ಡಾ.ಅಂಬೇಡ್ಕರ್ ಸಹವಾಸದಲ್ಲಿ ಕೃತಿ ಬುಕ್ಕಿಂಗ್ ಮಾಡಿ ರಿಯಾಯಿತಿ ಪಡೆಯಿರಿ

4 years ago

ಡಾ. ಅಂಬೇಡ್ಕರ್ ಅವರ ಜೀವನದಲ್ಲಿ ಹೇಗೆ, ಎಲ್ಲಿ, ಯಾವಾಗ ಮತ್ತು ಏಕೆ ನನ್ನ ಪವೇಶವಾಯಿತು? ಈ ಕುರಿತು ಬಹಳ ಜನರ ಮನದಲ್ಲಿ ಸಾಕಷ್ಟು ಕುತೂಹಲವಿದೆ. ಹಾಗೆಯೇ ಇಲ್ಲಸಲ್ಲದ ವಿಚಾರಗಳನ್ನೂ ಹರಡಲಾಗಿದೆ, ಆದರೆ ಅವರ ಈ ವಿರೋಧಾಭಾಸದ ವಿಚಾರಗಳು ನನಗೆ ಸಂಬಂಧವಿಲ್ಲ.

ಭಾರತೀಯರ ಸಾಮಾನ್ಯ ಸ್ವಭಾವವೇ ಹಾಗೆ. ಯಾವುದೇ ಮಹಾಪುರುಷನ ಜೀವನದ ಶ್ರೇಷ್ಠತೆಯ ಕುರಿತು ಗಾಳಿಮಾತು, ಇಲ್ಲಸಲ್ಲದ ವಿವಾದಗಳನ್ನು ಸೃಷ್ಟಿಸದಿದ್ದರೆ ವಿರೋಧಿಗಳು ಮಾತ್ರವಲ್ಲ ಅವರ ಅನುಯಾಯಿಗಳಿಗೂ ಸಹ ತೃಪ್ತಿಯಾಗದು. ಇದನ್ನು ಎಲ್ಲೆಡೆ ಕಾಣಬಹುದು. ಒಬ್ಬ ಮಹಾಪುರುಷನನ್ನು ದೈವತ್ವಕ್ಕೇರಿಸಲು ಅಥವಾ ಅವನ ಅವಹೇಳನ ಮಾಡಲು, ಅವನ ಚರಿತ್ರೆಗೆ ಅನೇಕ ಒಳ್ಳೆಯ ಮತ್ತು ಕೆಟ್ಟ ಕಥೆಗಳನ್ನು ಸೇರಿಸಲಾಗುತ್ತದೆ. ಇತಿಹಾಸದಲ್ಲಿ ಇಂಥ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಆಧುನಿಕರೆಂದು ತಿಳಿಯಲ್ಪಡುವ ಈ ದೇಶದ ಸುಶಿಕ್ಷಿತ ಸವರ್ಣೀಯರು, ಸ್ವತಃ ಸಾವಿರಾರು ವರ್ಷಗಳ ಗುಲಾಮಗಿರಿಗೆ ಒಳಗಾಗಿದ್ದ ಧರ್ಮವೊಂದು ಯಾರಿಗೆ ಶಿಕ್ಷಣದ ಬಾಗಿಲನ್ನು ಮುಚ್ಚಿತೋ, ಯಾರನ್ನು ಸಮಾಜದಿಂದ ಬಹಿಷ್ಕರಿಸಿತೊ, ಇಂಥ ಅಸ್ಪೃಶ್ಯರ ಸ್ಥಿತಿಯನ್ನು ಊಹಿಸಿಕೊಳ್ಳಬೇಕು.

