಾನಸಭಾ ಚುನಾವಣೆಯನ್ನು ಬೇರೆ ಸಮಯದಲ್ಲಿ ನಡೆಸಿದರೆ ಚುನಾವಣೆ ಫಲಿತಾಂಶ ಬೇರೆ ಇರುತ್ತಿತ್ತು ಆದರೆ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭಾ ಚುನಾವಣೆ ನಡೆದ ಕಾರಣದಿಂದ ಫಲಿತಾಂಶ ಬೇರೆಯಾಯಿತು.
2004 ರಿಂದ 2006ರ ಅವಧಿಯ ಸರ್ಕಾರ, ತದನಂತರದ ಸರ್ಕಾರ ಇವುಗಳು ಜನರಿಗೆ ಸಮಾಧಾನವನ್ನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ 2008ರಲ್ಲಿ ಜನತೆ ಬಿಜೆಪಿಗೆ ಅವಕಾಶವನ್ನು ಮಾಡಿಕೊಟ್ಟರು.
2008 ರಿಂದ 2013ರ ಅವಧಿಯಲ್ಲಿ ಮತ್ತೆ ಸರ್ಕಾರದಲ್ಲಿ ಗೊಂದಲಗಳು, ಆಡಳಿತ ಪಕ್ಷದಲ್ಲಿನ ವಿರೋಧಾಬಾಸದ ಹೇಳಿಕೆಗಳು, ಇವುಗಳ ಕಾರಣದಿಂದ ಹಾಗೂ ಮೂರು ಜನ ಮುಖ್ಯಮಂತ್ರಿಗಳನ್ನ ನೇಮಕ ಮಾಡಿದ ಹಿನ್ನೆಲೆಯಲ್ಲಿ ಜನತೆ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತದಲ್ಲಿನ ಆದಕ್ಷತೆಯನ್ನು ಗಮನಿಸಿ 2013ರಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ನೀಡಿದರು.
2018ರಲ್ಲಿ ಕಾಂಗ್ರೆಸ್ ಪಕ್ಷ 80 ಸ್ಥಾನಗಳನ್ನು ಗೆಲ್ಲುವುದರ ಮೂಲಕ ತನ್ನ ಪ್ರಬಲವಾದ ಅಸ್ತಿತ್ವವನ್ನು ಉಳಿಸಿಕೊಂಡಿತು.
2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ, ಮತ್ತೆ ಸರ್ಕಾರದಲ್ಲಿನ ಗೊಂದಲಗಳು, ಇವುಗಳ ನಂತರ ಪಕ್ಷಾಂತರದ ಮೂಲಕ ಶಾಸಕರನ್ನು ಖರೀದಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಈ ಅವಧಿಯಲ್ಲಿ ಸಹ ಯಡಿಯೂರಪ್ಪನವರನ್ನು ಕೆಳಗೆ ಇಳಿಸಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರು. ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು ಜನವಿರೋಧಿ ನಿಲುವುಗಳು ಜನತೆಯನ್ನ ಸರ್ಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಚುನಾವಣೆ ವೇದಿಕೆಯನ್ನಾಗಿ ಮಾಡಿಕೊಟ್ಟಿತು.
2023ರಲ್ಲಿ ಬಿಜೆಪಿ ವಿರುದ್ಧವಿದ್ದ ಜನತೆ ಇದೇ ಸಂದರ್ಭದಲ್ಲಿ ಜನರ ಬದುಕಿಗೆ ಪೂರಕವಾಗುವ ವಿಶೇಷವಾಗಿ ಬಡಜನರ ಜೀವನಕ್ಕೆ ಆರ್ಥಿಕವಾಗಿ ನೆರವು ನೀಡುವ, ಗ್ಯಾರಂಟಿ ಯೋಜನೆಗಳು ಸಹ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ತಂದುಕೊಡಲು ಸಾಧ್ಯವಾಯಿತು.
ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ತಾನು ಕೊಟ್ಟಂತಹ ಎಲ್ಲ ಭರವಸೆಗಳನ್ನು ಈಡೇರಿಸುತ್ತ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸುತ್ತಾ ಜನರ ಬದುಕಿಗೆ ಆರ್ಥಿಕವಾಗಿ ಶಕ್ತಿಯನ್ನ ತುಂಬಿರುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.
ಈ ನಡುವೆ ಕೆಲವು ಶಾಸಕರುಗಳ ಹೇಳಿಕೆಗಳು ಮತ್ತು ನಡವಳಿಕೆಗಳು ಜನಸಾಮಾನ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರೆಂಬ ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಾ ಇರುತ್ತಾರೆ. ಕೇವಲ ಪಕ್ಷದ ಹೈಕಮಾಂಡ್ ಗಳನ್ನು ಮೆಚ್ಚಿಸಿದರೆ ಅಥವಾ ಅವರ ಆದೇಶಗಳನ್ನು ಪಾಲಿಸಿದರೆ ಸಾಲದು, ಜನರ ಬದುಕಿಗೆ ಮಾರಕವಾಗುವ ಯಾವುದೇ ಸಣ್ಣ ನಡವಳಿಕೆಯು ಜನತೆ ಸಹಿಸಿಕೊಳ್ಳುವುದಿಲ್ಲ. ಸರ್ಕಾರಗಳು ಸುಭದ್ರವಾಗಿ ಮತ್ತು ಸುಸ್ಥಿರವಾಗಿ ದಕ್ಷತೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಜನತೆ ಬಯಸುತ್ತಾರೆ.
ಸಾಮಾನ್ಯ ಜನರಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಡುವ ವಿಚಾರವೇ ಪ್ರಮುಖವಾಗುತ್ತದೆ ಮತ್ತು ಕಾಲಕಾಲಕ್ಕೆ ಆಡಳಿತ ಯಂತ್ರ ಸರಿಯಾದ ದಾರಿಯಲ್ಲಿ ಸಾಗಿ ಜನರ ಅಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವಂತಹ ವ್ಯವಸ್ಥೆ ಇರಬೇಕೆಂದು ಮಾತ್ರ ಬಯಸುತ್ತಾರೆ.
ಸರ್ಕಾರಗಳು ಮೆಚ್ಚಿಸಬೇಕಾದದ್ದು ಜನಸಾಮಾನ್ಯರನ್ನ ಆಶಯಗಳನ್ನ, ಪೂರೈಸಬೇಕಾದದ್ದು ಮತದಾರರ ಭರವಸೆಗಳನ್ನು ಎಂಬುದು ನೆನಪಿನಲ್ಲಿರಲಿ.
ಚುನಾಯಿತ ಪ್ರತಿನಿಧಿಗಳ ಆಸೆಗಳು ಮತ್ತು ದುಃಖಗಳು ಜನತೆಯ ಆಸೆ ಅಲ್ಲ, ಜನರ ದುಃಖವು ಅಲ್ಲ. ಶಾಸಕರುಗಳ ಸುಖ-ದುಃಖಗಳಿಗಿಂತ ಜನರ ದುಃಖ ಕೇಳುವಂತಹ ತಾಳ್ಮೆ ಮತ್ತು ಅದಕ್ಕೆ ಪರಿಹಾರ ಕೊಡುವಂತಹ ಸಿದ್ಧತೆ ಪ್ರತಿನಿಧಿಗಳಲ್ಲಿ ಇರಬೇಕು.
ಸದಾ ಕಾಲ ತಮ್ಮ ಅಧಿಕಾರ ಅಂತಸ್ತು ತಮ್ಮ ನೋವನ್ನು ತೋಡಿಕೊಂಡು ಅದರಲ್ಲಿಯೇ ಕಾಲವನ್ನು ಕಳೆದರೆ ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ಪ್ರಜೆಗಳು ನಕಾರಾತ್ಮಕವಾದ ತೀರ್ಮಾನಗಳನ್ನು ಕೊಡಲು ಸಿದ್ದರಾಗುತ್ತಾರೆ.
ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ, ಸರ್ಕಾರಿ ಶಾಲೆಗಳಲ್ಲಿ ಸೂಕ್ತ ವ್ಯವಸ್ಥೆ, ಸಂಚರಿಸಲು ಗುಣಮಟ್ಟದ ರಸ್ತೆ, ಹಳ್ಳಿಹಳ್ಳಿ ತಲುಪಲು ಸಾರಿಗೆ ವ್ಯವಸ್ಥೆ, ಮುಗ್ಧ ಜನರಿಗೆ ರಕ್ಷಣೆ, ಸರ್ಕಾರಿ ಕಚೇರಿಗಳಲ್ಲಿ ಜನರಿಗೆ ಸ್ಪಂದನೆ, ಇವುಗಳನ್ನು ಜನತೆ ಬಯಸುತ್ತಾರೆ. ಇದನ್ನು ಅರಿತು ಚುನಾಯಿತ ಪ್ರತಿನಿಧಿಗಳು ನಡೆದುಕೊಂಡರೆ ಮಾತ್ರ ಫಲಿತಾಂಶಗಳು ಪೂರಕವಾಗುತ್ತವೆ ಎಂಬುದು ನೆನಪಿರಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




