ಧರ್ಮಸ್ಥಳ ಫೈಲ್ಸ್: ಪಾನ್ ಕಾರ್ಡ್ ಮತ್ತೊಂದು ಡೆಬಿಟ್ ಕಾರ್ಡ್‌ ಪತ್ತೆ

9 months ago

ಮಂಗಳೂರು: ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗೆ ಜಾಗ ಅಗೆಯುವ ಕಾರ್ಯವನ್ನು ಇಂದೂ ಮುಂದುವರೆಸಿದರು.

ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಎರಡನೇ ಜಾಗವನ್ನು ಅಗೆಯುವ ಕಾರ್ಯ ಆರಂಭವಾಗಿದೆ. ಈ ನಡುವೆ ಅಗೆಯುತ್ತಿರುವ ಸ್ಥಳದಲ್ಲಿ ಒಂದು ಪಾನ್ ಕಾರ್ಡ್ ಮತ್ತೊಂದು ಡೆಬಿಟ್ ಕಾರ್ಡ್‌ ಪತ್ತೆಯಾಗಿದೆ. ಎಂದು ದೂರುದಾರನ ಪರ ವಕೀಲ ಮಂಜುನಾಥ್‌ ಎನ್‌ ಹೇಳಿದರು.

ಈ ಸಂಬಂಧ ಮಾಧ್ಯಮಗಳಿಗೆ ಎಸ್‌ಐಟಿ ಮೂಲಗಳನ್ನು ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸೈಟ್ ಸಂಖ್ಯೆ 1 ರಲ್ಲಿ ಸುಮಾರು 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ.

ಒಂದು ಕಾರ್ಡ್‌ನಲ್ಲಿ ಪುರುಷನ ಹೆಸರು ಇದ್ದರೆ ಇನ್ನೊಂದು ಕಾರ್ಡ್‌ನಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ. ಸಾಕ್ಷ್ಯಗಳು ಸಿಕ್ಕಿದ ಕಾರಣ ನಮಗೆ ಹೊಸ ಭರವಸೆ ಮೂಡಿದೆ. ನಾವು ಎಸ್‌ಐಟಿ ಅವರ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ವಿಶೇಷ ತನಿಖಾ ತಂಡ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದರು.

ಇನ್ನು ದೂರುದಾರ ಗುರುತಿಸಿರುವ ಎರಡನೆ ಸ್ಥಳ ತಲುಪುವುದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ  ಹರಸಾಹಸ ಪಡಬೇಕಾಯಿತು. ಈ ಜಾಗಕ್ಕೆ ನೆಲ ಅಗೆಯುವ ಯಂತ್ರವನ್ನು ಒಯ್ಯುವುದು ಕಷ್ಟಸಾಧ್ಯವಾಗಿರುವುದರಿಂದ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು ಅಗೆಯಲಾಗುತ್ತಿದೆ. ದೂರುದಾರ ತೋರಿಸಿದ ಎರಡನೇ ಪಾಯಿಂಟ್‌ನಿಂದ ಮಣ್ಣು ಅಗೆಯುವ ಕಾರ್ಯ ನಡೆದಿದ್ದು, ಈಗಾಗಲೇ ಗುರುತಿಸಿರುವ 12 ಪಾಯಿಂಟ್‌ಗಳಲ್ಲಿ ಅಗೆತ ಬಾಕಿಯಿದೆ.

ಮೂಲಗಳ ಪ್ರಕಾರ, ದೂರುದಾರ ತಲೆ ಬುರುಡೆಯೊಂದನ್ನು ತಂದಿರುವ ಜಾಗದಲ್ಲಿ ಇಂದು ಅಗೆತ ನಡೆಯಲಿದೆ. ಮಾನವ ಶ್ರಮದ ಮೂಲಕವೇ ಮಣ್ಣು ಅಗೆಯಲಾಗುತ್ತದೆ. ಏಕೆಂದರೆ, ಈ ಪಾಯಿಂಟ್‌ಗಳು ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅಲ್ಲದೆ, ಅಲ್ಲಿ ನಿನ್ನೆಯಂತೆ ನೀರಿನ ಒರತೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಿದೆ. ಒಂದು ವೇಳೆ ಹೂತಿಟ್ಟ ಶವಗಳ ಅಸ್ತಿಪಂಜರ ಇದ್ದರೆ, ಅದನ್ನು ಬಹಳ ಸೂಕ್ಷ್ಮವಾಗಿ ಮೇಲೆತ್ತಬೇಕಿದೆ. ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್‌ಐಟಿ ಎಸ್‌.ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಗೆತ ನಡೆದಿದೆ.

Leave a Reply