ರಾಜಕೀಯ ಕಿಡಿ ಹೊತ್ತಿಸಿದ ಕೋಗಿಲು ಅಕ್ರಮ ನಿವಾಸಿಗಳ ತೆರವು

4 months ago

ಬೆಂಗಳೂರು: ಅಪಾಯಕಾರಿ ತ್ಯಾಜ್ಯ ವಸ್ತು ವಿಲೇವಾರಿ ಘಟಕದ ಪಕ್ಕದಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನು ತೆರವುಗೊಳಿಸಿದ ರಾಜ್ಯ ಸರ್ಕಾರದ ಕ್ರಮ ಈಗ ದೇಶಾದ್ಯಂತ ದೊಡ್ಡ ಸುದ್ದಿ ಮಾಡಿದೆ.

ಕರ್ನಾಟಕ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಬುಲ್ಡೋಜರ್ ಬಳಸಿದೆ ಎಂದು ಕೇರಳ ಸರ್ಕಾರ ಆಪಾದಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ವಲಸಿಗರಿಗೆ 180 ಮನೆಗಳನ್ನು ನಿರ್ಮಾಣ ಮಾಡಿಕೊಡಲು ಮುಂದಾಗಿದೆ.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿಶೇಷ ಆಸಕ್ತಿಯ ಪರಿಣಾಮವಾಗಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ 1200 ಮನೆಗಳ ಪೈಕಿ 180 ಮನೆಗಳನ್ನು ತೆರವುಗೊಂಡ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದೆ. ಇದರ ವಿರುದ್ಧ ಇದೀಗ ಬಿಜೆಪಿ ಸಮರ ಘೋಷಣೆ ಮಾಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್‌ ಅಶೋಕ್‌, ಶಾಸಕ ಸುನೀಲ್‌ಕುಮಾರ್‌, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಅನೇಕರು ಸರಕಾರದ ಕ್ರಮಕ್ಕೆ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಬಿಜೆಪಿ ನಾಯಕರು, ಇದು ಕುರ್ಚಿ ಉಳಿಸಿಕೊಳ್ಳುವ ಹಾಗೂ ಕೇರಳದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸಿಕೊಳ್ಳುವ ಕಸರತ್ತು ಎಂದು ವಾಗ್ದಾಳಿ ನಡೆಸಿದೆ.

ಹೋರಾಟ ಅನಿವಾರ್ಯ: ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳನ್ನು ತೆರವುಗೊಳಿಸಿರುವ ಕ್ರಮ ಕೈಗೊಂಡಿರುವ ಕ್ರಮವನ್ನು ಉಪ ಮುಖ್ಯಮಂತ್ರಿ ಡಿ..ಶಿವಕುಮಾರ್‌ ಅವರು ಸಮರ್ಥಿಸಿಕೊಂಡು ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರ ಹೇಳಿಕೆಯನ್ನು ರಾಜಕೀಯ ಗಿಮಿಕ್‌ ಎಂದು ಟೀಕಿಸಿದ್ದರು.

ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರ ಹೇಳಿಕೆಗೆ ಮಣಿದಂತೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌ ರವರ ಊಸರವಳ್ಳಿ ಬಣ್ಣದ ಮಾತುಗಳು ಕರ್ನಾಟಕದ ಸ್ವಾಭಿಮಾನದ ಘನತೆಯನ್ನು ಕುಗ್ಗಿಸಿವೆ ಎಂದು ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.

