ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ವಿದೇಶಿಗರಿಗೆ ನಕಲಿ ಆಧಾರ್, ಪಾನ್ ಕಾರ್ಡ್ ಇನ್ನಿತರ ದಾಖಲಾತಿಗಳನ್ನು ಅಕ್ರಮವಾಗಿ ಸಿದ್ಧಪಡಿಸಿ ಕೊಡುವ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿವೆ ಎಂಬ ಆರೋಪಗಳಿಗೆ ಪೂರಕವಾದ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ.
ಇದೀಗ ಬೆಂಗಳೂರಿನ ಗಂಗಮ್ಮಗುಡಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಕಮ್ಮಗೊಂಡನಹಳ್ಳಿ ಕೃಷ್ಣಮೂರ್ತಿ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ಕೃಷ್ಣಮೂರ್ತಿ ಶ್ರೀಕೃಷ್ಣ ಕಂಪ್ಯೂಟರ್ಸ್ ಎಂಬ ಹೆಸರಿನಲ್ಲಿ ಕಂಪ್ಯೂಟರ್ ಅಂಗಡಿ ನಡೆಸುತ್ತಿದ್ದನು. ಈತ ಹೆಚ್ಚಿನ ಹಣದ ಆಶೆಗಾಗಿ ವಿದೇಶಿಗರಿಗೆ ಅನಧಿಕೃತವಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್ ತಯಾರುಮಾಡಿ ಕೊಡುತ್ತಿದ್ದ ಎನ್ನಲಾಗಿದೆ.
ಈ ವಿಚಾರ ತಿಳಿದು ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದ ವೇಳೆ ಈತನ ಕಾನೂನು ಬಾಹಿರ ಚಟುವಟಿಕೆಗಳು ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಿಸಿರುವ ಗಂಗಮ್ಮಗುಡಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕನಕನಗರದಲ್ಲಿರುವ ಎಂಎಸ್‍ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ದಾಳಿಯಲ್ಲಿ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ ಪತ್ತೆಯಾಗಿದ್ದವು. ಆರೋಪಿಗಳು ನಕಲಿ ಯಾವುದೇ ಕ್ಷೇತ್ರದ ವೋಟರ್ ಐಡಿ ಹಾಗೂ ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಿದ್ದರು ಎಂಬ ಅಂಶ ಬಯಲಾಗಿತ್ತು.
ಮೂವರು ಆರೋಪಿಗಳು ನಗರದ ಯಾವುದೇ ಕ್ಷೇತ್ರದ ವೋಟರ್ ಐಡಿ ಹಾಗೂ ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಿದ್ದರು. ಅಲ್ಲದೆ ಒರಿಜಿನಲ್ ಐಡಿ ಕಾರ್ಡ್ ಎಂದು ಹಣ ಪಡೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತಿದ್ದ ಆರೋಪದ ಮೇಲೆ ಈ ಮೂವರ ವಿರುದ್ಧ ದೂರು ದಾಖಲಾಗಿತ್ತು.
ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸಿಸಿಬಿ ಪೊಲೀಸರು ಮೌನೇಶ್, ರಾಘವೇಂದ್ರ, ಭಗತ್ ಎಂಬುವರನ್ನು ಬಂಧಿಸಿದ್ದರು. ದಾಳಿ ವೇಳೆ ಕಂಪ್ಯೂಟರ್ ಸೇರಿ ಹಲವು ವಸ್ತು ಜಪ್ತಿ ಮಾಡಲಾಗಿತ್ತು.