ಸಾವಿರಾರು ವರ್ಷಗಳಿಂದ ಗುಲಾಮಗಿರಿಯ ಸರಪಳಿಯಿಂದ ಬಿಗಿಯಲ್ಪಟ್ಟ, ಅಂಧಃಕಾರದಲ್ಲಿ ತೊಳಲಾಡುತ್ತಿದ್ದ ಅಸ್ಪೃಶ್ಯ ಸಮಾಜದಲ್ಲಿ ಕಪ್ಪು ಮೋಡಗಳ ನಡುವಿನ ಕೋಲ್ಮಿಂಚಿನಂತೆ ಬಂದ ಡಾ. ಅಂಬೇಡ್ಕರ್ ಕೇವಲ ಮಿಂಚಲಿಲ್ಲ, ಬದಲಿಗೆ ಸೂರ್ಯನಂತೆ ವಿಶಾಲವಾಗಿ ಪ್ರಕಾಶಿತರಾಗಿ, ತೇಜಃಪುಂಜವಾಗಿ ಸದಾಕಾಲ ಹೊಳೆಯುತ್ತಿದ್ದರು. ಇಂಥ ಅಂಬೇಡ್ಕರರ ಜೀವನ ಚರಿತ್ರೆಯು ನಿಂದೆ ಮತ್ತು ಅಪವಾದಗಳಿಂದ ಹೇಗೆ ಮುಕ್ತವಾಗಿರಬಲ್ಲದು?

ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆಗೆ ಅನೇಕ ಕಪೋಲಕಲ್ಪಿತ ಕತೆಗಳನ್ನು ಮತ್ತು ನಿಂದನೆಗಳನ್ನು ಜೋಡಿಸಲಾಗಿದೆ. ಅಂತಹ ಹಲವು ವಿವಾದಗಳಲ್ಲಿ ಒಂದು, ಡಾ. ಅಂಬೇಡ್ಕರ್ ನನ್ನನ್ನು ಎಲ್ಲಿ ಭೇಟಿಯಾದರು? ಹೇಗೆ? ಯಾವಾಗ? ಏಕೆ ಭೇಟಿಯಾದರು? ಈ ಬಗ್ಗೆ ಅನೇಕ ಕಟ್ಟುಕತೆಗಳು ಕೇಳಿಬರುತ್ತಿವೆ. ನೀವು ಇಂತಹ ಒಂದು ಅಥವಾ ಅನೇಕ ಕತೆಗಳನ್ನು ಖಂಡಿತವಾಗಿ ಕೇಳಿರುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಈ ಕುರಿತು ಬಿತ್ತರವಾದ ಅನೇಕ ಚಮತ್ಕಾರಿ ಕತೆಗಳನ್ನು ಕೇಳಿ ನಗಬೇಕೋ-ಅಳಬೇಕೋ ಅರ್ಥವಾಗುತ್ತಿಲ್ಲ. ಒಮ್ಮೊಮ್ಮೆ ತಮಾಷೆಯೆನಿಸುತ್ತದೆ ಮತ್ತೊಮ್ಮೆ ಅಚ್ಚರಿಯೆನಿಸುತ್ತದೆ. ಮಹಾಪುರುಷರ ಜೀವನ ಚರಿತ್ರೆಯೊಂದಿಗೆ ಜೋಡಿಸಲಾದ ಕಪೋಲಕಲ್ಪಿತ ಕತೆಗಳು ಎಲ್ಲಿಂದ ಮತ್ತು ಹೇಗೆ ಪ್ರಸಾರವಾಗುತ್ತವೆ ಎಂಬುದು ಮಾತ್ರ ಬಹಳ ಆಸಕ್ತಿದಾಯಕ ಒಗಟು. ಹೇಳುವವರು ಇದನ್ನು ಹೇಗೆ ತಿಳಿದುಕೊಳ್ಳುತ್ತಾರೆ ಮತ್ತು ಕೇಳುವವರು ಹೇಗೆ ನಂಬುತ್ತಾರೆಂದೇ ನನಗೆ ಅರ್ಥವಾಗುತ್ತಿಲ್ಲ. ಇಂಥ ಕತೆಗಳನ್ನು ಹೆಣೆಯುವವರು, ಅದಕ್ಕೆ ಉಪ್ಪು-ಖಾರ ಸೇರಿಸಿ ವಿಶ್ವಾಸ ಮೂಡುವಂತೆ ಹೇಳುತ್ತಾರೆ. ಇದೆಲ್ಲ ಅವರ ಕಣ್ಣಮುಂದೆಯೇ ನಡೆದಿದೆ ಎಂದು ಭಾಸವಾಗುತ್ತದೆ.

ನನ್ನ ಮತ್ತು ಡಾಕ್ಟರ್ ಸಾಹೇಬರ ಮೊದಲ ಭೇಟಿಯ ಕುರಿತು ಎಲ್ಲರ ಮನದಲ್ಲೂ ಕುತೂಹಲ ಮತ್ತು ಅಪಾರ ಉತ್ಸುಕತೆ ಇದೆಯೆನ್ನುವುದರ ಸಂಪೂರ್ಣ ಕಲ್ಪನೆ ನನಗಿದೆ. ಆದ್ದರಿಂದ ಓದುಗರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸದೆ ನಮ್ಮ ಮೊದಲ ಭೇಟಿಯ ಮೇಲೆ ಬೆಳಕು ಚೆಲ್ಲುತ್ತೇನೆ.

ಮುಂಬೈನ ವಿಲೇಪಾರ್ಲೆ ಉಪನಗರದಲ್ಲಿ ಡಾ. ಎಸ್.ಎಂ. ರಾವ್ ಎಂಬ ಮೈಸೂರು ಮೂಲದ ಸಭ್ಯ ಗೃಹಸ್ಥರು ವಾಸವಿದ್ದರು. ಆ ಕಾಲದಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದರು. ರಾವ್ ಅವರದು ಅತ್ಯಂತ ಸುಶಿಕ್ಷಿತ ಮತ್ತು ಸುಸಂಸ್ಕೃತ ಕುಟುಂಬ. ರಾವ್ ಕುಟುಂಬದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೆವು. ಹಾಗಾಗಿ ಅವರ ಮನೆಗೆ ಆಗಾಗ ಹೋಗಿಬರುವ ರೂಢಿಯಿತ್ತು. ಅವರ ಹುಡುಗಿಯರು ಸುಶಿಕ್ಷಿತರಿದ್ದರು. ಆದ್ದರಿಂದ ನನಗೂ ಅವರ ಪರಿಚಯ ಚೆನ್ನಾಗಿಯೇ ಇತ್ತು. ಸಹಜವಾಗಿಯೇ ಗೆಳತಿಯರ ಭೇಟಿಗಾಗಿ ನಾನು ಅವರ ಮನೆಗೆ ಹೋಗುತ್ತಿದ್ದೆ.