ಮುಂಬರುವ ಕೇರಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇರಳ ಮೂಲದ ಕೆ.ಸಿ.ವೇಣುಗೋಪಾಲ್‌ ಅವರು ಕರ್ನಾಟಕ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಿದ್ದೇವೆಂಬುದನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ ಕೋಗಿಲು ಬಡಾವಣೆಯ ಪ್ರಕರಣವನ್ನು ಎ.ಐ.ಸಿ.ಸಿ ಗಂಭೀರವಾಗಿ ಪರಿಗಣಿಸಿದೆ. ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡುವ ಹೇಳಿಕೆ ಬಿಡುಗಡೆ ಮಾಡಿರುವುದನ್ನು ಗಮನಿಸಿದರೆ ಕೇರಳ ಚುನಾವಣಾ ರಾಜಕೀಯಕ್ಕೆ ಕರ್ನಾಟಕದ ಹಿತಾಸಕ್ತಿ ಬಲಿಕೊಡಲು ಕಾಂಗ್ರೆಸ್‌‍ ಹೈ ಕಮಾಂಡ್‌ ಸಿದ್ದವಾದಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಂದಿನ ವಯನಾಡ್‌ ಸಂಸದೆ ಪ್ರಿಯಾಂಕಾ ವಾದ್ರ ಅವರನ್ನು ಖುಷಿಪಡಿಸಲು ಕೇರಳದಲ್ಲಿ ಆನೆ ದಾಳಿಗೊಳಗಾದವರು ಹಾಗೂ ನೆರೆ ಹಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಮನೆ ಕಟ್ಟಿಕೊಡುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ಪ್ರತಿ ಹಂತದಲ್ಲೂ ಕರ್ನಾಟಕದಲ್ಲಿ ಕೇರಳ ದರ್ಬಾರ್‌ ನಡೆಯಲು ಅವಕಾಶ ಮಾಡಿಕೊಡುತ್ತಿರುವುದು ಕನ್ನಡಿಗರ ಸ್ವಾಭಿಮಾನವನ್ನು ಅಡವಿಟ್ಟಂತಾಗಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌‍ ಸರ್ಕಾರ ಕಾಂಗ್ರೆಸ್‌‍ ಹೈಕಮಾಂಡ್‌ ಒತ್ತಡಗಳಿಗೆ ಮಣಿದು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಟ್ಟರೆ, ಅಲ್ಪಸಂಖ್ಯಾತರ ಹೆಸರಿನಲ್ಲಿ ಕೋಗಿಲು ಬಡಾವಣೆಯಲ್ಲಿ ರಾಜಕೀಯ ಓಲೈಕೆಯ ಚಟುವಟಿಕೆ ಮುಂದುವರೆದರೆ ಅದು ಕರ್ನಾಟಕದ ಸ್ವಾಭಿಮಾನ ಹಾಗೂ ಈ ನೆಲದ ಕಾನೂನನ್ನು ಬಲಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌‍ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಂಡರೆ ಕನ್ನಡಿಗರ ಪ್ರತಿಭಟನೆ ಎದುರಿಸಲು ಸಿದ್ದವಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯಿಸಿದ್ದು, ಕರ್ನಾಟಕದ ಆಡಳಿತದಲ್ಲಿ ಮಧ್ಯಪ್ರವೇಶಿಸಲು ಕೆ.ಸಿ ವೇಣುಗೋಪಾಲ್‌ ಯಾರು? ಅವರು ಸೂಪರ್‌ ಸಿಎಂ ಆಗಿದ್ದಾರಯೇ? ಅಥವಾ ಕಾಂಗ್ರೆಸ್‌‍ ಹೈಕಮಾಂಡ್‌ ಚುನಾಯಿತ ರಾಜ್ಯ ಸರ್ಕಾರಗಳು ದೆಹಲಿಯ ಆಜ್ಞೆಗಳ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದು ನಂಬುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕವನ್ನು ಸಾಂವಿಧಾನಿಕವಾಗಿ ಚುನಾಯಿತ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ಆಳುತ್ತದೆ. ಪಕ್ಷದ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಒಂದು ವಿಷಯ, ರಾಜ್ಯ ಸರ್ಕಾರದ ಮೇಲೆ ನೈತಿಕ ಧರ್ಮೋಪದೇಶಗಳು ಮತ್ತು ಒತ್ತಡ ತಂತ್ರಗಳನ್ನು ನೀಡುವುದು ಸ್ಪಷ್ಟ ಅತಿಕ್ರಮಣ ಮತ್ತು ಒಕ್ಕೂಟಕ್ಕೆ ಎಸಗುವ ಅವಮಾನ. ಕೇರಳದ ವೈದ್ಯಕೀಯ ಮತ್ತು ಇತರ ತ್ಯಾಜ್ಯಗಳನ್ನು ಕರ್ನಾಟಕದ ಗಡಿಗಳಲ್ಲಿ ಅಕ್ರಮವಾಗಿ ಸುರಿಯಲಾಗಿದ್ದು, ಬಂಡೀಪುರ, ಅರಣ್ಯ ಪ್ರದೇಶಗಳು, ಸಾರ್ವಜನಿಕ ಆರೋಗ್ಯ ಮತ್ತು ವನ್ಯಜೀವಿಗಳಿಗೆ ಬೆದರಿಕೆ ಹಾಕಿದಾಗ ಕೆ.ಸಿ.ವೇಣುಗೋಪಾಲ್‌ ಎಂದಾದರೂ ಅದೇ ತುರ್ತುಸ್ಥಿತಿಯನ್ನು ತೋರಿಸಿದ್ದಾರೆಯೇ? ಅವರು ಕರ್ನಾಟಕದ ಪರಿಸರ, ರೈತರು ಅಥವಾ ಗಡಿ ಜಿಲ್ಲೆಗಳ ಪರವಾಗಿ ಅದೇ ಕಾಳಜಿ ಮತ್ತು ಸಹಾನುಭೂತಿಯೊಂದಿಗೆ ಮಾತನಾಡಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply