ವಿಜಯಪುರ: ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಚಾರವಾಗಿ ಉಂಟಾಗಿದ್ದ ಎಲ್ಲ ಗೊಂದಲಗಳು ಬಗೆಹರಿದಿದ್ದು ಇದೀಗ ಆಡಳಿತ ಯಂತ್ರ ಚುರುಕುಗೊಳಿಸುವ ಕಡೆ ಗಮನ ಹರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದರೊಂದಿಗೆ ಎಲ್ಲ ಬಿಕ್ಕಟ್ಟುಗಳು ಇತ್ಯರ್ಥಗೊಂಡಿವೆ ಎಂದರು.
ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಅವರೇ ಹೊಂದಾಣಿಕೆ ಮಾಡಿಕೊಂಡ ಮೇಲೆ ನಾವೇನು ಹೇಳಲು ಸಾಧ್ಯ? ಹೀಗಾಗಿ ಏನೇ ಇದ್ದರೂ ಹೈಕಮಾಂಡ್ ನಿರ್ಧರಿಸಬೇಕಾಗುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಸಹ ನಮ್ಮ ಹಂತದಲ್ಲಿ ಇಲ್ಲ. ಸಮಯ ಬಂದಾಗ ಪಕ್ಷದ ವರಿಷ್ಠರು ಇದರ ಬಗ್ಗೆ ತೀರ್ಮಾನಿಸುತ್ತಾರೆ. ಒಬ್ಬರಿಗೆ ಒಂದೇ ಹುದ್ದೆ ಇರಬೇಕು ವಿಚಾರದ ಬಗ್ಗೆಯೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಇಲಾಖೆಯ ಕೆಲಸಕ್ಕಾಗಿ ದೆಹಲಿಗೆ ಪದೇಪದೇ ಹೋಗಬೇಕಾಗುತ್ತದೆ. ನನ್ನ ದೆಹಲಿ ಭೇಟಿಗೂ, ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಶಾಸಕರಿಗೆ ಅನುದಾನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲ ಶಾಸಕರಿಗೆ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಮತ್ತು ಬಿಜೆಪಿ ಶಾಸಕರಿಗೆ ತಲಾ 25 ಕೋಟಿ ರೂ. ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲು ಸಿಎಂ ಪ್ರಯತ್ನ ಮಾಡಲಿದ್ದಾರೆ ಎಂದರು.
ಈ ಹಿಂದೆ ಬಿಜೆಪಿಯವರೂ ಇದೇ ರೀತಿ ಮಾಡಿದ್ದರು. ಬಿಜೆಪಿ ಶಾಸಕರಿಗೆ 100 ಕೋಟಿ ರೂ. ಕೊಟ್ಟು, ಕಾಂಗ್ರೆಸ್ ಶಾಸಕರಿಗೆ ಕೇವಲ 5 ಕೋಟಿ ರೂ. ಅನುದಾನ ನೀಡಿದ್ದರು. ನನಗೂ ಐದೇ ಕೋಟಿ ರೂ. ಕೊಟ್ಟಿದ್ದರು. ನಾವು ಅರ್ಧ-ಅರ್ಧ ನೀಡಿದ್ದೇವೆ ಎಂದರು.