ಸಂಯೋಗವೆಂಬಂತೆ ಡಾ. ಅಂಬೇಡ್ಕರ್ ಮತ್ತು ಡಾ. ರಾವ್ ನಡುವೆ ಗಾಢ ಸ್ನೇಹವಿತ್ತು. ಇಷ್ಟೇ ಅಲ್ಲ, ಡಾ. ಅಂಬೇಡ್ಕರ್ ಕೂಡ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಡಾ. ಅಂಬೇಡ್ಕರ್ ಅವರಿಗೆ ವಿಶ್ರಾಂತಿಯ ಅಗತ್ಯವಿದ್ದಾಗಲೆಲ್ಲ ಮತ್ತು ಸಮಯ ಸಿಕ್ಕಾಗೆಲ್ಲ ಡಾ. ರಾವ್ ಮನೆಗೆ ಹೋಗಿ ವಿಶ್ರಮಿಸುತ್ತಿದ್ದರು. ೧೯೪೨ ರಲ್ಲಿ ಡಾ. ಅಂಬೇಡ್ಕರ್ ಅವರು ವೈಸರಾಯ್ ಮಂಡಳಿಯಲ್ಲಿ ಕಾರ್ಮಿಕ ಸಚಿವರಾಗಿದ್ದರು. ಅದಕ್ಕಾಗಿ ಅವರು ದೆಹಲಿಯಲ್ಲೇ ಇರುತ್ತಿದ್ದರು. ಡಾ. ಅಂಬೇಡ್ಕರ್ ಅವರು ಮುಂಬೈಗೆ ಬಂದಾಗೆಲ್ಲ ತಮ್ಮ ಈ ಆತ್ಮೀಯ ಗೆಳೆಯನನ್ನು ಭೇಟಿಯಾಗಲು ಸಮಯ ಮೀಸಲಿಡುತ್ತಿದ್ದರು. ಡಾ. ಅಂಬೇಡ್ಕರ್ ಮತ್ತು ಡಾ. ರಾವ್ ಈ ಇಬ್ಬರು ಗೆಳೆಯರ ಸಮಾಗಮವಾದಾಗ ಸಹಜವಾಗಿಯೇ ಆ ಕೂಟದಲ್ಲಿ ವೈಚಾರಿಕ ಚರ್ಚೆಯು ಬಿಸಿಯೇರುತ್ತಿತ್ತು. ಚಹಾ-ಉಪಹಾರ ಸೇವಿಸುವಾಗಲೂ ಈ ಇಬ್ಬರು ವಿದ್ವಾಂಸರ ನಡುವೆ ವಿಭಿನ್ನ ವಿಷಯಗಳ ಕುರಿತು ಬಹಳ ಆಳವಾದ ಮತ್ತು ಮುಕ್ತವಾದ ಚರ್ಚೆ ನಡೆಯುತ್ತಿತ್ತು. ಕೆಲವೊಮ್ಮೆ ವಾದ-ವಿವಾದ ತಾರಕಕ್ಕೇರುತ್ತಿತ್ತು. ವಿದ್ವಾಂಸರ ಇಂತಹ ಬೌದ್ಧಿಕ ಚರ್ಚೆಗಳನ್ನು ಕೇಳುವುದು ಅತ್ಯಂತ ದುರ್ಲಭ ಸಂಯೋಗವೆಂದೇ ಪರಿಗಣಿಸಬೇಕು. ಇಂತಹುದೇ ಕೆಲವು ಸಂದರ್ಭಗಳಲ್ಲಿ ಆ ಬೌದ್ಧಿಕ ಚರ್ಚೆಗಳನ್ನು ಕೇಳುವ ಸೌಭಾಗ್ಯ ನನಗೂ ಸಹ ಸಿಕ್ಕಿತು.

ಡಾ. ಅಂಬೇಡ್ಕರ್ ಅವರು ಅಲ್ಲಿಗೆ ಬಂದು ಹೋಗುತ್ತಾರೆ ಎಂಬುದು ನನಗೆ ಅವರನ್ನು ಮುಖಾಮುಖಿ ಭೇಟಿಯಾಗುವ ವರೆಗೂ ತಿಳಿದಿರಲಿಲ್ಲ. ಆಗ ನಾನು ನನ್ನ ಆತ್ಮೀಯ ಗೆಳತಿಯರನ್ನು ಭೇಟಿ ಮಾಡಲು ಅಲ್ಲಿಗೆ ಹೋಗುತ್ತಿದ್ದೆ.

ಒಮ್ಮೆ ನಾನು ವಿಲೇಪಾರ್ಲೆಯ ಡಾ. ರಾವ್ ಮನೆಗೆ ಹೋಗಿದ್ದೆ ಮತ್ತು ಅದೇ ಸಮಯಕ್ಕೆ ಡಾ. ಅಂಬೇಡ್ಕರ್ ಅಲ್ಲಿಗೆ ಬಂದರು. ಇದು 1947ರ ಆರಂಭದಲ್ಲಿ ನಡೆದ ಘಟನೆ. ಆ ಕ್ಷಣದ ವರೆಗೂ ಡಾ. ಅಂಬೇಡ್ಕರ್ ಬಗ್ಗೆ ವಿಶೇಷವೇನೂ ನನಗೆ ತಿಳಿದಿರಲಿಲ್ಲ. ವೈಸರಾಯ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರಿಂದ ಅವರ ಹೆಸರು ಕೇಳಿದ್ದೆ ಅಷ್ಟೇ. ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವೂ ಇರಲಿಲ್ಲ. ಶಾಲಾದಿನಗಳಲ್ಲಿ ಅಧ್ಯಯನದ ಹೊರತಾಗಿ ಪ್ರಪಂಚದ ಬೇರಾವುದೇ ವಿಷಯದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ನಾನು ನೌಕರಿಯಲ್ಲಿದ್ದಾಗಲೂ ಸಹ ನಾನಾಯಿತು, ನನ್ನ ಕೆಲಸವಾಯಿತು. ಇದೇ ನನ್ನ ಪ್ರವೃತ್ತಿಯಾಗಿತ್ತು.

ಡಾ. ಅಂಬೇಡ್ಕರ್ ಅವರು ರಾವ್ ಮನೆಗೆ ಬಂದಾಗ ನಾನು ಅಲ್ಲಿಯೇ ಇದ್ದೆ. ಆಗ ಔಪಚಾರಿಕವಾಗಿ, ಡಾ. ರಾವ್ ನನ್ನನ್ನು ಅವರಿಗೆ ಪರಿಚಯಿಸುತ್ತ- “ಇವಳು ನನ್ನ ಮಗಳ ಗೆಳತಿ, ಬಹಳ ಬುದ್ಧಿವಂತೆ. ಎಂಬಿಬಿಎಸ್ ಮಾಡಿ, ಡಾ. ಮಾಳವಣಕರ್ ಅವರಂಥ ಖ್ಯಾತ ವೈದ್ಯರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದಾಳೆ” ಇತ್ಯಾದಿ…ಇತ್ಯಾದಿ…! ಇದೇ ಅವರ-ನನ್ನ ಮೊದಲ ಭೇಟಿ!

ಡಾ. ಅಂಬೇಡ್ಕರ್ ಅವರನ್ನು ನನಗೆ ಪರಿಚಯಿಸುತ್ತ ರಾವ್ ಅವರು ಡಾ. ಅಂಬೇಡ್ಕರ್ ಬಗ್ಗೆ ನನಗೆ ವಿಶೇಷ ಮಾಹಿತಿ ನೀಡಿದರು. ಡಾ. ಅಂಬೇಡ್ಕರ್ ಅವರು ಅತ್ಯಂತ ಪ್ರತಿಕೂಲ ಸಂದರ್ಭಗಳಲ್ಲಿ ಪಡೆದ ವಿದೇಶಿ ಪದವಿಗಳು, ಅವರ ಸಮಾಜ ಸುಧಾರಣಾ ಕಾರ್ಯಗಳು, ಅವರ ಮೌಲಿಕ ಗ್ರಂಥಗಳು, ಅವರ ವಿದ್ವತ್ತು, ಅವರ ಗ್ರಂಥಾಲಯ ಇತ್ಯಾದಿ ವಿಷಯಗಳನ್ನು ಬಣ್ಣಿಸಿದರು. ಅದನ್ನೆಲ್ಲ ಕೇಳಿದ ನನಗೆ ಒಬ್ಬ ಮಹಾಪುರುಷನ ಪರಿಚಯವಾದ ಆನಂದವಾಯಿತು. ಡಾ. ಅಂಬೇಡ್ಕರ್ ಅವರ ಪಾಂಡಿತ್ಯ ಮತ್ತು ತೇಜೋಮಯ ವ್ಯಕ್ತಿತ್ವ ಕಂಡು ವಿಸ್ಮಿತಳಾದೆ. ಮೊದಲ ನೋಟದಲ್ಲೇ ಡಾ. ಅಂಬೇಡ್ಕರ್ ಅವರು ಸಾಮಾನ್ಯ ವ್ಯಕ್ತಿಯಲ್ಲ; ಅಸಾಮಾನ್ಯ ಹಾಗೂ ಮಹಾನ್ ವ್ಯಕ್ತಿ ಎಂಬುದನ್ನು ತಿಳಿದುಕೊಂಡೆ.

