ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ಮತ್ತು ಪಕ್ಷದ ವಿದ್ಯಮಾನಗಳ ಕುರಿತಾಗಿ ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಸುಧಾರಣೆಗೆ ಒತ್ತು ನೀಡಬೇಕಾಗಿದೆ. ಇದಕ್ಕಾಗಿ ಸಂಪುಟ ಪುನಾರಚನೆಗೆ ತಾವು ಚಿಂತನೆ ನಡೆಸಿದ್ದು, ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ದೆಹಲಿಯ 10 ಜನಪತ್ ನಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹೈಕಮಾಂಡ್ ನ ಪ್ರಮುಖ ನಾಯಕರ ಜೊತೆ ಸಭೆ ನಡೆಸಿದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಹಿನ್ನಡೆ ಅನುಭವಿಸಿರುವ ಕುರಿತಂತೆ ಸಮಾಲೋಚನೆ ನಡೆಸಿದ ಈ ಸಭೆಯಲ್ಲಿ, ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಪಕ್ಷ ಸಂಘಟನೆ ಸೊರಗಬಾರದು. ಸರ್ಕಾರ ಮತ್ತು ಪಕ್ಷದ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದು ಹೇಳಿದ ನಾಯಕರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಕೇಳಿ ಬಂದಿರುವ ಒತ್ತಾಯದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.
ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಂತ್ರಿಗಳ ಕಾರ್ಯವೈಖರಿ ಕುರಿತಂತೆ ತಾವು ಪ್ರತ್ಯೇಕವಾಗಿ ಪಡೆದುಕೊಂಡಿರುವ ವರದಿ ಹಾಗೂ ಸುರ್ಜೇವಾಲ ಅವರು ನೀಡಿರುವ ವರದಿಯನ್ನು ಇಟ್ಟುಕೊಂಡು ಸರ್ಕಾರದ ವರ್ಚಸ್ಸು ವೃದ್ಧಿಸುವ ಸಂಬಂಧ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ನೀಡಿರುವುದಾಗಿ ಗೊತ್ತಾಗಿದೆ.
ಈ ಚರ್ಚೆಯ ವೇಳೆ ನಾಯಕತ್ವ ಬದಲಾವಣೆ ಕುರಿತಾಗಿ ಮಾತುಕತೆ ನಡೆದಿದ್ದು, ಸಿದ್ದರಾಮಯ್ಯ ಅವರು ಪಕ್ಷದ ಬಹುತೇಕ ಎಲ್ಲಾ ಶಾಸಕರು ತಮ್ಮ ಪರವಾಗಿ ನಿಂತಿದ್ದಾರೆ. ನಾಯಕತ್ವ ಬದಲಾವಣೆ ಕುರಿತಾಗಿ ಎಲ್ಲೋ ಒಬ್ಬಿಬ್ಬರು ಅಪಸ್ವರ ವ್ಯಕ್ತಪಡಿಸಿರುವುದನ್ನು ಬಿಟ್ಟರೆ ಯಾವುದೇ ಗೊಂದಲ ಇಲ್ಲ. ಹೀಗಾಗಿ ತಾವು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬಾರದಂತೆ ಕೆಲಸ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
ಸರ್ಕಾರಕ್ಕೆ ಹೊಸ ವರ್ಚಸ್ಸು ನೀಡಬೇಕಾಗಿದೆ. ಹೀಗಾಗಿ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಪುನರ್ ರಚನೆ ಮಾಡಲು ಚಿಂತನೆ ನಡೆಸಿದ್ದೇನೆ. ಇದಕ್ಕೆ ಹೈಕಮಾಂಡ್ ಅವಕಾಶ ನೀಡಿದರೆ ಸರ್ಕಾರದಲ್ಲಿ ಹೊಸ ಮುಖಗಳಿಗೆ ಸ್ಥಾನ ನೀಡುವ ಮೂಲಕ ವರ್ಚಸ್ಸು ವೃದ್ಧಿಗೆ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.




