“ಹುಸೇನಿ ಬ್ರಾಹ್ಮಣರು” ಕೃತಿ, ಕೃತಿಕಾರನ ಪ್ರಯತ್ನ ಕೆಲ ಮಿತಿಗಳ ನಡುವೆಯೂ ಶ್ಲಾಘನೀಯ

4 years ago

ವ್ಯಕ್ತಿಯ ನೋವು, ಸಂಕಟಗಳು ವೈಯುಕ್ತಿವಾಗಿ ಹೆಚ್ಚು ಇದ್ದು, ಆತ/ಆಕೆ ಅಸಹಾಯಕವಾದಷ್ಟೂ, ಅದೇ ಹೊತ್ತಿನಲ್ಲಿ ಸಾಮಾಜಿಕ ಬದುಕೂ ಅಸಹನೀಯವಾಗಿದ್ದರೆ ಆತನ ಮನದಾಳದಲ್ಲಿ ಬದುಕಿನ ಬಗ್ಗೆ ಜುಗುಪ್ಸೆ, ಸಿಟ್ಟು, ಸಮಾಜದ ಬಗ್ಗೆ ಸಹಜ ಆಕ್ರೋಶ, ದ್ವೇಷದ ಭಾವನೆಗಳನ್ನು ಹುಟ್ಟುತ್ತವೆ.

ಅಂತಹ ಹೊತ್ತಿನಲ್ಲಿ ಆತನನ್ನು ಮತ್ತೆ ಮಾನವೀಯವನ್ನಾಗಿ ಮಾಡುವ, ಜೀವನ ಪ್ರೀತಿ ತಂದು ಕೊಡುವ ಶಕ್ತಿಯುಳ್ಳದ್ದು ಮನುಷ್ಯ ಪ್ರೀತಿಯೊಂದೆ. ಅದು ಬಿಟ್ಟರೆ ಆ ಮನುಷ್ಯ ಪ್ರೀತಿಯನ್ನು ಉಕ್ಕಿಸುವಂತಹ ಬರಹಗಳಷ್ಟೆ ಎಂದು ಗಾಢವಾಗಿ ನಂಬಿರುವವನು ನಾನು.

ಅಂತಹದ ಸಂಕಟದ ಕ್ಷಣಗಳನ್ನು ದಿನಗಳನ್ನು ಕಳೆಯುತ್ತಿರುವ ನನ್ನಲ್ಲಿ ಕೆಲ ಬರಹಗಳು, ಕೃತಿಗಳು ನನ್ನನ್ನು ಮತ್ತಷ್ಟು ಮಾನವೀಯನನ್ನಾಗಿ, ಜೀವನ ಪ್ರೀತಿಯ ಕಡೆ ನಡೆಯಲು ದಾರಿ ತೋರಿಸುತ್ತವೆ. ಈ ಕಾರಣಕ್ಕೆ ಮನುಷ್ಯ ಮತ್ತು ಸಾಹಿತ್ಯ ನನ್ನ ಬದುಕಿನ ಕಡೆಯ ಆಯ್ಕೆಗಳು.

ಲಂಕೇಶ್ ಪತ್ರಿಕೆಯ ಆರಂಭಿಕ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಎನ್ ಕೆ ಮೋಹನ್ ರಾಂ ಅವರ ಇತ್ತೀಚಿನ ಕೃತಿ ” ಹುಸೇನಿ ಬ್ರಾಹ್ಮಣರು” ನಾನು ಇಂದು ಓದಿದ ಕೃತಿ. (ಮೊದಲಿಗೆ ಈ ಲೇಖಕರ ಹೆಸರು ನಾನು ಕೇಳಿದ್ದೆ, ಇದೇ ಲೇಖಕರು ಲಂಕೇಶರ ಬಗ್ಗೆ “ದಿ ಕ್ಯಾಪಿಟಲ್ ” – ಲಂಕೇಶ್ ಪ್ರೈವೇಟ್ ಲಿಮಿಟೆಡ್ ಕೃತಿಯಿಂದ. ಆ ಕೃತಿ ಓದಿದ ಸಂದರ್ಭದಲ್ಲಿ ಈ ಲೇಖಕರ ಬಗ್ಗೆ ಬೇಸರವಿತ್ತು. ಇತ್ತೀಚೆಗೆ ಇವರ ಹುಸೇನಿ ಬ್ರಾಹ್ಮಣರ ಪುಸ್ತಕ ಪ್ರಕಟವಾಗಿರುವುದು ಕೇಳಿದಾಗ, ಇದರ ಬಗೆಗೆ ಸೋಶಿಯಲ್ ಮೀಡಿಯದಲ್ಲಿ ಓದಿದಾಗ ಕುತೂಹಲದಿಂದ ಪುಸ್ತಕ ಕೊಂಡು ಓದಿದೆ. )

ಈ ಕೃತಿಯ ಹೆಸರು ಕೇಳಿದರೆ ನಮ್ಮ ಸಮಾಜದಲ್ಲಿ ವಿಚಿತ್ರ ಎನ್ನಿಸುವ, ಸಮಾಜದಲ್ಲಿ ಅತ್ತ ಹಿಂದುವೂ ಅಲ್ಲದ, ಇತ್ತ ಮುಸ್ಲಿಂ ಅಲ್ಲದ, ಬದುಕಿನ ಆಚರಣೆಗಳಲ್ಲಿ ಅರ್ಧ ಮುಸ್ಲಿಂ, ಅರ್ಧ ಹಿಂದೂ ಆಗಿ ಬದುಕುತ್ತಿರುವ ಚರಿತ್ರೆಯಲ್ಲಿ ಮನುಷ್ಯ ಸಂಬಂಧಗಳು ತನಗೆ ತಾನೆ ಸೃಷ್ಟಿಸಿಕೊಳ್ಳುವ ಕಾಲರೂಪಿ ಸಮಯದಾಯಕ್ಕೆ ವಿಶಿಷ್ಟ ಸಂಕೇತವಾಗಿರುವ “ಹುಸೇನಿ ಬ್ರಾಹ್ಮಣ” ರ ಚರಿತ್ರೆಯನ್ನು ತಿಳಿಸುವ ಕೃತಿ.

ಬಾಗ್ದಾದಿನ ನಿವಾಸಿ ರಹಬ ದತ್ತನೆಂಬ ಹಿಂದೂ ಧರ್ಮೀಯ ತನ್ನ ಅವ್ವನ ಆಣತಿಯ ಮೇರೆಗೆ ತನಗೆ ಸಂತಾನವಾಗಲೆಂದು, ಪ್ರವಾದಿ ಪೈಗಂಬರರ ಆಶೀರ್ವಾದ ಕೇಳಲು ಬರುತ್ತಾನೆ. ಆತನಿಗೆ ಸಂತಾನ ಭಾಗ್ಯ ಸಾಧ್ಯವಿಲ್ಲ ಎಂದ ಪೈಗಂಬರರ ಮಾತಿಗೆ, ಅಲ್ಲೆ ಇದ್ದ ಪೈಗಂಬರರ ಮೊಮ್ಮಗ ಇಮಾಮ್ ಹುಸೇನ್ ರಹಬ ದತ್ತನಿಗೆ ಸಂತಾನವಾಗಲೆಂದು ಮನತುಂಬಿ ಪ್ರಾರ್ಥಿಸುತ್ತಾರೆ. ಅವರ ಪ್ರಾರ್ಥನೆಯಿಂದಲೇ ತನ್ನ ಸಂತಾನ ಬೆಳೆಯಿತು ಎಂಬ ನಂಬಿಕೆಯಿಂದ ರಹಬ ದತ್ತ, ಮುಂದೆ ಅದೇ ಇಮಾಮ್ ಹುಸೇನರಿಗಾಗಿ ತನ್ನ ಸಂತಾನ ಮತ್ತು ಬದುಕನ್ನು ಬಲಿಕೊಟ್ಟ ಸಮುದಾಯಗಳ ಕೊಡು ಕೊಳೆಯ ಮತ್ತು ಸಾಂಸ್ಕೃತಿಕ ಸೌಹರ್ದತೆಯ ಅನಿವಾರ್ಯತೆಯ ಮಾನವೀಯ ಚರಿತ್ರೆ “ಹುಸೇನಿ ಬ್ರಾಹ್ಮಣರು” ಸಮುದಾಯದ್ದು.

ಚರಿತ್ರೆಯಲ್ಲಿ ಯಾವುದು ದಿಟ, ಯಾವುದು ಸಟೆ ಎಂಬ ಹುಡುಕಾಟ‌ ಮಾಡುವ ಹಠಮಾರಿ, ಸಾಂಪ್ರದಾಯಿಕ ಚರಿತ್ರೆಕಾರನಂತೆ ಇಲ್ಲಿನ ಲೇಖಕ ಹುಸೇನಿ ಬ್ರಾಹ್ಮಣ ಸಮುದಾಯದ ಇತಿಹಾಸ ಹುಡುಕಲು ಹೊರಡುವುದಿಲ್ಲ. ಬದಲಾಗಿ ಈ ಸಮುದಾಯ ಮೂಲತಃ ಹಿಂದು ಸಮುದಾಯದ ಭಾಗವಾಗಿದ್ದರೂ ಇಸ್ಲಾಂನೊಂದಿಗೆ ಇದು ಭೌತಿಕವಾಗಿ, ಭೌಗೋಳಿಕವಾಗಿ, ಮಾನಸಿಕವಾಗಿ ಒಡನಾಟ ಹೊಂದಿದ್ದು. ಚರಿತ್ರೆಯ ಉದ್ದಕ್ಕೂ ತನ್ನ ಅಸ್ತಿತ್ವಕ್ಕಾಗಿ, ವ್ಯಾಪಾರ, ಯುದ್ಧ, ಹೋರಾಟಗಳನ್ನೇ ಅವಲಂಭಿಸಿ ಭಾರತ ಮತ್ತು ಪಾಕಿಸ್ತಾನ ಸಮಾಜದಲ್ಲಿ ಹೇಗೆ ಧಾರ್ಮಿಕ ಸಮನ್ವಯ ಸಾಧಿಸುವ ಕಡೆ ಅದರ ನಡೆಯಿದೆ, ಈ ಸಮುದಾಯದ ಈ ಚಾರಿತ್ರಿಕ ನಡೆ ಇವತ್ತಿನ ಕೋಮು ದಳ್ಳುರಿಗೆ ಸಿಲುಕಿ , ಕಣ್ಣು ಕಳೆದುಕೊಂಡಿರುವ ಭಾರತೀಯ ಹಿಂದೂ- ಮುಸ್ಲಿಂ , ಕ್ರೈಸ್ತ, ಬೌದ್ಧ ಮೂಲಭೂತವಾದಿ ಅಂಧರಿಗೆ ಮರಳಿ ದೃಷ್ಟಿ ಕೊಡಬಲ್ಲ ಮದ್ದು ಹುಡುಕುವ ನಾಟಿ ವೈದ್ಯನ ಹುಡುಕಾಟದಂತಿದೆ.

ಈ ಕೃತಿಯಲ್ಲಿ ಮೋಹನ್ ರಾಂ ಅವರ ಉದ್ದೇಶ ಇರುವುದು ಕ್ರಿ ಪೂ 680 ರ ಕಾಲದಿಂದಲೂ ಈ ಹುಸೇನಿ ಬ್ರಾಹ್ಮಣ ಸಮುದಾಯ ಇತ್ತೆಂದು (ಐತಿಹಾಸಿಕ ಮತ್ತು ಜನಪದ ಮೂಲಗಳ ಆಧಾರದಿಂದ) ಹೇಳಲು ಅಲ್ಲ. ಕ್ರಿ.ಪೂ ದಿಂದ ಆರಂಭವಾಗಿ ಕ್ರಿ.ಶ ದಿಂದ ಇತ್ತೀಚಿನವರೆಗೂ ಆಗಬಹುದು ಈ ಮಣ್ಣಿನಲ್ಲಿ ಹಿಂದೂ – ಮುಸ್ಲಿಂ ಧಾರ್ಮಿಕ ಸೌಹಾರ್ದತೆ ಸಹಜವಾಗಿ ಇತ್ತು. ಮುಸ್ಲಿಮರ ಧಾರ್ಮಿಕ ಆಚರಣೆ, ನಂಬಿಕೆ ಮೊದಲಾದವುಗಳನ್ನು ಇಲ್ಲಿನ ಹಿಂದೂ, ಹಿಂದೂಗಳ ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಮುಸ್ಲಿಮರು ಸಹಜವಾಗಿ ಒಪ್ಪಿ ಗೌರವಿಸುತ್ತಿದ್ದರು. ಪ್ರಭುತ್ವದ ಹಿಂಸಾ ರಾಜಕಾರಣಕ್ಕೆ ಧರ್ಮ ಎಂದೂ ಒಡಂಬಡದೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಶ್ರಮಿಸುತ್ತಿತ್ತು. ಅಂತಹ ಉದಾತ್ತ ಧಾರ್ಮಿಕ ಪರಂಪರೆಗಳು ಇವತ್ತು ಸೃಷ್ಟಿಸಿರುವ ಭೀಕರತೆ ಎಂತಹದು ಎಂಬ ಅಂದಾಜನ್ನು ಸಮಾಜಕ್ಕೆ ಮನಗಾಣಿಸಲು “ಹುಸೇನಿ ಬ್ರಾಹ್ಮಣರು” ಚರಿತ್ರೆಯನ್ನು ಮರುಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಸಮಾಜದಲ್ಲಿ ಲೇಖಕ / ಪತ್ರಕರ್ತ, ಕಲಾವಿದ ಅನ್ನಿಸಿಕೊಂಡವನ ಕರ್ತವ್ಯ, ಉದ್ದೇಶ, ಗುರಿ ಮನುಷ್ಯ ಮನುಷ್ಯರ ನಡುವೆ ಯಾವುದೇ ಬಗೆಯ ತಾರತಮ್ಯವಿಲ್ಲದ, ಶಾಂತಿ, ಸೌಹಾರ್ದತೆಯ ಸಮ ಸಮಾಜದ ನಿರ್ಮಾಣಕ್ಕೆ ದುಡಿಯುವುದೇ ಆಗಿರುತ್ತದೆ. ಅಂತಹ ಸಮಾಜ ಇವತ್ತಿನ ತುರ್ತಾಗಿದೆ. ಆ ದಿಸೆಯಲ್ಲಿ “ಹುಸೇನಿ ಬ್ರಾಹ್ಮಣರು” ಕೃತಿ, ಕೃತಿಕಾರನ ಪ್ರಯತ್ನ ಕೆಲ ಮಿತಿಗಳ ನಡುವೆಯೂ ಶ್ಲಾಘನೀಯ.

ಎನ್ ಕೆ ಮೋಹನ್ ರಾಂ ಅವರು ಬೇರೆ ವಿಚಾರಗಳಲ್ಲಿ ಅವರ ಅಭಿಪ್ರಾಯ ಏನಿದೆಯೋ, ಏನೋ ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಆದರೆ ಒಬ್ಬ ಪತ್ರಕರ್ತರಾಗಿ ಅದೂ ಇವತ್ತು ಪತ್ರಕರ್ತನೊಬ್ಬನಿಗೆ ತನ್ನ ವೃತ್ತಿಯ ಬಗ್ಗೆ ಹಾಗೂ ಸಮಾಜದ ಬಗ್ಗೆ ಇರಬೇಕಾದ ನೈತಿಕ ಬದ್ಧತೆ, ಈ ಕೃತಿಯಲ್ಲಿನ ವಸ್ತು ವಿಷಯ ಮತ್ತು ಸಪೋರ್ಟಿಂಗ್ ಆದ ಉಳಿದ ಬರಹಗಳಲ್ಲಿ ಎದ್ದು ಕಾಣುತ್ತದೆ. ಈ ಕಾರಣಕ್ಕೆ ಮೋಹನ್ ರಾಂ ಅವರ ಬಗ್ಗೆ ಮನದಾಳದ ಗೌರವ ಹಾಗೂ ಪ್ರೀತಿ ನನ್ನಲ್ಲಿ ಹುಟ್ಟಿದೆ. ಹುಸೇನಿ ಬ್ರಾಹ್ಮಣರು ಕೃತಿಗಾಗಿ ಥ್ಯಾಂಕ್ಯು ಮೋಹನ್ ರಾಂ ಸಾರ್.

– ಎಚ್.ಎಸ್.ರೇಣುಕಾರಾಧ್ಯ, ಉಪನ್ಯಾಸಕರು

Leave a Reply