ಸುರ್ಜೇವಾಲ ಬದಲಾವಣೆಗೆ ಸಿದ್ದರಾಮಯ್ಯ ಬಣದ ತಂತ್ರ!

11 months ago

ಬೆಂಗಳೂರು: ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳಿಗೆ ಸಿದ್ದರಾಮಯ್ಯ ತೆರೆ ಎಳೆದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಬದಲಾವಣೆಗೆ ವೇದಿಕೆ ಸಜ್ಜಾಗಿದೆ.

ಸುರ್ಜೇವಾಲ ಅವರ ಕಾರ್ಯವೈಖರಿ ಬಗ್ಗೆ ಮೊದಲಿನಿಂದಲೂ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಆಪ್ತ ಬಣದ ಮೂಲಕ ಸುರ್ಜೇವಾಲಾ ಹಠಾವೋ ತಂತ್ರ ರೂಪಿಸತೊಡಗಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸದ್ಯ ಉಂಟಾಗಿದ್ದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗೆ ಸುರ್ಜೇವಾಲ ಅವರೇ ಕಾರಣ, ಅನುದಾನ ಹಂಚಿಕೆ ಮತ್ತು ಕೆಲವು ಮಂತ್ರಿಗಳ ಬಗ್ಗೆ ಶಾಸಕರು ಹೊಂದಿರುವ ಅಪಸ್ವರವನ್ನೇ ಪ್ರಮುಖವಾಗಿಟ್ಟುಕೊಂಡು ಬೆಂಗಳೂರಿಗೆ ಆಗಮಿಸಿದ ಅವರು ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರ ಜೊತೆಗೆ ವೈಯಕ್ತಿಕವಾಗಿ ಮಾತನಾಡುವ ಮೂಲಕ ಗೊಂದಲ ಮೂಡಿಸಿದ್ದಾರೆ.

ಸರ್ಕಾರದ ಕಾರ್ಯವೈಖರಿ ಮಂತ್ರಿಗಳ ಕುರಿತಾಗಿ ಶಾಸಕರ ಅಭಿಪ್ರಾಯ ಕೇಳಿದ ಅವರು, ಇದರ ಜೊತೆಯಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕಾ, ಮುಖ್ಯಮಂತ್ರಿ ಬದಲಾಯಿಸಿದರೆ ನಿಮ್ಮ ನಿಲುವು ಏನಾಗಲಿದೆ ಎಂಬ ಪ್ರಶ್ನೆ ಕೇಳುವ ಮೂಲಕ ಅನಗತ್ಯ ಗೊಂದಲ ಮೂಡಿಸಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತ ಬಣ ಆರೋಪಿಸಿದೆ. 

ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ವಿಚಾರವಾಗಿ ಗೊಂದಲ ಉಂಟಾಗಲು ಇವರ ವರ್ತನೆಯೇ ಕಾರಣವಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಲವು ಕಾರಣಗಳ ಮೂಲಕ ಇವರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹೀಗಾಗಿ ಇವರನ್ನು ಬದಲಾಯಿಸಿ ಸರ್ಕಾರ ಮತ್ತು ಪಕ್ಷದ ನಡುವೆ ಉತ್ತಮ ಸಮನ್ವಯ ಸಾಧಿಸುವ ಮೂಲಕ ಪಕ್ಷ ಸಂಘಟನೆಗೆ ಶ್ರಮಿಸುವ ವ್ಯಕ್ತಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave a Reply