ಬೆಂಗಳೂರು: ವಿಧಾನ ಪರಿಷತ್ ನಲ್ಲಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ಸೋಲಾಗಿದೆ. ತಿದ್ದುಪಡಿ ವಿಧೇಯಕದ ಬಗ್ಗೆ ವಿಧಾನ ಪರಿಷತ್ ನಲ್ಲಿ ಚರ್ಚೆಯ ನಂತರ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದ ಪರಿಣಾಮ ಆಡಳಿತ ಪಕ್ಷದಲ್ಲಿ ಕನಿಷ್ಠ ಸದಸ್ಯ ಬಲ ಇಲ್ಲದೇ ತಿರಸ್ಕೃತವಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿಧೇಯಕದ ಪರವಾಗಿ 23 ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ, ವಿಪಕ್ಷಗಳ 26 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮಸೂದೆ ತಿರಸ್ಕರಿಸಲ್ಪಡುವ ಮೂಲಕ ಸರಕಾರಕ್ಕೆ ದೊಡ್ಡ ಹಿನ್ನಡೆಯಾಯಿತು.
ತಿದ್ದುಪಡಿ ವಿಧೇಯಕ ಅನುಮೋದನೆಗೆ ಮಂಡಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಸಹಕಾರ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಕಾಪಾಡುವ ದೃಷ್ಟಿಯಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಸಾಮಾನ್ಯ ವರ್ಗದಿಂದ ತಲಾ ಒಬ್ಬರನ್ನು ನಾಮಕರಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸದಸ್ಯರಿಗೆ ಮತದಾನದ ಹಕ್ಕು ಹೊಂದಿಲ್ಲ ಎಂದರು.
ಜೊತೆಗೆ ಎಲ್ಲಾ ಜನ ಪ್ರತಿನಿಧಿಗಳ ಮಾದರಿಯಲ್ಲಿ ಸೌಹಾರ್ದ ಸಹಕಾರಿ ಮಂಡಳಿಗಳ ಸದಸ್ಯರು ಸರಕಾರಕ್ಕೆ ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸುವುದು, ಪ್ರತಿ 3 ವರ್ಷಕ್ಕೊಮ್ಮೆ ಸರಕಾರಿ ಲೆಕ್ಕ ಪರಿಧಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ವಿಪಕ್ಷ ಸದಸ್ಯರು ಆಸ್ತಿ ವಿವರ ಸಲ್ಲಿಸುವುದು, ಪ್ರತಿ 3 ವರ್ಷಕ್ಕೊಮ್ಮೆ ಸರಕಾರಿ ಲೆಕ್ಕ ಪರಿಧಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸುವ ಅಂಶಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಪಕ್ಷ ಸದಸ್ಯರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಆಸ್ತಿ ವಿವರಗಳನ್ನು ಪ್ರತಿ ವರ್ಷ ಲೋಕಾಧಿಯುಕ್ತಕ್ಕೆ ಸಲ್ಲಿಸಬೇಕು ಎಂದಿದೆ. ಆದರೆ, ಬಹುತೇಕರು ಸಲ್ಲಿಸುವುದಿಲ್ಲ. ಸೌಹರ್ದ ಸಹಕಾರಿ ಮಂಡಳಿಗಳ ಒಟ್ಟು ಸದಸ್ಯರ ಸಂಖ್ಯೆ 6.50 ಲಕ್ಷ ದಾಟುತ್ತದೆ. ಲಕ್ಷಾಂತರ ಮಂದಿಯ ಆಸ್ತಿ ವಿವರ ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಸೌಹಾರ್ದ ಸಹಕಾರಿ ಮಂಡಳಿಗಳು ತಾವು ಹೊಂದಿರುವ ಒಟ್ಟು ಠೇವಣಿಯಲ್ಲಿ ಶೇ.20ರಷ್ಟನ್ನು ಶಾಸನಬದ್ಧ ಮೀಸಲು ದ್ರವ್ಯ (ಎಸ್ಎಲ್ಆರ್) ರೂಪದಲ್ಲಿ ಜಿಲ್ಲಾಸಹಕಾರ ಬ್ಯಾಂಕ್ಗಳು ಅಥವಾ ಅಪೆಕ್ಸ್ ಬ್ಯಾಂಕ್ಗಳಲ್ಲಿ ಮಾತ್ರವೇ ಠೇವಣಿ ಇರಿಸಬೇಕು ಎಂಬ ಅಂಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸೌಹಾರ್ದ ಸಹಕಾರಿ ಮಂಡಳಿಗಳು ಇತರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿ ಇರಿಸುವುದಾದರೆ, ರಿಜಿಸ್ಟ್ರಾರ್ಗಳಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಲೆಕ್ಕ ಪರಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸಬೇಕು ಎಂಬ ಷರತ್ತುಗಳು ಸರಿಯಲ್ಲ ಇವುಗಳು ಸಹಕಾರ ಸಂಸ್ಥೆಯ ಕುತ್ತಿಗೆಯನ್ನು ಹಿಚುಕಿ ಹಾಕುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಆಡಳಿತ ಪಕ್ಷದ ಕೆ.ಎಸ್. ನವೀನ್ ಮಾತನಾಡುವ ವೇಳೆ ಮಸೂದೆಗೆ ಅಂಗೀಕಾರ ಸಿಗಲಿದೆ ಎಂಬ ವಿಶ್ವಾಸದೊಂದಿಗೆ ಆಡಳಿತ ಪಕ್ಷದ ಬಹುತೇಕ ಸದಸ್ಯರು ಸದನದಿಂದ ಹೊರಗೆ ಹೋಗಿದ್ದರು. ಇದೆ ಅವಕಾಶ ಬಳಸಿಕೊಂಡ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಸೂದೆಯನ್ನು ಮತಕ್ಕೆ ಹಾಕುವಂತೆ ಪಟ್ಟುಹಿಡಿದರು.
ಕ್ಷಿಪ್ರ ಅವಧಿಯಲ್ಲಿ ತಮ್ಮ ಸದಸ್ಯರನ್ನು ಒಟ್ಟುಗೂಡಿಸಲು ಸಭಾ ನಾಯಕ ಬೋಸರಾಜ ಸೇರಿದಂತೆ ಹಲವರು ಮಾಡಿದ ಪ್ರಯತ್ನ ವಿಫಲವಾಯಿತು. ಈ ನಡುವೆ ಮಸೂದೆಯನ್ನು ಮತಕ್ಕೆ ಹಾಕಿದಾಗ ಪರವಾಗಿ 23 ಮತ್ತು ವಿರೋಧವಾಗಿ 26 ಮತಗಳು ಬಂದವು. ಇದರಿಂದ ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಸೋಲಾಯಿತು.




