ಕಾಬುಲ್: ಆಫ್ಗಾನಿಸ್ತಾನ ರಾಜಧಾನಿ ಕಾಬುಲ್‌ನ ಜನನಿಬಿಡ ಶಾಪಿಂಗ್ ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಠ ಎಂಟು ನಾಗರಿಕರು ಬಲಿಯಾಗಿ 22 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಪಸಂಖ್ಯಾತ ಶಿಯಾ ಮುಸ್ಲಿಂ ಸಮುದಾಯದವರು ಭೇಟಿ ಕೊಡುವ ನಗರದ ಪಶ್ಚಿಮ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಜವಾಬ್ದಾರಿಯನ್ನು ಸುನ್ನಿ ಮುಸ್ಲಿಂ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ ಎಂದು ವರದಿಯಾಗಿದೆ.
ದಾಳಿ ಬಳಿಕ ಪರಿಸ್ಥಿತಿ ನಿರ್ವಹಿಸಲು ಮತ್ತು ಪ್ರಕರಣದ ಕುರಿತು ತನಿಖೆ ನಡೆಸಲು ತನಿಖಾ ತಂಡ ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿದೆ ಎಂದು ಅಧಿಕಾರಗಳು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಎರಡು ದಶಕಗಳ ಕಾಲ ಆಫ್ಥಾನಿಸ್ಥಾನದಲ್ಲಿದ್ದ ಅಮೆರಿಕ ಸೇನೆ ವಾಪಸ್ ತೆರಳಿತ್ತು. ಅನಂತರ ಆಫ್ಘಾನಿಸ್ಥಾನದಲ್ಲಿ ಆಂತರಿಕ ದಂಗೆ ತಲೆದೋರಿತ್ತು. ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ಸುನ್ನಿ ಮುಸ್ಲಿಂ ಸಮುದಾಯದ ತಾಲಿಬಾನ್ ಅಧಿಕಾರಿಗಳು, ಶಿಯಾ ಮುಸ್ಲಿಂ ಸಮುದಾಯದ ಮಸೀದಿಗಳು ಮತ್ತು ಇತರ ಸ್ಥಳಗಳಿಗೆ ಹೆಚ್ಚಿನ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು.
ಕಾಬೂಲ್‌ನ ಶಿಯಾ ಧಾರ್ಮಿಕ ವಿದ್ವಾಂಸ ಸೈಯದ್ ಕಾಜುಮ್ ಹೊಜಾತ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ತಾಲಿಬಾನ್ ಸರ್ಕಾರ ಅಶುರಾಕ್ಕಿಂತ ಮುಂಚಿತವಾಗಿ ಭದ್ರತೆ ಹೆಚ್ಚಿಸಿದೆ. ಆದರೆ ಮತ್ತಷ್ಟು ಕಣ್ಗಾವಲನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.