ಡಾ. ಅಂಬೇಡ್ಕರ್ ಅವರ ವ್ಯಕ್ತಿತ್ವ ಅತ್ಯಂತ ಪ್ರಭಾವಿ ಮತ್ತು ಅಗಾಧವಾಗಿತ್ತು. ಅವರ ಭವ್ಯವಾದ ತಲೆ, ಹೊಳೆಯುವ ಮತ್ತು ಭೇದಕ ಕಣ್ಣುಗಳು, ಅತ್ಯಾಧುನಿಕ ಶಿಸ್ತಿನ ಉಡುಗೆ, ಅವರ ಮುಖದ ತೇಜಕಳೆಯನ್ನು ಕಂಡು, ಮೊದಲ ನೋಟದಲ್ಲೇ ಅವರ ಅಸಾಮಾನ್ಯ ವ್ಯಕ್ತಿತ್ವದ ಪರಿಚಯವಾಗುತ್ತಿತ್ತು. ವಿದೇಶದಲ್ಲಿ ಡಾ. ಅಂಬೇಡ್ಕರ್ ಅವರನ್ನು `ಜರ್ಮನಿಯ ರಾಜಕುಮಾರ’ ಎಂದೇಕೆ ಕರೆಯಲಾಯಿತು? ಇದು ಅವರ ಮೊದಲ ನೋಟದಲ್ಲೇ ಅರಿವಾಗುತ್ತಿತ್ತು. ಅವರ ಪರಿಣಾಮಕಾರಿ ವ್ಯಕ್ತಿತ್ವಕ್ಕೆ ಪ್ರಕಾಂಡ ಪಾಂಡಿತ್ಯದ ಸಂಯೋಜನೆಯಿಂದ, ಅವರು ಇತರರ ಮೇಲೆ ವಿಭಿನ್ನ ಪ್ರಭಾವ ಬೀರುತ್ತಿದ್ದರು.

ನನ್ನ ಪರಿಚಯವಾದ ನಂತರ ಡಾ. ಅಂಬೇಡ್ಕರ್ ಅವರು ನನ್ನ ಬಗ್ಗೆ ಬಹಳ ಆತ್ಮೀಯತೆಯಿಂದ ವಿಚಾರಿಸಿದರು. ಇದಕ್ಕೆ ಕಾರಣ ಅವರು ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದರು ಎಂಬುದೇ ಆಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ವೈದ್ಯೆಯಾಗುವುದು ಅಪರೂಪದ ಸಂಗತಿ ಎಂದವರು ನನ್ನನ್ನು ಅಭಿನಂದಿಸಿದರು. ಅದೇ ರೀತಿಯಲ್ಲಿ ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಉತ್ಸಾಹದಿಂದ ಮುನ್ನಡೆಯಬೇಕು ಎಂಬ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಹೀಗೆಯೇ ನಮ್ಮ ಚರ್ಚೆ ನಡೆಯಿತು. ಅದರಲ್ಲಿ ಡಾ. ಅಂಬೇಡ್ಕರ್‌ರಿಂದ ನಾನು ಅನೇಕ ವಿಷಯ ತಿಳಿದುಕೊಂಡೆ. ಅದರಲ್ಲಿ ಹೆಚ್ಚಿನವು ನನಗೆ ಹೊಸತಾಗಿದ್ದವು.

-ಡಾ. ಸವಿತಾ ಭೀಮರಾವ್ ಅಂಬೇಡ್ಕರ್
(ಡಾ. ಅಂಬೇಡ್ಕರ್ ಸಹವಾಸದಲ್ಲಿ)

*

ಇದು ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರು ಅವರ ಆತ್ಮಕಥನದ ಒಳಗಿನ ಕೆಲವು ಮಾತುಗಳು. ಅಂಬೇಡ್ಕರ ಜತೆಗಿನ ಬದುಕಿನ ಕಥೆಗೆ ಅವರು ಡಾ. ಅಂಬೇಡ್ಕರ್ ಸಹವಾಸದಲ್ಲಿ ಎಂದು ಹೆಸರಿಟ್ಟಿದ್ದಾರೆ. ಬಿಜಾಪುರದ ದಲಿತ ಚಳವಳಿಯ ಒಡನಾಡಿ ಅನಿಲ ಹೊಸಮನಿ ಅನುವಾದಿಸಿದ್ದಾರೆ. ಅನಿಲ ಅವರು ಡಾ. ಸವಿತಾ ಅಂಬೇಡ್ಕರ್ ಅವರನ್ನು ಭೆಟ್ಟಿಯಾಗಿದ್ದರು ಮತ್ತು ಅವರ ಆರ್ಶೀವಾದ ಪಡೆದಿದ್ದರು. ಲಡಾಯಿ ಪ್ರಕಾಶನ ಈ ಪುಸ್ತಕ ಪ್ರಕಟಿಸುತ್ತಿದೆ.

