ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಕುಸ್ತಿಪಟುಗಳು ನೂತನ ದಾಖಲೆ ಬರೆದಿದ್ದಾರೆ. ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್ ಚಿನ್ನದ ಪದಕಗಳನ್ನು ದೋಚಿದ್ದಾರೆ.
ಭಜರಂಗ್ ಪುನಿಯಾ ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. ಫೈನಲ್ ಪಂದ್ಯದಲ್ಲಿ ಕೆನಡಾದ ಲ್ಯಾಚ್ಲನ್ ಮೆಕ್ ನೀಲ್ ವಿರುದ್ಧ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದ ಭಜರಂಗ್ ಪೂನಿಯಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇದಕ್ಕೂ ಮುನ್ನ ಅವರು ಟೊಕಿಯೋ ಒಲಂಪಿಕ್ ಪದಕ ಗಳಿಸಿದ್ದರು.
ಪುರುಷರ 86 ಕೆಜಿ ವಿಭಾಗದ ಫೈನಲ್ ನಲ್ಲಿ ಕುಸ್ತಿಪಟು ದೀಪಕ್ ಪುನಿಯಾ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಜೊತೆಗೆ, 62 ಕೆಜಿ ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್ ಅವರು ಕೆನಡಾದ ಗೊನ್ಜಾಲೆಜ್ ವಿರುದ್ಧ ಜಯಿಸಿ ಪದಕವನ್ನು ತಮ್ಮದನ್ನಾಗಿಸಿಕೊಂಡರು.



