ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ 2018ರಲ್ಲಿ ನಡೆದಿದ್ದ ಮೂವರು ದಲಿತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ (ತಡೆಗಟ್ಟುವಿಕೆ ಕಾಯ್ದೆ) ಅಡಿ ವಿಶೇಷ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ 27 ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಪ್ರಕರಣದ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಲಯ ಆಗಸ್ಟ್ 1 ರಂದು ಎಲ್ಲಾ 27 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶ ಜಿ.ಮುತ್ತುಕುಮಾರನ್ ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜಾರಿಗೊಳಿಸುವಂತೆ ಆದೇಶಿಸಿದ್ದಾಋಎ.
ಏನಿದು ಪ್ರಕರಣ?
ಮೇ 28, 2018 ರ ರಾತ್ರಿ ಶಿವಗಂಗೈ ಜಿಲ್ಲೆಯ ತಿರುಪ್ಪಚೆಟ್ಟಿ ಸಮೀಪದ ಕಚನಂತಂ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಆರ್ಮುಗಂ (65), ಷಣ್ಮುಗನಾಥನ್ (31), ಚಂದ್ರಶೇಖರ್ (34) ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆಗೈದು ಬರ್ಭರವಾಗಿ ಕೊಲ್ಲಲಾಗಿತ್ತು. ದೇವಸ್ಥಾನ ಉತ್ಸವದಲ್ಲಿ ಹರಕೆ ತೀರಿಸುವ ವಿಚಾರಕ್ಕೆ ಸಂಬಂಧಿಸಿದ ಘಟನೆ ದ್ವೇಷಕ್ಕೆ ತಿರುಗಿದ್ದು, ಮೇಲ್ಜಾತಿಯ ಜನ ಹತ್ಯೆಗೈದಿದ್ದರು. ಈ ವೇಳೆ ನಡೆದ ದಾಳಿಯಲ್ಲಿ ಇನ್ನೂ ಐವರಿಗೆ ಗಂಭೀರವಾಗಿ ಗಾಯಗಳಾಗಿದ್ದವು. ಗಾಯಗೊಂಡವರ ಪೈಕಿ ಠಾಣಶೇಖರನ್ (32) ಎಂಬುವವರು ಘಟನೆ ನಡೆದ ಒಂದೂವರೆ ವರ್ಷದ ನಂತರ ಸಾವಿಗೀಡಾಗಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 33 ಜನರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ನಾಲ್ವರು ಆರೋಪಿಗಳು ಅಪ್ರಾಪ್ತರಾಗಿದ್ದರೆ, ಇಬ್ಬರು ವಿಚಾರಣೆ ಸಮಯದಲ್ಲೇ ಕಾಲವಶರಾಗಿದ್ದಾರೆ. ಇನ್ನೊಬ್ಬರು ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ. ಇದೀಗ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಆದೇಶದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.