330 ರೂ ಮುಖಬೆಲೆ ಪುಸ್ತಕದ ಪ್ರಕಟಣಾ ಪೂರ್ವ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ.

ಆಗಸ್ಟ್ 15 ರ ತನಕ ಮುಂಗಡ ಬುಕ್ಕಿಂಗ್ ಮಾಡಬಹುದು.

ಇಂದೇ ಬುಕ್ ಮಾಡಿರಿ

ಮುಂಗಡ ಬುಕ್ಕಿಂಗ್ ಮೊತ್ತ ರೂ 250/- ಅಂಚೆವೆಚ್ಚವೂ ಉಚಿತ.

*

ಲಡಾಯಿ ಪ್ರಕಾಶನ: 9480286844

ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ

ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ

ಮುಂಗಡ ಬುಕ್ಕಿಂಗ್ ಮಾಡಿದವರು

* ಚಿದಂಬರ ರಾವ್ ಜಂಬೆ ಹೆಗ್ಗೋಡು
* ಕುಮಾರ್ ಆರ್ ಮುಂಡಗೋಡು
* ಅಶೋಕ ಶೆಟ್ಟರ ಧಾರವಾಡ
* ರೋಹಿತ್ ಕೆ ಹಾಸನ
* ಮಹಾಂತೇಶ ನವಲಕಲ್ಲ ಗುಲ್ಬರ್ಗ
* ಮೌನೇಶ ಹಂಪಿ
* ಅಹೋಬಳಪತಿ ಚಿತ್ರದುರ್ಗ
* ಮೇಶಾಕ್ ದೊಡ್ಮನೆ ರಾಯಚೂರು
* ನಾರಾಯಣಸ್ವಾಮಿ ಪಿ ಎನ್ ಬಾಗೇಪಲ್ಲಿ
* ರೇಖಾಂಭ ಶಿವಮೊಗ್ಗ
* ಗಂಗಾಧರ ಪತ್ತಾರ ಬಳ್ಳಾರಿ
* ಕೆ. ಎನ್. ದೊಡ್ಡಮನಿ ಬೆಳಗಾವಿ
* ಶಶಿಧರ ಬಿ.ಎಂ ಬೆಂಗಳೂರ
* ಸುಬ್ಬರಾವ್ ಎಂಟೆತ್ತಿನವರ ರಾಣೆಬೆನ್ನೂರ
* ಕರಿಸ್ವಾಮಿ ಕೆ ಬೆಂಗಳೂರ
* ಸಬಿತಾ ಬನ್ನಾಡಿ ಭದ್ರಾವತಿ
* ನವೀನಕುಮಾರ ಜೆ ಟಿ ಗೌರಿಬಿದನೂರ
* ಹೇಮಲತಾ ಮಂಡ್ಯ
* ಶಾಂತಾ ಮಠ ಗುಲ್ಬರ್ಗ
* ಸಬಿಹಾ ಭೂಮಿಗೌಡ ಮೈಸೂರ
* ಮಮತಾ ನಿರಂಜನ ಶಿವಮೊಗ್ಗ
* ಸಂಜೀವ ಕಾಂಬಳೆ ಅಥಣಿ
* ಡಾ. ಆರ್ ಡಿ ಮಲ್ಲಯ್ಯ ಶಿವಮೊಗ್ಗ
* ಎಂ. ಬಿ. ಕಟ್ಟಿ ಗುಲ್ಬರ್ಗ
* ಬಸವರಾಜ ಪಾಟೀಲ ದೇವನಹಳ್ಳಿ
* ವಸಂತ ನಾವಿ ಗುಲ್ಬರ್ಗ
* ಡಾ ತುಕಾರಾಮ ಮೈಸೂರ
* ರಾಜೇಶ ಸಿಂಧೆ ಬಸವ ಕಲ್ಯಾಣ
* ಎಂ. ಬಿ. ಶೇಖರ ಉಪ್ಪಿನಂಗಡಿ
* ಯಡೂರ ಮಹಾಬಲ ಬೆಂಗಳೂರ

Leave a Reply